ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಮಾನವನೂ ಇಲ್ಲ , ಏನೂ ಇಲ್ಲ - ದೆಹಲಿ ಡಿಐಜಿ

By Staff
|
Google Oneindia Kannada News

*ಪ್ರಿಯಾಂಕ ಖನ್ನ

ನವದೆಹಲಿ : ರಾಜಧಾನಿ ಇವತ್ತು ಅಕ್ಷರಶಃ ಆತಂಕದ ಮುದ್ದೆ. ಒಂದೊಂದು ಕ್ಷಣವೂ ಯುಗವಾಗಿ ಪರಿಣಮಿಸುತ್ತಿದೆ. ಪೊಲೀಸರ ಗಸ್ತು, ಜನರ ಬೇಸ್ತು. ಮಂಗಮಾನವ (ಮಂಕಿ ಮ್ಯಾನ್‌) ಇದ್ದಾನೋ ಇಲ್ಲವೋ, ಆತನಿದ್ದಾನೆಂಬ ಭಯವೇ ಒಬ್ಬನನ್ನು ಬಲಿ ತೆಗೆದುಕೊಂಡಿದೆ !

ಹತ್ತೊಂಬತ್ತರ ಯುವಕ ರಾಮ್‌ ಪ್ರಕಾಶ್‌ ಎಂಬುವನೇ ಈ ನತದೃಷ್ಟ. ಕಳೆದೊಂದು ವಾರದಿಂದ ಮಂಗಮಾನವ ತೆಗೆದುಕೊಂಡಿದ್ದಾನೆ ಎನ್ನಲಾದ 3ನೇ ಬಲಿ ಇದು. ಬುಧವಾರ ರಾತ್ರಿ ಮನೆಯ ಛಾವಣಿ ಮೇಲೆ ರಾಮ್‌ ಪ್ರಕಾಶ್‌ ಮಲಗಿದ್ದ. ತನ್ನ ಬಟ್ಟೆಯನ್ನು ಯಾರೋ ಎಳೆದಂತಾಯಿತಂತೆ. ಛಾವಣಿ ಮೇಲಿಂದ ಧುತ್ತನೆ ಕೆಳಗೆ ಬಿದ್ದ ರಾಮ್‌ ಹೆಣವಾಗಿದ್ದ. ದೇಹ ಗಾಯದಿಂದ ಜರ್ಝರಿತಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಸೋಮವಾರ ಗರ್ಭಿಣಿ ಹೆಂಗಸೊಬ್ಬರು ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಅದರ ಮರುದಿನವೇ ಮತ್ತೊಬ್ಬನ ಅನಿರೀಕ್ಷಿತ ಸಾವು ಸಂಭವಿಸಿತು. ಜನ ಹೇಳುವ ಪ್ರಕಾರ ಇದೆಲ್ಲಾ ಮಂಗಮಾನವನ ದಾಳಿ. ಪೊಲೀಸರಿಗೆ ಮಂಗಮಾನವನ ದಾಳಿ ಬಗ್ಗೆ ಪ್ರವಾಹೋಪಾದಿಯಲ್ಲಿ ದೂರವಾಣಿ ಕರೆಗಳು ಹರಿದುಬರುತ್ತಿವೆ. ವಿಶೇಷವಾಗಿ, ದೆಹಲಿಯ ಪಶ್ಚಿಮ ಭಾಗದ ದಿನಗೂಲಿಗಳು ಹಾಗೂ ಬಡಬಗ್ಗರು ಮಂಗಮಾನವನಿಂದ ಹೆಚ್ಚು ಹೊಡೆತ ತಿಂದ ವರದಿಗಳು ಪೊಲೀಸರ ಗಮನಕ್ಕೆ ಬಂದಿದೆ.

