Get Updates
Get notified of breaking news, exclusive insights, and must-see stories!

‘ನಾನೊಬ್ಬ ಐಟಿ ತಜ್ಞ, ಪ್ಲೀಸ್‌ ಕೆಲಸ ಕೊಡಿ’

ಬೆಂಗಳೂರು : ತಿಂಗಳ ಹಿಂದೆ ಬಹು ರಾಷ್ಟ್ರೀಯ ಕಂಪನಿಯಾಂದು ನಗರದಲ್ಲಿ 20 ಹುದ್ದೆಗಳ ಭರ್ತಿಗಾಗಿ ಸಂದರ್ಶನ ಕೋರಿ ಜಾಹೀರಾತು ಪ್ರಕಟಿಸಿತ್ತು. ಸಂದರ್ಶನಕ್ಕೆ ಅರ್ಜಿ ಗುಜರಾಯಿಸಿದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಸಂಖ್ಯೆ ಎಷ್ಟು ಗೊತ್ತೆ ? 6000! ಇನ್ನೊಂದು ಕಂಪನಿ ಕಳೆದ ಮಾರ್ಚ್‌ನಲ್ಲಿ 13 ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬೇಕೆಂದು ಪ್ರಕಟಿಸಿತು. ಸಂದರ್ಶನಕ್ಕೆ 1 ಸಾವಿರ ಪರಿಣತರು ನುಗ್ಗಿ ಬಂದರು.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಮೊನ್ನೆ ಮೊನ್ನೆ ತನಕ ಕೈತುಂಬಾ ಅವಕಾಶಗಳಿದ್ದ ಪರಿಸ್ಥಿತಿ ಇವತ್ತು ತದ್ವಿರುದ್ಧವಾಗಿದೆ. ಇದಕ್ಕೆ ಕಾರಣ- ಅಮೆರಿಕಾದ ಅನೇಕ ಕಂಪನಿಗಳು ಸಾಫ್ಟ್‌ವೇರ್‌ ತಜ್ಞರನ್ನು ಮನೆಗೆ ಕಳುಹಿಸಿರುವುದು, ಮಾರುಕಟ್ಟೆಗೆ ಅಮೆರಿಕವನ್ನೇ ನೆಚ್ಚಿಕೊಂಡಿರುವ ಭಾರತದ ಕಂಪನಿಗಳು ಭರ್ತಿ ಪ್ರಕ್ರಿಯೆಗೆ ಪೂರ್ಣವಿರಾಮ ಹಾಕಿರುವುದು.

ಉದ್ಯೋಗ ಕೊಡಿಸುವ ಏಜೆನ್ಸಿಯಾಂದರ ಪ್ರಕಾರ, ಅನೇಕ ಡಾಟ್‌ಕಾಂಗಳು ಬಾಗಿಲು ಮುಚ್ಚಿರುವುದು ಹಾಗೂ 10 ಸಾವಿರದಿಂದ 40 ಸಾವಿರ ಭಾರತೀಯರು ಅಮೆರಿಕದಿಂದ ಮರಳಿರುವುದು ಭಾರತದ ಐಟಿ ಕ್ಷೇತ್ರದಲ್ಲಿ ಉದ್ಯೋಗ ಬೇಟೆಯ ಹೊಸ ತುರುಸು ಹುಟ್ಟು ಹಾಕಿದೆ. ಕಳೆದ 3 ತಿಂಗಳಲ್ಲಿ ಕೆಲಸ ಹುಡುಕುತ್ತಿರುವ ಐಟಿ ಪರಿಣತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ನನಗೆ ತಿಳಿದಿರುವಂತೆ ಈ ಸಂಖ್ಯೆ ಪ್ರತಿಶತ 30ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಸಿಆರ್‌ವಿ ಕನ್ಸಲ್ಟೆಂಟ್ಸ್‌ನ ಸಹ ವ್ಯವಸ್ಥಾಪಕ ಬಿ.ಆರ್‌.ಶೇಖರ್‌.

