ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ಭಯದಲ್ಲಿ ಬೀಡಿ ಉದ್ಯಮ

By Staff
|
Google Oneindia Kannada News

*ರಾಜು ಮಹತಿ

ಅಡಿಕೆ ದರ ಬಿದ್ದು ಹೋಗಿ, ಹೆಂಚು ಉದ್ಯಮ ಪಳೆಯುಳಿಕೆಯಾಗುತ್ತಿರುವ ಹಂತದಲ್ಲಿಯೂ ಜಿಲ್ಲೆಯ ಅನೇಕ ಕುಟುಂಬಗಳನ್ನು ಸಾಕುತ್ತಿರುವುದು ಬೀಡಿ ಉದ್ಯಮ. ಗುಡಿ ಕೈಗಾರಿಕೆ ಎನಿಸಿಕೊಂಡಿರುವ ಈ ಉದ್ಯಮದ ಮೇಲೆ ರಾಜ್ಯ ಸರಕಾರ ಶೇ. 2ರ ಪ್ರವೇಶ ತೆರಿಗೆ ಹೇರಲು ಹೊರಟಿರುವುದರಿಂದ ಇಡೀ ಕೈಗಾರಿಕೆಯೇ ಸಾವಿನ ಭೀತಿ ಎದುರಿಸುತ್ತಿದೆ.

ರಾಜ್ಯದಲ್ಲಿ ಒಟ್ಟು 6 ಲಕ್ಷ ಬೀಡಿ ಕಾರ್ಮಿಕರಿದ್ದರೆ, ಅವಿಭಜಿತ ದ.ಕ. ಜಿಲ್ಲೆಯಲ್ಲಿಯೇ ನಾಲ್ಕು ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯ ಆರ್ಥಿಕ ನಕಾಶೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಉದ್ಯಮ ಪ್ರಮುಖ ಪಾತ್ರ ವಹಿಸಿದೆ.

ಬೀಡಿಗೆ ಕಚ್ಚಾವಸ್ತು ತೆಂಡು ಎಲೆ. ಇವುಗಳನ್ನು ದೂರದ ಮಧ್ಯ ಪ್ರದೇಶದಿಂದ ಅಥವಾ ಹರ್ಯಾಣದಿಂದ ತರಬೇಕಾಗುತ್ತದೆ. ಒಂದು ಕಿಲೋ ಎಲೆಯನ್ನು ಮಂಗಳೂರಿಗೆ ತರಲು ಸಾಗಾಣಿಕೆ ವೆಚ್ಚವೇ ನಾಲ್ಕು ರೂಪಾಯಿಗಳಷ್ಟಾತ್ತದೆ ಎಂದು ಮಂಗಳೂರಿನ ಪ್ರಖ್ಯಾತ ಭಾರತ್‌ ಬೀಡೀಸ್‌ನ ಮಾಲಿಕ, ಕರ್ನಾಟಕ ಬೀಡಿ ಕೈಗಾರಿಕೆಗಳ ಸಂಘದ ಪದಾಧಿಕಾರಿಯೂ ಆಗಿರುವ ಬಿ. ಗಣಪತಿ ಪೈ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಕೈಗೆ ಸಿಗುವ ಬೀಡಿ ಹಿಂದಿರುವ ಪ್ರಕ್ರಿಯೆಗಳಿಷ್ಟು

