Get Updates
Get notified of breaking news, exclusive insights, and must-see stories!

ಬೆಂಗ್ಳೂರಲ್ಲಿ ಭಾರಿ ಭೂ ಕಬಳಿಕೆ ಪತ್ತೆ : 153 ಅಧಿಕಾರಿಗಳು ಸಸ್ಪೆಂಡ್‌

ಬೆಂಗಳೂರು : ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸರಕಾರಕ್ಕೆ ಸೇರಿದ ಗೋಮಾಳ, ಶ್ಮಶಾನವೇ ಮೊದಲಾದ 4836 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಸಹಕಾರ ನೀಡಿದ (ಷಾಮೀಲಾದ) ಆರೋಪದ ಮೇಲೆ ಇಬ್ಬರು ವಿಶೇಷ ತಹಶೀಲ್ದಾರ್‌, ನಾಲ್ವರು ಉಪ ತಹಶೀಲ್ದಾರರು, ಓರ್ವ ತಹಶೀಲ್ದಾರ್‌, ಶಿರಸ್ತೇದಾರ್‌, ಮೂವರು ರೆವಿನ್ಯು ಇನ್ಸ್‌ಪೆಕ್ಟರ್ಸ್‌, ಹತ್ತು ಜನ ಗ್ರಾಮ ಲೆಕ್ಕಿಗರೂ ಸೇರಿದಂತೆ ಒಟ್ಟು 153 ಮಂದಿ ಸರಕಾರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ.

ಈ ವಿಷಯವನ್ನು ರಾಜ್ಯದ ಕಂದಾಯ ಸಚಿವ ಎಚ್‌.ಸಿ. ಶ್ರೀಕಂಠಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭೂಕಬಳಿಕೆಗೆ ಸಹಕಾರ ನೀಡಿದ್ದೇ ಅಲ್ಲದೆ, ಕೃಷಿ ಭೂಮಿಯನ್ನು ಇತರ ಉದ್ದೇಶಕ್ಕೆ ಪರಿವರ್ತನೆಗೊಳಿಸದೆ, ಸರಕಾರದ ಬೊಕ್ಕಸಕ್ಕೆ ಕೊಟ್ಯಂತರ ರುಪಾಯಿ ನಷ್ಟ ಉಂಟು ಮಾಡಿರುವ 1374 ಪ್ರಕರಣಗಳನ್ನೂ ಪತ್ತೆಹಚ್ಚಿ, ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದೂ ಸಚಿವರು ತಿಳಿಸಿದರು.

ಭೂಕಬಳಿಕೆಯನ್ನು ತಡೆಯಲು ಹಾಗೂ ಭೂ ಕಬಳಿಕೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಪರಿವರ್ತಿಸಲು ಭೂ ಕಂದಾಯ ಕಾಯಿದೆಗೇ ತಿದ್ದುಪಡಿ ತರಲಾಗುವುದು. ಭೂ ಕಬಳಿಗೆ ಹತ್ತಿಕ್ಕಲು ಪ್ರತಿ ವಿಭಾಗಾಧಿಕಾರಿ ಮಟ್ಟದಲ್ಲಿ ವಿಶೇಷ ದಳ ರಚಿಸಲಾಗುವುದು ಎಂದೂ ಅವರು ಹೇಳಿದರು.

ಕೋಟ್ಯಂತರ ರುಪಾಯಿ ನಷ್ಟ : ಅಧಿಕಾರಿಗಳು ಸುಮಾರು 15,373 ಎಕರೆ ವಿಸ್ತೀರ್ಣದ ಭೂ ಪರಿವರ್ತನೆಗೆ ಅಕ್ರಮವಾಗಿ ಅವಕಾಶ ಮಾಡಿಕೊಟ್ಟಿರುವುದು ಪತ್ತೆ ಆಗಿದೆ ಎಂದೂ ಅವರು ವಿವರಿಸಿದರು. ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಸರಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ. ಈ ಅಕ್ರಮ ಪತ್ತೆ ಕಾರ್ಯದಲ್ಲಿ 50 ಸರ್ವೇಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.

