Get Updates
Get notified of breaking news, exclusive insights, and must-see stories!

96 ಚಕ್ರದ ಟ್ರಾಲಿಯಿಂದ ನೆಲಕ್ಕೆ ಉರುಳಿತು ಹನುಮ ಶಿಲೆ

ಹಾಸನ : ವಿಘ್ನೕಶ್ವರನ ಮದುವೆಗೇ ನೂರೆಂಟು ವಿಘ್ನವಂತೆ. ಈಗ ಶ್ರೀರಾಮ ಭಕ್ತನಾದ ಆಂಜನೇಯನಿಗೂ ನೂರೆಂಟು ವಿಘ್ನಗಳು ಕಾಡುತ್ತಿವೆ. ಹಾಸನ ತಾಲೂಕಿನ ಮಕುರ್ಲಿ ಗ್ರಾಮದ ಕ್ವಾರಿಯಿಂದ ತಮಿಳುನಾಡಿನ ತಿರುವಳ್ಳೂರಿಗೆ ಆಂಜನೇಯನ ಪಂಚಮುಖದ ವಿಗ್ರಹವಾಗಲು ಹೊರಟಿರುವ ಏಕ ಶಿಲೆ ಸೋಮವಾರ ಟ್ರಾಲಿಯಿಂದ ಕೆಳಕ್ಕುರುಳಿದೆ.

ಹಲಸಿನಹಳ್ಳಿ ಕ್ರಾಸ್‌ಬಳಿಯಿಂದ ಕದಲಿದ 96 ಚಕ್ರಗಳ ಹೈಡ್ರಾಲಿಕ್‌ ಟ್ರಾಲಿ ಚನ್ನರಾಯಪಟ್ಟಣದತ್ತ ತೆರಳುವ ಮಾರ್ಗದಲ್ಲಿ, ಹಿಂದಕ್ಕೆ ಚಲಿಸುತ್ತಿದ್ದಾಗ, ಚಕ್ರಗಳು ಒಂದು ಪಾರ್ಶ್ವಕ್ಕೆ ವಾಲಿದ ಕಾರಣ ಟ್ರಾಲಿಯ ಮೇಲಿದ್ದ ಮರದ ದಿಮ್ಮಿಗಳು ಮುರಿದು ಹನುಮ ಶಿಲೆ ನೆಲಕ್ಕುರುಳಿತು. ಕೆಳಕ್ಕೆ ಬಿದ್ದಿರುವ ಈ ಬೃಹತ್‌ ಶಿಲೆಯನ್ನು ಮತ್ತೆ ಟ್ರಾಲಿಯ ಮೇಲೆ ಕೂರಿಸಲು ಕನಿಷ್ಠ 2 ತಿಂಗಳಾದರೂ ಬೇಕು.

ತಿರುವಳ್ಳೂರಿನ ದೇವಾಲಯದಲ್ಲಿ ಪಂಚಮುಖಿ ಆಂಜನೇಯನ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ದೇವಸ್ಥಾನ ಟ್ರಸ್ಟ್‌ ಹಾಸನ ಬಳಿಯ ಮರ್ಕುಲಿ ಗ್ರಾಮದ ಕ್ವಾರಿಯಿಂದ ವಿಗ್ರಹಕ್ಕಾಗಿ ತರಿಸಿಕೊಳ್ಳುತ್ತಿರುವ ಈ ಬೃಹತ್‌ ಏಕಶಿಲೆಯ ಸಾಗಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸುಮಾರು ಎರಡು ತಿಂಗಳಿನಿಂದಲೂ ನಡೆಯುತ್ತಿರುವ ಈ ಶಿಲೆಯ ಸಾಗಣೆ ಪ್ರಯತ್ನಕ್ಕೆ ಒಂದಿಲ್ಲೊಂದು ವಿಘ್ನಗಳು ಬರುತ್ತಿವೆ. ಕ್ವಾರಿಯಿಂದ ಒಂದೆರಡು ಕಿ.ಮೀಟರ್‌ ಮಾತ್ರ ಚಲಿಸಿರುವ ಈ ಶಿಲೆ ಹಲಸಿನಹಳ್ಳಿ ಕ್ರಾಸ್‌ ಬಳಿ ನಿಂತು ತಿಂಗಳುಗಳೇ ಕಳೆದಿತ್ತು. ಕಲ್ಲು, ಹನಮನ ಮೂರ್ತಿಯಾಗುವ ಮೊದಲೇ ಅದಕ್ಕೆ ನಾಲ್ಕೂ ಕಡೆ ಮೂರು ನಾಮ ಬರೆದು, ಸಾವಿರಾರು ಭಕ್ತರು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದರು. ಒಂದರ್ಥದಲ್ಲಿ ಇದೊಂದು ಪುಣ್ಯಕ್ಷೇತ್ರವೇ ಆಗಿ ಹೋಗಿತ್ತು.

