ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರ್‌ ಆಳ್ವ ಎಂಬ ವೃಕ್ಷ ಕಲಾವಿದ ಅರಳಿಸಿದ ಅದ್ಭುತ ವನ

By Staff
|
Google Oneindia Kannada News

*ರಾಜು ಮಹತಿ

ಮಂಗಳೂರು : ಮಂಗಳೂರು - ಮೂಡಬಿದ್ರೆ ರಸ್ತೆಯಲ್ಲಿ ಮಿಜಾರು ಸಮೀಪ ಸುಮಾರು 100 ಎಕರೆ ಪ್ರದೇಶದಲ್ಲಿ ಅದ್ಭುತ ವನವೊಂದು ಅರಳಿ ನಿಂತಿದೆ. ರಾಜ್ಯದ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರಪ್ಪ ಸೇರಿದಂತೆ ರಾಜ್ಯದ ಅನೇಕ ಗಣ್ಯರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವನ ಅತ್ಯಮೂಲ್ಯ ಸಸ್ಯಗಳನ್ನು ಒಳಗೊಂಡಿದೆ. ದೇಶದ ವಿವಿಧೆಡೆ ದೊರೆಯುವ, ದಕ್ಷಿಣ ಕನ್ನಡ ಜಿಲ್ಲೆಯ ಹವಾ ಗುಣಕ್ಕೆ ಹೊಂದುವ 650 ಜಾತಿಯ ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಇವೆಲ್ಲವೂ ಔಷಧೀಯ ಮಹತ್ವದವು. ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಕಚ್ಚಾ ವಸ್ತುವಾಗಿ ಬಳಕೆಯಾಗುವಂತಹ ಗಿಡಗಳಿವು.

ಅಮೃತ ಬಳ್ಳಿ, ಸಾಂಬಾರು ಬಳ್ಳಿ, ವಿವಿಧ ಜಾತಿಯ ತುಲಸೀ ಗಿಡ, ಎಕ್ಕ ಸೇರಿದಂತೆ ಒಂದು ಕಾಲದಲ್ಲಿ ತುಳುನಾಡಿನ ಮನೆಯಂಗಳದಲ್ಲಿ ಬೆಳೆಯುತ್ತಿದ್ದು, ಈಗ ಆಧುನಿಕತೆಯ ಕಾರಣದಿಂದಾಗಿ ಕಣ್ಮರೆಯಾಗಿರುವ ಔಷಧೀಯ ಸಸ್ಯಗಳೆಲ್ಲಾ ಈ ವನದಲ್ಲಿವೆ.

ಸಿದ್ಧಾಪುರದಿಂದ ಹಿಮಾಲಯದವರೆಗೆ ಗಿಡ ಹುಡುಕಿದ ಅಮರ್‌ ಆಳ್ವ

ಮೂಡಬಿದ್ರೆ ಆಳ್ವಾಸ್‌ ಎಜುಕೇಷನ್‌ ಫೌಂಡೇಶನ್‌ನ ಡಾ. ಮೋಹನ್‌ ಆಳ್ವ ಇದರ ರೂವಾರಿ. ಅವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ , ಹಿಮಾಲಯ, ತಮಿಳು ನಾಡು, ಕೇರಳ, ಸಿದ್ಧಾಪುರ, ಶಿರಸಿಗಳಿಂದ ಗಿಡಗಳನ್ನು ತಂದು ಇಲ್ಲಿ ನೆಟ್ಟಿದ್ದಾರೆ. ಉಸ್ತುವಾರಿಗೆ ಸಸ್ಯಶಾಸ್ತ್ರ ಬಲ್ಲವರನ್ನು ನೇಮಿಸಿದ್ದಾರೆ.