ಸರಕಾರಿ ಭೂಮಿ ಕಬಳಿಸಿದ್ದ 45 ಪ್ರಕರಣಗಳಲ್ಲಿ ಭೂ ಮಾಲಿಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿದೆ. ಬೆಂಗಳೂರು - ಮೈಸೂರು ರಸ್ತೆಯ ಬಿಡದಿ ಸಮೀಪ ಇರುವ ಗಾಲ್ಫ್‌ ಕ್ಲಬ್‌ ಒಂದು ಸುಮಾರು 208 ಎಕರೆ ಭೂಮಿ ಕಬಳಸಿದೆ. ಆ ಕ್ಲಬ್‌ ಮಾಲಿಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದನ್ನು ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಗಣ್ಯರ ಷಾಮೀಲು : ನಗರದ ಹಲವು ರೆಸಾರ್ಟ್‌ಗಳು, ಅಪಾರ್ಟ್‌ಮೆಂಟ್‌ ಮಾಲಿಕರು ಭೂಮಿ ಕಬಳಿಸಿದ್ದಾರೆ. ಇದಕ್ಕೆ ಅಧಿಕಾರಿಗಳಷ್ಟೇ ಅಲ್ಲದೆ ಗಣ್ಯವ್ಯಕ್ತಿಗಳೂ ಸಹಕಾರ ನೀಡಿದ್ದಾರೆ, ಈ ಸಂಬಂಧ ವಿವರ ಶೇಖರಿಸಲಾಗುತ್ತಿದ್ದು, ಅವರ ಹೆಸರನ್ನು ಬಹಿರಂಗಪಡಿಸಲು ಇದು ಸೂಕ್ತ ಕಾಲವಲ್ಲ ಎಂದೂ ಶ್ರೀಕಂಠಯ್ಯ ಹೇಳಿದರು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರು ಎಷ್ಟೇ ದೊಡ್ಡವರಾದರು, ಸರಕಾರ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಿದೆ ಎಂದರು.

ಕೃಷಿ ಭೂಮಿಯನ್ನು ವಾಣಿಜ್ಯ ಹಾಗೂ ವಸತಿ ಉದ್ದೇಶಗಳಿಗೆ ಪರಿವರ್ತಸದೇ, ನಿಗದಿತ ಶುಲ್ಕ ಸ್ವೀಕರಿಸದೇ, ಅಲ್ಲಿ ಕಟ್ಟಡ ಸಮುಚ್ಚಯ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಹೊಸೂರು ರಸ್ತೆಯಲ್ಲಿ ಇಂತಹ ಹತ್ತಾರು ಪ್ರಕರಣಗಳಿವೆ. ಇದರಿಂದ ರಾಜ್ಯದ ಖಜಾನೆಗೆ ಕೋಟಿಗಟ್ಟಲೆ ನಷ್ಟ ಸಂಭವಿಸಿದೆ ಎಂದು ಹೇಳಿದರು.

ಪ್ರತ್ಯೇಕ ಕಾನೂನು ಘಟಕ : ಈ ಸಂದರ್ಭದಲ್ಲಿ ಹಾಜರಿದ್ದ ಬೆಂಗಳೂರು ವಿಭಾಗಾಧಿಕಾರಿ ಟಿ. ತಿಮ್ಮೇಗೌಡ ಅವರು, ಭೂ ಕಬಳಿಕೆ ತಕರಾರುಗಳನ್ನು ಇತ್ಯರ್ಥಪಡಿಸಲು ಪ್ರತ್ಯೇಕ ಕಾನೂನು ಘಟಕವನ್ನೇ ಸ್ಥಾಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಶ್ರೀಕಂಠಯ್ಯ ದನಿಗೂಡಿಸಿದರು. ಕೇವಲ ಬೆಂಗಳೂರು ಕಂದಾಯ ವ್ಯಾಪ್ತಿಯಲ್ಲೇ ಇಷ್ಟಾದರೆ? ರಾಜ್ಯದಲ್ಲಿ ಇನ್ನೆಷ್ಟು ಸರಕಾರಿ ಭೂಮಿ ಗುಳುಂ ಆಗಿದೆಯೋ ಆ ಭಗವಂತನೇ ಬಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+