ಪ್ರತಿಶತ 80 ಪರಿಣತರ ಸ್ಥಿತಿ ತ್ರಿಶಂಕು : ಶೇಖರ್‌ ಹೇಳುವಂತೆ, ಕೆಲಸ ಹುಡುಕುತ್ತಿರುವ ಮಂದಿಯ ಸರಾಸರಿ ವಯಸ್ಸು 26 ವರ್ಷ. ಈ ಪೈಕಿ ಪ್ರತಿಶತ 80ರಷ್ಟು ಪರಿಣತರದು ತ್ರಿಶಂಕು ಸ್ಥಿತಿ. ಯಾಕೆಂದರೆ ಅವರು ಕ್ಷೇತ್ರಕ್ಕೆ ತೀರಾ ಹೊಸಬರೂ ಅಲ್ಲ , ಐಟಿ ಪಂಡಿತೋತ್ತಮರೂ ಅಲ್ಲ. ಜನರಲ್‌ ಇಲೆಕ್ಟ್ರಿಕ್‌, ಕಾಂಪ್ಯಾಕ್‌, ಓರ್ಯಾಕಲ್‌, ಸಿಸ್ಕೋ, ಯಾಹೂ ಮೊದಲಾದ ಕಂಪನಿಗಳಿಗೆ ಭರ್ತಿ ಮಾಡಿಕೊಳ್ಳುವ ತಮ್ಮ ಸಿಆರ್‌ವಿ ಕನ್ಸಲ್ಟೆಂಟ್ಸ್‌ಗೆ ಪ್ರಸ್ತುತ ದಿನಂಪ್ರತಿ 150 ಅರ್ಜಿಗಳು ಹರಿದು ಬರುತ್ತಿವೆ. 3 ತಿಂಗಳ ಹಿಂದೆ ಬರುತ್ತಿದ್ದ ಅರ್ಜಿಗಳಿಗಿಂತ ದುಪ್ಪಟ್ಟು ಈ ಸಂಖ್ಯೆ.

ಡಿಸೆಂಬರ್‌- 900 ಜನ ಬೇಕು, ಜನವರಿ- ನೇಮಕಾತಿ ನಿಲ್ಲಿಸಲಾಗಿದೆ

ಕಂಪನಿಗಳಿಗೆ ಹಳಬರಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಮೊದಲಿನಂತೆ ಈಗ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿಲ್ಲ. ದೇವರ ದಯೆಯಿಂದ ಒಂದೆಡೆ ನೆಲೆಗೊಂಡಿದ್ದೇವಲ್ಲ , ಅಷ್ಟೇ ಸಾಕಪ್ಪಾ ಅನ್ನೊ ಧೋರಣೆ ತಳೆದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಅಮೆರಿಕಾ ಮೂಲದ ಐಟಿ ಕಂಪನಿಯಾಂದು ಬೆಂಗಳೂರಲ್ಲಿ ಅಭಿವೃದ್ಧಿ ಕೇಂದ್ರ ತೆರೆಯಿತು. ನುರಿತರನ್ನು ಪತ್ತೆ ಮಾಡಿ, ಭರ್ತಿ ಮಾಡುವ 35 ಏಜೆನ್ಸಿಗಳಿಗೆ ವರ್ಷದೊಳಗೆ (2001) 900 ಎಂಜಿನಿಯರ್‌ಗಳನ್ನು ನೇಮಿಸಿಕೊಡುವಂತೆ ಕೇಳಿತು. ಜನವರಿ ತಿಂಗಳಲ್ಲಿ ತಾವು ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ‘ವಿ ಹ್ಯಾವ್‌ ಫ್ರೋಸನ್‌ ರೆಕ್ರುಯ್ಟ್‌ಮೆಂಟ್‌’ ಅಂತ ಹೇಳಿತು. ಇಂಥಾ ಅನಿಶ್ಚಿತತೆ ಧುತ್ತೆಂದು ಇದಿರಾಗಿದೆ ಅನ್ನುತ್ತಾರೆ ಶೇಖರ್‌.

ಸನ್‌, ಮೊಟೋರೋಲಾ, ಐಬಿಎಂ, ಸೀಮನ್ಸ್‌, ಜನರಲ್‌ ಇಲೆಕ್ಟ್ರಿಕ್‌, ಸಿಸ್ಕೋ, ನಾರ್ಟೆಲ್‌ ಮೊದಲಾದ ದೊಡ್ಡ ದೊಡ್ಡ ಕಂಪನಿಗಳೂ ಸೇರಿದಂತೆ 900ಕ್ಕೂ ಹೆಚ್ಚು ಮಾಹಿತಿ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಗೊಂಡಿವೆ. ಭಾರತದ ಸಾಫ್ಟ್‌ವೇರ್‌ ರಫ್ತಿನ ಪ್ರಮಾಣದಲ್ಲಿನ ಪ್ರತಿಶತ 40ರಷ್ಟು ಪಾಲು ಇಲ್ಲಿ ಹೆಸರಿಸಿರುವ ದೊಡ್ಡ ಕಂಪನಿಗಳದ್ದು.

ತಲೆ ಹುಡುಕರು (ಹೆಡ್‌ ಹಂಟರ್ಸ್‌) ಹೇಳುವ ಪ್ರಕಾರ ಭಾರತದ ಐಟಿ ಕಂಪನಿಗಳು ಕಳೆದ ವರ್ಷ ಭರ್ತಿ ಮಾಡಿಕೊಂಡ ಎಂಜಿನಿಯರ್‌ಗಳ ಪೈಕಿ 23 ಪ್ರತಿಶತ ಮಂದಿ ಇವತ್ತು ಮುಂದೇನು ಎಂಬ ಪ್ರಶ್ನೆ ಎದುರಿಸಬೇಕಾಗಿ ಬಂದಿದೆ. ಹೊರ ದೇಶಗಳಲ್ಲಿ ಹೊಸ ಯೋಜನೆಗಳು ದೊರೆತಲ್ಲಿ ಮಾತ್ರ ಅವರಿಗೆ ಉಳಿಗಾಲ.

