ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಮಳೆಗೇ ಕೊಳೆತ ಕರಾವಳಿಯ ರಸ್ತೆಗಳು

By Staff
|
Google Oneindia Kannada News

*ರಾಜು ಮಹತಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳು ಯಮನ ಗುಹೆಯಾಗಿವೆ. ಏಪ್ರಿಲ್‌ 2 ನೇ ವಾರದಲ್ಲಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ 7 ಅಪಘಾತಗಳಲ್ಲಿ ಒಟ್ಟು 13 ಮಂದಿ ಅಸು ನೀಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯಾಗಿ ಮೂರು ತಿಂಗಳು ಕಳೆಯುವಷ್ಟರಲ್ಲಿ ವಿವಿಧೆಡೆ ಸಂಭವಿಸಿದ ಅಪಘಾತಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಕನಿಷ್ಠವೆಂದರೂ 25ನ್ನು ದಾಟುತ್ತದೆ.

ಏಪ್ರಿಲ್‌ ತಿಂಗಳ ನಾಲ್ಕು ದಿನಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ.

ಮಳೆಗಾಲ ಆರಂಭಗೊಂಡಾಕ್ಷಣ ಈ ಎರಡು ಕರಾವಳಿ ಜಿಲ್ಲೆಗಳಲ್ಲಿ ಅಪಘಾತದ ಅಧ್ಯಾಯ ಆರಂಭವಾಗುತ್ತದೆ. ಈ ಬಾರಿ ಏಪ್ರಿಲ್‌ ತಿಂಗಳಲ್ಲಿ ಸತತ 5 ದಿನಗಳ ಕಾಲ ಸಂಜೆ ಮಳೆ ಸುರಿಯಿತು. ಕೆಲವು ಘಂಟೆಗಳ ಕಾಲವಷ್ಟೇ ಸುರಿದ ಮಳೆಯ ಪರಿಣಾಮ ರಸ್ತೆಗಳ ಮೇಲಾಗಿದೆ.

ಇದು ಮೇಲ್ನೋಟಕ್ಕೆ ಕೊಡಬಹುದಾದ ಕಾರಣವಾದರೂ ಕೊಂಚ ಆಳಕ್ಕಿಳಿದರೆ, ಅನೇಕ ಕಾರಣಗಳು ಗೋಚರಿಸುತ್ತವೆ.

ಕಡಿವಾಣ ಕಿತ್ತ ವೇಗ ಜೀವ ನುಂಗುತ್ತಿದೆ

  • ಬೃಹತ್‌ ಉದ್ಯಮ, ಬಂದರುಗಳ ಕಾರಣದಿಂದ ರಸ್ತೆ ತುಂಬಾ ವಾಹನಗಳು ಓಡಾಡುತ್ತವೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17, 13 ಮತ್ತು 48ರಲ್ಲಿ ತೈಲ ಟ್ಯಾಂಕರ್‌ಗಳು, ಅನಿಲ ಸಾಗಾಟದ ಬೃಹತ್‌ ಗಾತ್ರದ ಬುಲೆಟ್‌ ಟ್ಯಾಂಕರ್‌ಗಳು ಓಡಾಡುವಾಗ ರಸ್ತೆಯ ಮೇಲೆ ತೈಲದ ಹನಿಗಳು ಬೀಳುತ್ತವೆ. ಸ್ವಲ್ಪ ಮಳೆ ಬಂದರೂ ಸಾಕು ರಸ್ತೆ ಜಾರತೊಡಗುತ್ತದೆ. ವಾಹನಗಳು ಸ್ಕಿಡ್‌ ಆಗುತ್ತವೆ.
  • ರಸ್ತೆ ಸುರಕ್ಷತಾ ಸಪ್ತಾಹ ಮುಗಿಯುತ್ತಲೇ ವಾಹನಗಳ ವೇಗದ ಕಡಿವಾಣ ಕಿತ್ತು ಹೋಗುತ್ತದೆ. ರಾತ್ರಿಯಲ್ಲಿ ಡಿಮ್‌ ಡಿಪ್‌ ಮಾಡುವ ವ್ಯವಧಾನವಿಲ್ಲದೇ ಓಡುವ ಗಾಡಿಗಳು ಅನೇಕ ಜೀವ ಬಲಿ ತೆಗೆದುಕೊಂಡಿವೆ.
  • ಮಿತಿ ಮೀರಿದ ವೇಗ, ಆರ್‌ ಟಿ ಓ ಕಚೇರಿಗಳ ಏಜೆಂಟ್‌ ವ್ಯವಸ್ಥೆ ಮತ್ತು ಭ್ರಷ್ಟಾಚಾರ, ಅಪಘಾತಗಳಿಗೆ ವೇಗವರ್ಧಕವಾಗಿವೆ.
ಗಾಳಿಯಲ್ಲಿ ಲೀನವಾಗಿರುವ ರಸ್ತೆ ಸಂಚಾರ ನಿಯಮ