ಒಂದು ಕಿಲೋ ಎಲೆಯಲ್ಲಿ ಶೇಕಡಾ 35 ರಷ್ಟು ಎಲೆ ನಜ್ಜು ಗುಜ್ಜಾಗಿರುತ್ತದೆ. ಉಳಿದುದಷ್ಟೇ ಉಪಯೋಗಕ್ಕೆ ಬರುವುದು. ತೆಂಡು ಎಲೆ, ತಂಬಾಕು ಮತ್ತು ನೂಲುಗಳನ್ನು ಬೀಡಿ ಕಾರ್ಖಾನೆಯಿಂದ ಕಾರ್ಮಿಕರಿಗೆ ಏಜೆಂಟರ ಮೂಲಕ ರವಾನೆಯಾಗುತ್ತದೆ. ಮನೆಯಲ್ಲಿ ಕಾರ್ಮಿಕರು ಕಟ್ಟಿದ ಏಜೆಂಟರ ಮೂಲಕ ಮತ್ತೆ ಕಾರ್ಖಾನೆ ಸೇರುತ್ತದೆ. ಅಲ್ಲಿ ಗುಣಮಟ್ಟ ಪರೀಕ್ಷೆ ನಡೆದ ನಂತರ ಬೀಡಿಯನ್ನು ಶಾಖದಲ್ಲಿ ಬೇಯಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸಿಗಡಿ ಮಾಡುವುದು ಎನ್ನುತ್ತಾರೆ. ಪ್ಯಾಕಿಂಗ್‌ ಆದ ಬೀಡಿಗಳು ಮಾರುಕಟ್ಟೆ ಪ್ರವೇಶಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿನ ಬೀಡಿಗಳಿಗೆ ಹೋಲಿಸಿದರೆ ರಫ್ತಾಗುವ ಬೀಡಿಗಳ ಗಾತ್ರ ದೊಡ್ಡದು. ವಾರ್ಷಿಕ 30 ಕೋಟಿ ರೂಪಾಯಿ ವಿದೇಶೀ ವಿನಿಮಯ ತರುತ್ತದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೀಡಿ ಕಾರ್ಮಿಕರಿಗೆ ಉತ್ತಮ ಕೂಲಿ ಸಿಗುತ್ತದೆ. ಒಂದು ಸಾವಿರ ಬೀಡಿ ಕಟ್ಟಿದರೆ 54 ರೂಪಾಯಿ ಕೈಗೆ ದೊರೆಯುತ್ತದೆ. ಇದೇ ಮಜೂರಿ ಪಶ್ಚಿಮ ಬಂಗಾಳದಲ್ಲಿ 28 ರೂಪಾಯಿ ಮಾತ್ರ ಇರುವುದು.

ಕೇಂದ್ರ ಸರಕಾರ ಈಗಾಗಲೇ ಬೀಡಿ ಮೇಲೆ ಶೇ. 9ರಷ್ಟು ಅಬಕಾರಿ ತೆರಿಗೆ ವಸೂಲಿ ಮಾಡುತ್ತಿದೆ. ಇದರಿಂದ ವಾರ್ಷಿಕ 500 ಕೋಟಿ ರುಪಾಯಿ ತೆರಿಗೆ ಕೇಂದ್ರ ಬೊಕ್ಕಸವನ್ನು ಸೇರುತ್ತಿದೆ.

ಶೇ 2 ತೆರಿಗೆ ವಿಧಿಸಿದರೆ ಸಾಲು ಸಮಸ್ಯೆಗಳು

ಈಗ ರಾಜ್ಯ ಸರ್ಕಾರ ಶೇ.2 ಪ್ರವೇಶ ತೆರಿಗೆ ಜಾರಿ ಮಾಡಲು ಹೊರಟಿದೆ. ಮೇಲ್ನೋಟಕ್ಕೆ ಇದು ಸಣ್ಣ ಮೊತ್ತ ಎನಿಸಿದರೂ ಒಟ್ಟು ಸೇರಿಸಿದಾಗ ಬೀಡಿ ಕಾರ್ಖಾನೆ ಮಾಲಕರು ತಿಂಗಳಿಗೆ ಕೋಟ್ಯಂತರ ರುಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನಕ್ಕೆ 2 ಕೋಟಿ ಬೀಡಿಗಳು ಅಧಿಕೃತವಾಗಿ ತಯಾರಾಗುತ್ತಿವೆ. ಅನಧಿಕೃತವಾಗಿ ಇಷ್ಟೇ ಸಂಖ್ಯೆಯ ಬೀಡಿಗಳು ತಯಾರಾಗುತ್ತಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಉತ್ಪಾದನಾ ವೆಚ್ಚ ಅಧಿಕ. ಅವರು 2 ರು.ಗೆ ಬೀಡಿ ಮಾರಬಲ್ಲವರಾದರೆ, ನಾವು 4 ರುಪಾಯಿಗೆ ಮಾರಬೇಕಾಗುತ್ತದೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಮಗೆ ಇದು ಹೊಡೆತ ನೀಡುತ್ತದೆ ಎನ್ನುತ್ತಾರೆ ಬೀಡಿ ಮಾಲಕರು.

ರಾಜ್ಯ ಸರ್ಕಾರ ತೆರಿಗೆಗೆ ಪಟ್ಟು ಹಿಡಿದರೆ, ಪ್ರಖ್ಯಾತ ಮಂಗಳೂರು ಬೀಡಿ ತಯಾರಿಕಾ ಕಂಪನಿಗಳು ಮುಚ್ಚುವುದು ಖಚಿತ. ಕೇರಳದ ಬೀಡಿ ಉದ್ಯಮ ಮುಚ್ಚಿದೆ. ನಾವೂ ಮುಚ್ಚಿ ಬೇರೆ ರಾಜ್ಯಗಳಿಗೆ ಹೋಗುವುದು ಅನಿವಾರ್ಯವೆನ್ನುತ್ತಾರೆ ಗಣಪತಿ ಪೈ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X