ಕೆಲಸ ಹುಡುಕುವ ಮಾರುಕಟ್ಟೆಯಲ್ಲೀಗ ಪ್ರವಾಹ ಎದ್ದಿದೆ. ನಮ್ಮೂರಿನ ಹುಡುಗರಿಗೂ ಕೆಲಸ ಕೊಡಿಸುವುದು ದುಸ್ತರವಾಗಿಬಿಟ್ಟಿದೆ ಎಂದು ವಿಷಾದಿಸುತ್ತಾರೆ ಫಿಷರ್‌ ಕನ್ಸಲ್ಟಿಂಗ್‌ನ ಮುಖ್ಯಸ್ಥ ಅನಿಲ್‌ ದೊಡ್ಡಬೆಲೆ. 3 ತಿಂಗಳ ಹಿಂದೆ ನಮ್ಮ ಏಜೆನ್ಸಿಗೆ ದಿನಕ್ಕೆ ಕೇವಲ 30 ಅರ್ಜಿಗಳು ಬರುತ್ತಿದ್ದವು. ಇವತ್ತು ಕೆಲಸ ಕೋರಿ 100 ಅರ್ಜಿಗಳು ಬಂದು ಬೀಳುತ್ತಿವೆ. ಅನನುಭವಿಗಳಿಗೆ ಯಾವೊಂದು ಕೆಲಸವೂ ಲಭ್ಯವಿಲ್ಲ. ಅನುಭವ ಇದ್ದವರಿಗೆ ನಿರೀಕ್ಷೆಯಂತೆ ಕೆಲಸ ಸಿಕ್ಕುತ್ತಿಲ್ಲ . ನಾವು ಕೂಡ ಅಸಹಾಯಕರಾಗಿದ್ದೇವೆ ಎಂದು ದೊಡ್ಡಬೆಲೆ ವಿವರಿಸುತ್ತಾರೆ.

ಹೇಗಿದ್ದ ಐಟಿ ಹೇಗಾಯ್ತಪ್ಪೊ : ವರ್ಷದ ಹಿಂದೆ ಇದೇ ಫಿಷರ್‌ ಕನ್ಸಲ್ಟಿಂಗ್‌ ರಾತ್ರೋರಾತ್ರಿ ಪಬ್ಬು, ಕ್ಲಬ್ಬು, ಹೊಟೇಲುಗಳಲ್ಲಿ ಪ್ರತಿಭಾನ್ವಿತ (?) ಎಂಜಿನಿಯರುಗಳನ್ನು ತಡಕಿ, ದಮ್ಮಯ್ಯ ದತ್ತಯ್ಯ ಎಂದು ಕೆಲಸ ಕೊಡಿಸಿದ್ದೂ ಉಂಟು. ಸಂಬಳ ಎಷ್ಟು, ಷೇರು ಕೊಡ್ತಾರೋ ಹ್ಯಾಗೆ, ಎಸಿ- ಊಟ ಎಲ್ಲಾ ಇದೆಯಾ, ಕೆಲಸದ ವಾತಾವರಣ ಹೇಗಿದೆ- ಇಂಥಾ ಪ್ರಶ್ನೆಗಳ ಕೇಳಿ, ಸಮಾಧಾನದ ಉತ್ತರ ಪಡೆದ ನಂತರವೇ ಎಂಜಿನಿಯರ್‌ಗಳು ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದುದು.

ಈಗ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. 3 ವರ್ಷಕ್ಕಿಂತ ಕಡಿಮೆ ಅನುಭವ ಇರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಕೇಳೋರಿಲ್ಲ. ದಿನಾ ತಮ್ಮ ಬಯೋಡೇಟಾ ಹಿಡಕೊಂಡು ಬರುವ ಎಂಜಿನಿಯರ್‌ಗಳು ಸಂಬಳದ ವಿಷಯದಲ್ಲೂ ರಾಜಿಗೆ ಸಿದ್ಧ. ಅವರ ಸ್ಥಿತಿ ದೇವರಿಗೇ ಪ್ರೀತಿ ಎನ್ನುವ ದೊಡ್ಡಬೆಲೆ, ಯಾವುದೋ ಬಯೋಡೇಟಾ ತೆಗೆದು, ನೋಡಿ ಈತ ಏನೆಲ್ಲಾ ಮಾಡಿದಾನೆ. ಏನು ಪ್ರಯೋಜನ ಅಂದಾಗ ಐಟಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಪಾತಾಳಕ್ಕಿಳಿದಿದೆ ಎಂಬುದು ಅರ್ಥವಾಗುತ್ತದೆ.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+