Get Updates
Get notified of breaking news, exclusive insights, and must-see stories!

ಹಳೆ ಮೈಸೂರಿಗರಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಂತಾರೆ ಎಚ್ಚೆನ್‌

ಬೆಂಗಳೂರು : ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಇಂಗ್ಲಿಷ್‌ ವ್ಯಾಮೋಹ ಗೊತ್ತೆ? ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯ ಅವರ ಪ್ರಕಾರ ಹಳೇ ಮೈಸೂರಿಗರಿಗೆ. ಹಳೆ ಮೈಸೂರಲ್ಲಿ ಹೆಚ್ಚಾಗಿ ಬೆಂಗಳೂರಿಗರಿಗೆ, ಅದರಲ್ಲೂ ಬಸವನಗುಡಿ ಜನಕ್ಕಂತೂ ಇಂಗ್ಲಿಷ್‌ ಕಂಡ್ರೆ ಅಪಾರ ವ್ಯಾಮೋಹ. ಇವರೆಲ್ಲಾ ಥೇಮ್ಸ್‌ ನದೀಲಿ ಸ್ನಾನಮಾಡಿ, ಇಂಗ್ಲೆಂಡಿಂದಲೇ ಬಂದೋರಂತೆ ಆಡ್ತಾರೆ ಎಂಬುದು ಎಚ್‌.ಎನ್‌. ಅಭಿಪ್ರಾಯ.

ಮಾತೃ ಭಾಷಾ ಶಿಕ್ಷಣ ಸಮಿತಿ ವರದಿ ಜಾರಿ ಎಂಬ ವಿಷಯ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಬಂದೊದಗಿರುವ ದುಸ್ಥಿತಿ ಬಗ್ಗೆ ಮಾತನಾಡಿದ ಎಚ್ಚೆನ್‌, ಹಳೆ ಮೈಸೂರಿಗರನ್ನೂ, ಬಸವನಗುಡಿಯ ಜನರನ್ನೂ ಮಿಗಿಲಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಂ.ಎನ್‌. ವೆಂಕಟಾಚಲಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಪಾಲಕರ ಸ್ವಾರ್ಥ: ಮಕ್ಕಳನ್ನು ಫಾರಿನ್‌ಗೆ ಕಳುಹಿಸಿ, ಹೆಚ್ಚು ಹಣ ಮಾಡಬೇಕು ಎಂಬ ಪಾಲಕರ ಸ್ವಾರ್ಥವೇ ಇಂಗ್ಲಿಷ್‌ ವ್ಯಾಮೋಹಕ್ಕೆ ಕಾರಣ ಎಂಬುದು ಎಚ್ಚೆನ್‌ ಅವರ ಮತ್ತೊಂದು ಅಭಿಪ್ರಾಯ. ಮಾತೃ ಭಾಷೆಯಲ್ಲಿ ಶಿಕ್ಷಣ ಏಕೆ ಎಂಬ ಚರ್ಚೆ ಏಕೆ ಬೇಕು? ಕಳೆದ 40 ವರ್ಷದಿಂದಲೂ ನಾವು ಇದನ್ನು ಕೇಳುತ್ತಿದ್ದೇವೆ, ಮಾತಾಡುತ್ತಿದ್ದೇವೆ, ಚರ್ಚೆ, ಗೋಷ್ಠಿ ನಡೆಸುತ್ತಿದ್ದೇವೆ. ಇದರಿಂದ ಏನೂ ಪ್ರಯೋಜನ ಇಲ್ಲ ಎಂದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಇರಬೇಕು ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯವೂ ಹೌದು. ಆದರೂ ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಕೂಡ ಕನ್ನಡ ಮಾತಾಡುವುದು ಅವಮಾನ ಎಂದು ತಿಳಿದಿದ್ದಾರೆ ಎಂದು ಎಚ್ಚೆನ್‌ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಸವನಗುಡಿ ನ್ಯಾಷನಲ್‌ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎನ್‌. ವೆಂಕಟಾಚಲಯ್ಯ ಅವರನ್ನು ಶಾಲೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಆಹ್ವಾನಿಸಿದೆ. ಕಾರ್ಯಕ್ರಮಕ್ಕೆ ಬಂದ ನ್ಯಾಯಮೂರ್ತಿಗಳು ಇಂಗ್ಲಿಷ್‌ ಭಾಷಣ ಆರಂಭಿಸಿದರು. ಸಚಿವೆ ಬಿ.ಟಿ. ಲಲಿತಾ ನಾಯಕ್‌ ಇದನ್ನು ಪ್ರತಿಭಟಿಸಿದರು.

ಸರಿ, ಕೊನೆಯಲ್ಲಿ ಕನ್ನಡದಲ್ಲೇ ಮಾತನಾಡುವೆ ಎಂದ ನ್ಯಾಯಮೂರ್ತಿಗಳೇ ಮಾತು ತಪ್ಪಿದರು. ಇಂಗ್ಲಿಷ್‌ನಲ್ಲೇ ಮಾತಾಡಿ ಮುಗಿಸಿದರು. ಹೀಗಾದರೆ ಕನ್ನಡ ಬೆಳೆಯುವುದು ಹೇಗೆ? ಎಂದು ಎಚ್ಚೆನ್‌ ಪ್ರಶ್ನಿಸಿದರು. ಪಾಪ್‌ ಷೋ ನಡೆದರೆ, ಜನ ನುಗ್ಗಿ ಬರ್ತಾರೆ, ಒಳ್ಳೆ ಶಾಸ್ತ್ರೀಯ ಸಂಗೀತ, ನೃತ್ಯ, ಸಾಹಿತ್ಯ ಗೋಷ್ಠಿಗೆ ಜನರೇ ಬರೋಲ್ಲ ಎಂದು ತಮ್ಮ ನೋವು ಪ್ರಕಟಿಸಿದರು.

ಸಂವಿಧಾನಕ್ಕೆ ತಿದ್ದುಪಡಿ : ಸಾಫ್ಟ್‌ವೇರ್‌ ತಂತ್ರಜ್ಞರಾಗೋರು ಇಂಗ್ಲಿಷ್‌ ಕಲೀಲಿ, ಬೇಡ ಎಂದೋರು ಯಾರು, ನಾವು ಕೇಳ್ತಿರೋದು 7ನೇ ತರಗತಿ ತನಕ ಕನ್ನಡ ಭಾಷೆ ಇರಲಿ, 8ನೇ ಕ್ಲಾಸಿನಿಂದ ಇಂಗ್ಲಿಷ್‌ ಮೀಡಿಯಂನಲ್ಲಿ ಓದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದರು. ಮಾತೃ ಭಾಷಾ ಮಾಧ್ಯಮದ ವಿಷಯ ಬಂದಾಗ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ಇದನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದರು. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ಕೊಟ್ಟಾಗ ಮಾತ್ರ ಸಾಧ್ಯ ಎಂದೂ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+