Get Updates
Get notified of breaking news, exclusive insights, and must-see stories!

ಇರಿತ, ಕಲ್ಲುತೂರಾಟ, ಲಾಠಿ ಪ್ರಹಾರದ ನಡುವೆ ‘ಶಾಂತ’ ಮತದಾನ

ಬೆಂಗಳೂರು : ಕೆ.ಜಿ.ಎಫ್‌ನಲ್ಲಿ ಎಐಡಿಎಂಕೆ ಅಭ್ಯರ್ಥಿಗೆ ಇರಿತ, ನಕಲಿ ಮತದಾನಕ್ಕೆ ಯತ್ನ, ಕಾರ್ಯಕರ್ತರ ನಡುವೆ ಹೊಡೆದಾಟ, ಕಲ್ಲು ತೂರಾಟಗಳ ನಡುವೆಯೂ ರಾಜ್ಯಾದ್ಯಂತ 4 ಪಾಲಿಕೆಗಳೂ ಸೇರಿದಂತೆ ಒಟ್ಟು 148 ಪೌರಸಂಸ್ಥೆಗಳ ಚುನಾವಣೆ ಶಾಂತಿಯುತವಾಗಿ ನಡೆದಿದೆ.

ರಾಜ್ಯದಲ್ಲಿ ಸರಾಸರಿ 65-70ರಷ್ಟು ಮತದಾನ ಆಗಿದೆ. 10 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನಕ್ಕೆ ಆದೇಶ ನೀಡಲಾಗಿದೆ. ಗುಲ್ಬರ್ಗಾ, ಶಹಬಾದ್‌, ಮೈಸೂರು ಕೇಂದ್ರಗಳಲ್ಲಿ ಮರುಮತದಾನ ನಡೆಯಲಿದೆ. ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗೆ ಬಿರುಸಿನಿಂದ ಆರಂಭವಾದ ಮತದಾನ, ತೀವ್ರ ಬಿಸಿಲಿನಿಂದ ಮಧ್ಯಾಹ್ನ ನೀರಸವಾಗಿತ್ತು. ಮತ್ತೆ ಸಂಜೆಯ ಹೊತ್ತಿಗೆ ಮತದಾನ ಚುರುಕಾಯಿತು.

ಬಿಜಾಪುರದಲ್ಲಿ ಶೇ 60ರಿಂದ 65, ಬಳ್ಳಾರಿಯಲ್ಲಿ 65ರಿಂದ 70, ಮೈಸೂರಲ್ಲಿ ಶೇ. 50, ಶಿವಮೊಗ್ಗದಲ್ಲಿ ಶೇ. 67, ಬೀದರ್‌ನಲ್ಲಿ ಶೇ. 60ರಿಂದ 62, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 65ರಿಂದ 70ರಷ್ಟು ಮತದಾನ ಆದ ಬಗ್ಗೆ ವರದಿಯಾಗಿದೆ.

ಘರ್ಷಣೆ : ಮಂಡ್ಯ, ಶಿವಮೊಗ್ಗ, ಹಾಸನ, ಹೊಳೆನರಸೀಪುರ, ಮೈಸೂರು, ಬಳ್ಳಾರಿ, ಗುಲ್ಬರ್ಗಾ, ಬೆಂಗಳೂರು ಗ್ರಾಮಾಂತರ ಮೊದಲಾದ ಕಡೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದ ವರದಿಗಳಾಗಿವೆ.

ಕೆ.ಜಿ.ಎಫ್‌ನ ಗೊಲಗೊಂಡ ವಾರ್ಡ್‌ನಲ್ಲಿ ಎರಡು ಬಣಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಎಐಡಿಎಂಕೆ ಅಭ್ಯರ್ಥಿ ಅಂಬು ಅವರ ಮೇಲೆ ನಡೆದ ಹಲ್ಲೆಯಾಂದಿಗೆ ಪರ್ಯವಸಾನವಾಯಿತು. ಹಲ್ಲೆಗೊಳಗಾದ ಅಭ್ಯರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಜಿ.ಎಫ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ.

ಮದ್ದೂರು ಹಾಗೂ ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ದೂರು ಪ್ರತಿದೂರು ದಾಖಲಾಗಿದೆ. ರಾಮನಗರ ನಗರಸಭೆ ಐಜೂರು ಮತಗಟ್ಟೆ ಬಳಿ ನಡೆದ ಘರ್ಷಣೆ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ವಾರ್ಡ್‌ 24ರಲ್ಲಿ ಮತಗಟ್ಟೆಗೆ ನೀರು ಸುರಿದ ಕಾರಣ ಮತದಾನ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಬಳ್ಳಾರಿಯ ಕೌಲ್‌ಬಜಾರ್‌ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಹಾಸನದಲ್ಲಿ ನಕಲಿ ಮತದಾನ ನಡೆಯುತ್ತಿದೆ ಎಂಬ ಆರೋಪ - ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಹೊಡೆದಾಟ ಆರಂಭವಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಗುಲ್ಬರ್ಗಾದಲ್ಲಿ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇಲ್ಲಿ ಮತಪತ್ರಗಳನ್ನು ಹರಿದ ಬಗ್ಗೆಯೂ ದೂರುಗಳಿವೆ.

ಫಲಿತಾಂಶ : ಮಾಜಿ ಪ್ರಧಾನಿ ದೇವೇಗೌಡರ ತವರು ಹೊಳೆ ನರಸೀಪುರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕಲ್ಲು ತೂರಾಟ ನಡೆದ ವರದಿ ಆಗಿದೆ. ಈ ಎಲ್ಲದರ ನಡುವೆಯೂ ಉರಿ ಬಿಸಿಲಿನಲ್ಲಿ ರಾಜ್ಯಾದ್ಯಂತ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಶುಕ್ರವಾರ ಬೆಳಗ್ಗೆ ಆಯಾ ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆಗಳ ಪ್ರಮುಖ ಕೇಂದ್ರಗಳಲ್ಲಿ ಮತಎಣಿಕೆ ಆರಂಭವಾಗಲಿದ್ದು, ನಾಳೆಯೇ ಬಹುತೇಕ ಫಲಿತಾಂಶಗಳು ಹೊರಬೀಳಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+