ಹೊಂಗೆರೆ ಗ್ರಾಮದ ಬಳಿ ರಸ್ತೆ ಚಿಕ್ಕದಾಗಿರುವ ಕಾರಣ, ಟ್ರಾಲಿ ಮುಂದೆ ಸಾಗಲು ಕನಿಷ್ಠ ನಾಲ್ಕೈದು ಮನೆಯನ್ನಾದರೂ ಒಡೆಯಬೇಕು. ಇದಕ್ಕಾಗಿ ದೇವಾಲಯ ಟ್ರಸ್ಟ್‌ ಮನೆಯಾಂದಕ್ಕೆ 50 ಸಾವಿರ ಪರಿಹಾರ ನೀಡಲು ಸಿದ್ಧವಿತ್ತು. ಮನೆ ಮಾಲಿಕರು 1.5 ಲಕ್ಷ ಪರಿಹಾರಕ್ಕೆ ಒತ್ತಾಯಿಸಿದರು. ತಿಂಗಳುಗಳ ಕಾಲ ನಡೆದ ಮಾತುಕತೆ ವಿಫಲವಾದಾಗ, ಬೇರೆ ಮಾರ್ಗದಲ್ಲಿ ಶಿಲೆ ಸಾಗಿಸುವ ಪ್ರಯತ್ನ ನಡೆಯಿತು.

ಮಳಲಿ, ಕಾರೆಕೆರೆ, ನೊರನಹಳ್ಳಿ, ಆನೆಕೆರೆ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಶಿಲೆ ಸಾಗಿಸಲು ನಿರ್ಧರಿಸಲಾಯಿತು. ಈ ಪ್ರಯತ್ನದಲ್ಲಿ ಹೈಡ್ರಾಲಿಕ್‌ ಟ್ರಾಲಿ ಹಿಂದಕ್ಕೆ ಚಲಿಸಿ ಎರಡು, ಮೂರು ಫರ್ಲಾಂಗ್‌ ದೂರ ಬರುವ ಹೊತ್ತಿಗೆ ಎಡ ಪಾರ್ಶ್ವಕ್ಕೆ ವಾಲಿಕೊಂಡು, ಶಿಲೆಗೆ ಆಧಾರವಾಗಿದ್ದ ಮರದ ದಿಮ್ಮಿಗಳು ಮುರಿದು, ಹನುಮ ಶಿಲೆ ನೆಲಕ್ಕೆ ಉರುಳಿತು.

ಶಿಲೆಯನ್ನು ತಿರುವಳ್ಳೂರಿಗೆ ಸಾಗಿಸಲು ಗೃಹ ಸಚಿವಾಲಯ, ಸಾರಿಗೆ ಸಚಿವಾಲಯ ಅನುಮತಿ ನೀಡಿದೆ. ಭೂ ವಿಜ್ಞಾನ ಇಲಾಖೆಯಿಂದಲೂ ಅನುಮತಿ ಸಿಕ್ಕಿದೆ. ಭೂ ವಿಜ್ಞಾನ ಇಲಾಖೆಗೆ ಶಿಲೆ ಸಾಗಿಸಲು ಒಂದು ವಾರ ಕಾಲದ ಅನುಮತಿ ಮಾತ್ರ ನೀಡುವ ಅಧಿಕಾರ ಇದ್ದು, ಇಲ್ಲಿಂದ ಶಿಲೆ ಸಾಗಿಸಲು ಹೆಚ್ಚು ಸಮಯ ಹಿಡಿಯುವ ಕಾರಣ ವಿಶೇಷ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.

ಒಟ್ಟಿನಲ್ಲಿ ಮೂರ್ತರೂಪ ಪಡೆಯುವ ಮುನ್ನವೇ ಸಹಸ್ರಾರು ಜನರಿಂದ ಪೂಜಿಸಲ್ಪಡುತ್ತಿರುವ ಈ ಶಿಲೆ, ಹನುಮನ ರೂಪ ಪಡೆಯಲು ಅದಿನ್ನೆಷ್ಟು ದಿನ ಬೇಕೋ, ಆ ಶ್ರೀರಾಮನಿಗೇ ಗೊತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+