  • ರಸ್ತೆ ಸಂಚಾರ ನಿಯಮಗಳ ಬಗ್ಗೆ, ಪ್ರಾಥಮಿಕ ಮಾಹಿತಿಯೂ ಇಲ್ಲದವರು ಇಲ್ಲಿಯ ಆರ್‌ ಟಿ ಓ ಕಚೇರಿಗಳಲ್ಲಿ ಹಣ ತೆತ್ತು ಲೈಸೆನ್ಸ್‌ ಖರೀದಿಸಬಹುದು. ವೇಗವೊಂದೇ ವಲಂ ಎನ್ನುವ ಖಾಸಗಿ ಸಾರಿಗೆ ವಾಹನಗಳು ಹಗಲಲ್ಲೂ ಹೆಡ್‌ ಲೈಟ್‌ ಉರಿಸಿ ಓವರ್‌ ಟೇಕ್‌ ಮಾಡುವ ಭರಾಟೆಯಲ್ಲಿರುತ್ತವೆ
  • ಸರಕು ಸಾಗಾಣಿಕೆ ವಾಹನಗಳು ಸಾಗಿಸುವ ಸರಕಿನ ಭಾರಕ್ಕೆ ಮಿತಿಯಿಲ್ಲ.
  • ಲಾರಿಯ ದೇಹ ಗಾತ್ರವನ್ನು ಮೀರಿ ಉದ್ದಕ್ಕೆ ತುಂಬಿಸುವ ಕಬ್ಬಿಣದ ರಾಡುಗಳಿಗೆ ಕೆಂಪು ಬಟ್ಟೆಯನ್ನು ಕಟ್ಟುವ ನಿಯಮ ಅಳಿದು ಬಹುಕಾಲವಾಯಿತು.
  • ಮರಳು ಸಾಗಿಸುವ ಲಾರಿ ರಸ್ತೆಯುದ್ದಕ್ಕೂ ಮರಳು ಚೆಲ್ಲುತ್ತಾ ಓಡುತ್ತವೆ. ಹಿಂದಿನ ವಾಹನ ಚಾಲಕನ ಕಣ್ಣುಗಳನ್ನು ದೇವರೇ ಕಾಪಾಡಬೇಕು.
ರಸ್ತೆ ನಿಯಮಗಳ ಉಲ್ಲಂಘನೆ, ವಿಪರೀತ ವೇಗ, ಸೂಕ್ತ ವಿಚಕ್ಷಣ ವ್ಯವಸ್ಥೆಯ ಲೋಪದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳು ಮೃತ್ಯು ಕೂಪವಾಗಿವೆ. ಬೆಳಿಗ್ಗೆ ಮನೆಯಿಂದ ಹೊರಟವರು ಸಂಜೆ ಮನೆಗೆ ಸೇರುತ್ತಾರೆ ಎಂದು ಭರವಸೆ ಇಲ್ಲದಂತಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X