ವೃತ್ತಿಯಿಂದ ವೈದ್ಯರಾಗಿರುವ, ಮೂಡಬಿದ್ರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮೋಹನ್‌ ಆಳ್ವರು ಸ್ವಂತ ಆಯುರ್ವೇದಿಕ್‌ ಔಷಧಿ ತಯಾರಿಕಾ ಘಟಕವನ್ನು ಹೊಂದಿದ್ದಾರೆ. ಕೆಲವು ಶಾಸ್ತ್ರೀಯ ಔಷಧಿಗಳ ತಯಾರಿಕೆಗೆ ಕಚ್ಚಾ ವಸ್ತುಗಳು ಸುಲಭದಲ್ಲಿ ದೊರೆಯದೇ ಹೋದಾಗ ಅವರು ರೂಪಿಸಿದ ಮಹತ್ವಾಕಾಂಕ್ಷೆಯ ಯೋಜನೆಯೇ ಆಯುರ್ವೇದ ಗಿಡ ಮೂಲಿಕೆ ವನ ನಿರ್ಮಾಣ.

ಗುಡ್ಡ ಪ್ರದೇಶದ ಅರ್ಧ ಭಾಗವನ್ನು ಸಮತಟ್ಟು ಮಾಡಿ, ಉಳಿದ ಅರ್ಧಭಾಗವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಲ್ಲಿ ಪಶ್ಚಿಮ ಘಟ್ಟದಲ್ಲಿ ಸಿಗುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ತಂದು ಬೆಳೆಸಿದ್ದಾರೆ. ಘಟ್ಟ ಪ್ರದೇಶದ ಇಳಿಜಾರುಗಳಲ್ಲಿ ಬೆಳೆಯುವ ಗಿಡಗಳನ್ನು ಇಲ್ಲಿಯೂ ಬೆಳೆಸುವ ವ್ಯವಸ್ಥೆ ಮಾಡಿದ್ದಾರೆ.

ಫಲ ನೀಡಿದ ಪಂಚ ವಾರ್ಷಿಕ ಯೋಜನೆ : ಸತತ ಐದು ವರ್ಷಗಳ ಪ್ರಯತ್ನದ ಫಲವಾಗಿ ಇಲ್ಲೀಗ ಸಾವಿರಾರು ಗಿಡಗಳು ಅರಳಿ ನಿಂತು ಆಹ್ಲಾದಕರ ಪರಿಮಳವನ್ನು ಹೊರಸೂಸುತ್ತಿವೆ. ಬೇಲಿ ಬದಿಯಲ್ಲಿ ಮಳೆಗಾಲದಲ್ಲಿ ಬೆಳೆಯುವ ಕೆಲ ಕಾಟುಗಿಡಗಳಿಗೂ ಇಲ್ಲಿ ಅವುಗಳ ಔಷಧೀಯ ಮಹತ್ವವನ್ನು ಅನುಲಕ್ಷಿಸಿ ರಾಜ ಮರ್ಯಾದೆ ನೀಡಲಾಗುತ್ತಿದೆ.

ಇಲ್ಲಿರುವ ಕೆಲವು ಅಮೂಲ್ಯ ಗಿಡಗಳನ್ನು ಹಿಮಾಲಯದಿಂದ ತರಿಸಲಾಗಿದೆ. ನೀಲಗಿರಿ ಬೆಟ್ಟಗಳಿಂದ ತಂದ ಕೆಲ ಗಿಡಗಳೂ ಇಲ್ಲಿವೆ. ಆದರೆ ಇಲ್ಲಿನ ವಾತಾವರಣಕ್ಕೂ ಹಿಮಾಲಯದ ವಾತಾವರಣಕ್ಕೂ ವಿಶೇಷ ವ್ಯತ್ಯಾಸಗಳಿರುವುದರಿಂದ ತಂದ ಗಿಡಗಳೆಲ್ಲ ಬದುಕುತ್ತವೆ ಎಂದೇನಿಲ್ಲ ಎಂದು ಮೋಹನ್‌ ಆಳ್ವ ಹೇಳುತ್ತಾರೆ.

