ರಾಜ್ಯದ ಅಲ್ಲಲ್ಲಿ ಮಳೆ, ತಂಪಾಯ್ತು ಇಳೆ
ಬೆಂಗಳೂರು : ಭಾನುವಾರ ಸಂಜೆ ಹಾಸನದಲ್ಲಿ ಸುಮಾರು 45 ನಿಮಿಷಗಳ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಕಾದಿದ್ದ ಇಳೆ ತಣ್ಣಗಾಯಿತು. ಸಂಜೆ 4 ಗಂಟೆಗೆ ಆರಂಭವಾದ ಮಳೆ 4.45ರವರೆಗೂ ಎಡೆಬಿಡದೆ ಸುರಿಯಿತು. ಈ ಮಧ್ಯೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆಗಳಲ್ಲೂ ಮಳೆ ಬಿದ್ದಿದೆ.
ಬಂಗಾರುಪೇಟೆಯಲ್ಲಿ 3 ಸೆಂಟಿ ಮೀಟರ್, ಪಣಂಬೂರು, ಕೆ.ಜಿ.ಎಫ್ ಹಾಗೂ ಚಿಂತಾಮಣಿಯಲ್ಲಿ 1 ಸೆಂಟಿ ಮೀಟರ್ ಮಳೆ ಆಗಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ದಿನದ ಉಷ್ಣಾಂಶ ಏರಿತ್ತು. ರಾಜ್ಯದ ಅತಿ ಹೆಚ್ಚು ತಾಪಮಾನ ಗುಲ್ಬರ್ಗಾದಲ್ಲಿ (43 ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು.
ಬೆಂಗಳೂರಿನಲ್ಲಿರುವ ಕೇಂದ್ರ ಹವಾಮಾನ ವೀಕ್ಷಣಾಲಯದ ಮುನ್ಸೂಚನೆಯ ರೀತ್ಯ ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ತುಂತುರು ಮಳೆ ಬೀಳಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ದಿನದ ಉಷ್ಣಾಂಶ 33 ಡಿಗ್ರಿ ತಲುಪಲಿದೆ.
ಅಂದ ಹಾಗೆ ಭಾನುವಾರ ಸಂಜೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಚೆನ್ನಾಗಿಯೇ ಮಳೆ ಆಯ್ತು. ಇನ್ನು ಕೆಲವು ಬಡಾವಣೆಗಳಲ್ಲಿ ಮಳೆಯ ಸುಳಿವೇ ಇರಲಿಲ್ಲ. ಸೋಮವಾರ ಬೆಳಗ್ಗೆ 9 ಗಂಟೆಯವರೆಗೂ ಮೋಡ ಮುಸುಕಿತ್ತು. ಚಳಿಯ ಅನುಭವವೂ ಆಯಿತು. ಕುಳಿರ್ಗಾಳಿ ಬೀಸುತ್ತಿತ್ತು. ಭಾಗಶಃ ಮೋಡ ಕವಿದು, ಮಳೆಯ ಸೂಚನೆ ನೀಡಿತ್ತು. ಮಧ್ಯಾಹ್ನ ಮೊಡದ ಮರೆಯಿಂದ ಸೂರ್ಯ ಸಣ್ಣಗೆ ಸುಡುತ್ತಿದ್ದ.