ಆತಂಕ, ಧಾವಂತ : ಮಂಗಮಾನವ ಮನುಷ್ಯನೋ, ಪ್ರಾಣಿಯೋ ಎಂಬ ಜಿಜ್ಞಾಸೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸರು ದೆಹಲಿಯ ಪೂರ್ವ ಭಾಗದಲ್ಲಿ ಗಸ್ತು ಸುತ್ತುತ್ತಿದ್ದಾರೆ. ಮಂಗಮಾನವನ ಬಗ್ಗೆ ಸುಳಿವು ಕೊಟ್ಟವರಿಗೆ 50 ಸಾವಿರ ರುಪಾಯಿ ಬಹುಮಾನ ಕೊಡುವುದಾಗಿಯೂ ಗುರುವಾರ ಪ್ರಕಟಿಸಲಾಗಿದೆ. ಈ ನಡುವೆ ಒಬ್ಬ ದಾರಿಹೋಕನನ್ನು ಮಂಗಮಾನವ ಎಂದು ಪೊಲೀಸರು ಬಂಧಿಸಿದ ಘಟನೆಯೂ ವರದಿಯಾಗಿದೆ !

ನಗರದ ಸ್ಯಾಟಲೈಟ್‌ ಪಟ್ಟಣ ಘಜಿಯಾಬಾದ್‌ನಲ್ಲೇ ಮಂಗಮಾನವ ಮೊದಲು ಕಾಣಿಸಿಕೊಂಡದ್ದು. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಸದಾ ಮನೆಯಲ್ಲೇ ಇರುವಂತೆ ಪೊಲೀಸರು ಜನರಿಗೆ ಸೂಚಿಸಿದ್ದಾರೆ. ಅಂಗಡಿ- ಮುಂಗಟ್ಟುಗಳು 8 ಗಂಟೆಗೇ ಬೀಗ ಹಾಕುತ್ತಿವೆ. ಜನರೂ ದೊಣ್ಣೆ- ಟಾರ್ಚುಗಳನ್ನು ಹಿಡಿದು ಹಿಂಡುಹಿಂಡಾಗಿ ರಾತ್ರಿ ಹೊತ್ತು ಸುತ್ತಾಡುವ ದೃಶ್ಯ ಸಾಮಾನ್ಯವಾಗಿದೆ. ಜಗತ್ತಿನ ವಿವಿಧ ಪತ್ರಿಕೆಗಳು, ಬಿಬಿಸಿಯಂಥಾ ಚಾನೆಲ್‌ಗಳಲ್ಲಿ ಈ ಸುದ್ದಿಗೆ ಪ್ರಾಧಾನ್ಯತೆ ಸಿಕ್ಕಿದೆ. ಜೊತೆಗೆ ವದಂತಿಗಳೂ ಹೆಚ್ಚಾಗುತ್ತಿವೆ.

ಎಲ್ಲಾ ಸುಳ್ಳು, ಬರೀ ಜೊಳ್ಳು : ಪಯನೀರ್‌ ಪತ್ರಿಕೆಯ ಶುಕ್ರವಾರದ ಸಂಚಿಕೆಯಲ್ಲಿ ಘಜಿಯಾಬಾದ್‌ನ ಇಬ್ಬರು ಮಂಗಮಾನವನ ಕಾಟಕ್ಕೆ ಬಲಿಯಾಗಿದ್ದಾರೆ ಎಂದು ಪ್ರಕಟಿಸಲಾಗಿದೆ. ಡಿಐಜಿ ಅರವಿಂದ್‌ ಕುಮಾರ್‌ ದೂರವಾಣಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿ, ಇವೆಲ್ಲಾ ಶತಸುಳ್ಳು. ಅಪಘಾತ, ಕೊಲೆಗಳು ಏನೇ ಸಂಭವಿಸಿದರೂ ಜನ ಅದೆಲ್ಲವೂ ಸೋ ಕಾಲ್ಡ್‌ ಮಂಗಮಾನವನ ಕೆಲಸ ಎಂದು ಪುಕಾರೆಬ್ಬಿಸುತ್ತಿದ್ದಾರೆ ಎಂದಿದ್ದಾರೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X