ಈ ವನ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತಾಗ ರಾಜ್ಯದ ಅಪೂರ್ವ ಮತ್ತು ವಿಸ್ತಾರವಾದ ಔಷಧೀಯ ಸಸ್ಯಗಳ ಉದ್ಯಾನವನ ಆಗಲಿದೆ. ಪಶ್ಚಿಮ ಘಟ್ಟಗಳಲ್ಲಿ ಒಂದು ಕಾಲದಲ್ಲಿ ವ್ಯಾಪಕವಾಗಿದ್ದು, ಹಳ್ಳಿ ವೈದ್ಯದಲ್ಲಿ ಬಳಸುತ್ತಿದ್ದ ಗಿಡ ಮೂಲಿಕೆಗಳಿವೆ. ಇಲ್ಲಿರುವ ಪ್ರತಿ ಗಿಡದ ಸ್ಥಳೀಯ ಹೆಸರು, ಸಸ್ಯ ಶಾಸ್ತ್ರದ ಪ್ರಕಾರ ಆ ಗಿಡದ ಗುಣ ವಿಶೇಷಗಳ ಬಗ್ಗೆ ಉದ್ಯಾನವನಕ್ಕೆ ಭೇಟಿ ನೀಡಿದವರಿಗೆ ವಿವರಿಸುವ ವ್ಯವಸ್ಥೆ ಇದೆ.

ಶಿವ ಪಂಚಾಕ್ಷರೀ ವನ, ರಾಶಿ ವನ, ನಕ್ಷತ್ರ ವನ ಸೇರಿದಂತೆ ವಿವಿಧ ವನಗಳನ್ನು ಇಲ್ಲಿ ಅತ್ಯಂತ ಶಾಸ್ತ್ರೀಯವಾಗಿ ರೂಪಿಸಲಾಗಿದೆ.

ರೈತರಿಗೂ ಮಾದರಿಯೀ ವನ : ಡಾ . ಮೋಹನ್‌ ಆಳ್ವರ ಈ ತೋಟ ರೈತರು ಈಗ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡುವಂತಹದ್ದು. ಮುಕ್ತ ಆಮದು ನೀತಿಯಿಂದಾಗಿ ದೇಶದ ಕೃಷ್ಯುತ್ಪನ್ನಗಳ ಧಾರಣೆ ಕುಸಿದಿದೆ. ಈಗ ಕೃಷಿಯನ್ನು ಲಾಭದಾಯಕಗೊಳಿಸಬೇಕಾದರೆ ಕೆಲ ಔಷಧೀಯ ಸಸ್ಯಗಳನ್ನು ತೋಟದಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದು ಹಣ ಗಳಿಸಬಹುದು ಎನ್ನುತ್ತಾರೆ ಡಾ. ಮೋಹನ್‌ ಆಳ್ವ.

ಅವರು ಅಡಿಕೆ ತೋಟದಲ್ಲಿ ಕಿರಾತಕಡ್ಡಿ, ಸಾಂಬಾರು ಬಳ್ಳಿಗಳನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯುತ್ತಾರೆ. ಔಷಧೀಯ ಮಹತ್ವದ ಈ ಸಸ್ಯಗಳಿಗೆ ಸಾರ್ವಕಾಲಿಕ ಬೇಡಿಕೆ ಇದೆ. ಇವುಗಳ ಬಗ್ಗೆ ಬ್ರಿಟನ್‌ ಸಹಯೋಗದಲ್ಲಿ ಸಂಶೋಧನೆಯೂ ನಡೆಯುತ್ತಿರುವುದರಿಂದ ಮುಂದೊಂದು ದಿನ ಇದಕ್ಕೆ ರಫ್ತು ಮಾರುಕಟ್ಟೆ ದೊರೆಯುವುದು ಖಚಿತ ಎನ್ನುತ್ತಾರೆ ಅಮರ್‌ ಆಳ್ವ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X