ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಫಲಕ ಸೃಷ್ಟಿಸುತ್ತಿರುವ ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದ

By Staff
|
Google Oneindia Kannada News

ಬೆಳಗಾವಿ : ಕನ್ನಡಿಗರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಒಪ್ಪಿಸುವಂತೆ ಮಾಡಲು ಶಿವಸೇನೆ ಹೊಸ ಹೋರಾಟದ ದಾರಿ ಹುಡುಕಲಿದೆ ಎಂಬ ಕೇಂದ್ರ ಕೈಗಾರಿಕಾ ಸಚಿವ ಮನೋಹರ್‌ ಜೋಷಿ ಹೇಳಿಕೆ ಉಂಟುಮಾಡಿದ್ದ ಅನಗತ್ಯ ವಿವಾದ ತಣ್ಣಗಾಗುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕಗಳು ವಿವಾದ ಸೃಷ್ಟಿಸುತ್ತಿವೆ.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ಉಚಗಾಂವ ಎಂಬ ಮರಾಠಿ ಅಕ್ಷರದ ಫಲಕ ರಾರಾಜಿಸುತ್ತಿದ್ದು ಹೊಸ ವಿವಾದ ಹುಟ್ಟಿಹಾಕಿದೆ. ಈ ಹಿಂದೆ ಯಳ್ಳೂರಿನಲ್ಲಿ ಇಂತಹದೇ ಫಲಕ ಹಾಕಲಾಗಿತ್ತು. ಈ ಬೆಳವಣಿಗೆಯಿಂದಾಗಿ ಬೆಳಗಾವಿಯಲ್ಲಿ ಭಾಷಾ ವಿವಾದ ಮತ್ತಷ್ಟು ಉಲ್ಬಣಿಸುವ ಲಕ್ಷಣಗಳು ಕಾಣುತ್ತಿವೆ.

ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಮಹಾಜನ್‌ ವರದಿಯಾಂದೇ ಸಮಸ್ಯೆಯ ಪರಿಹಾರಕ್ಕೆ ಮಾರ್ಗ ಎಂದು ರಾಜ್ಯ ಸರಕಾರ ಹಾಗೂ ಪ್ರತಿಪಕ್ಷದ ನಾಯಕರು ಹೇಳುತ್ತಿದ್ದರೂ, ಕನ್ನಡ ನೆಲದ ಮೇಲೆ ತಮ್ಮ ಹಿಡಿತ ಸಾಧಿಸುವ ಪ್ರಯತ್ನಗಳನ್ನು ಮರಾಠಿಗರು ಮಾಡುತ್ತಲೇ ಇದ್ದಾರೆ.

ಕರ್ನಾಟಕ ರಾಜ್ಯದ ಸವಲತ್ತು ಪಡೆಯುತ್ತಲೇ, ಕರ್ನಾಟಕ ಸರಕಾರದ ವಿರುದ್ಧವಾಗಿಯೇ ಕೆಲವರು ವರ್ತಿಸುತ್ತಿದ್ದಾರೆ. ಹಿಂದೆ ಯಳ್ಳೂರಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ಫಲಕ ಹಾಕಿದಾಗ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿತು ಈಗ, ಉಚಗಾಂವದಲ್ಲಿ ಫಲಕ ಹಾಕಲಾಗಿದೆ. ಜಿಲ್ಲಾಡಳಿತ ಹಾಗೂ ಕನ್ನಡ ಪರ ಸಂಘಟನೆಗಳು ತೆಪ್ಪಗಿದ್ದರೆ, ಬೆಳಗಾವಿ ನಮ್ಮ ಕೈಬಿಟ್ಟು ಹೋಗುತ್ತದೆ ಎಂಬುದು ಇಲ್ಲಿನ ಕನ್ನಡ ಹೋರಾಟಗಾರರ ಅಳಲಾಗಿದೆ.

ಈ ಕೂಡಲೇ ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಮುಂದೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ, ಯಾವುದೇ ಸಂಘರ್ಷಕ್ಕೆ ಅವಕಾಶ ಆಗದಂತೆ ಎಚ್ಚರ ವಹಿಸಬೇಕು ಎಂದೂ ಕನ್ನಡ ಹೋರಾಟಗಾರರು ಆಗ್ರಹಿಸಿದ್ದಾರೆ.

ಬಿಜಾಪುರ ವರದಿ : ಈ ಮಧ್ಯೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಪರಿಹಾರಕ್ಕೆ ಮಹಾಜನ್‌ ವರದಿಯ ತ್ವರಿತ ಅನುಷ್ಠಾನ ಅನಿವಾರ್ಯವಾಗಿದೆ ಎಂದು ಭಾರತೀಯ ಜನತಾಪಕ್ಷದ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಅವರು ಬಿಜಾಪುರದಲ್ಲಿ ಹೇಳಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಯಳ್ಳೂರು ಪ್ರಕರಣವನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದ್ದಾರೆ. ಕಾಂಗ್ರೆಸ್‌ ಸರಕಾರ ಹಲವು ವರ್ಷಗಳಿಂದ ನೀರೆರೆದು ಪೋಷಿಸಿರುವ ಈ ರೋಗ ನಿವಾರಣೆಗೆ ಸಮಯಾವಕಾಶ ಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X