ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ಜೀವಿ ವಾಲ್ಷ್‌ಗೆ ತುಂಬು ಹೃದಯದ ಬೀಳ್ಕೊಡುಗೆ

By Staff
|
Google Oneindia Kannada News

ಕಿಂಗ್ಸ್‌ಟನ್‌ : ಏಪ್ರಿಲ್‌ 23, ಸೋಮವಾರ ಕರ್ಟ್ನಿ ವಾಲ್ಷ್‌ ತಮ್ಮ ಜೀವಮಾನದಲ್ಲೇ ಮರೆಯಲಾಗದ ದಿನ. 17 ವರ್ಷ ಕಾಲ ನೆಯ್ದ ಪ್ರತಿಭೆಯ ಟೆಸ್ಟ್‌ ಕ್ರಿಕೆಟ್‌ ಜೀವನದ ಅಂತಿಮ ದಿನ ಅಘೋಷಿತ ಹಬ್ಬವಾಗಿ ಮಾರ್ಪಟ್ಟಿತು. ತಂಡದ ಸದಸ್ಯರು, ಅಭಿಮಾನಿಗಳು ತುಂಬು ಹೃದಯದಿಂದ ಸರಳ ಜೀವಿಯನ್ನು ಬೀಳ್ಕೊಟ್ಟರು.

ಒಬ್ಬ ಕ್ರಿಕೆಟಿಗ ಫಾರ್ಮ್‌ ಉಳಿಸಿಕೊಂಡೇ ನಿವೃತ್ತಿಯಾದರೆಷ್ಟು ಚೆನ್ನ, ಅಲ್ಲವೇ? ತಮ್ಮ 132ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ 6 ವಿಕೆಟ್‌ ಕಿತ್ತ ವಾಲ್ಷ್‌ ಈ ಚೆನ್ನಿಗೆ ಪಾತ್ರರಾಗಿದ್ದಾರೆ. ಸತತ 13 ಟೆಸ್ಟ್‌ ಸೋಲುಂಡಿದ್ದ ವಿಂಡೀಸ್‌ ತಂಡ ಶತಾಯಗತಾಯ ಹೋರಾಡಿ ಪ್ರಬಲ ದಕ್ಷಿಣ ಆಫ್ರಿಕ ತಂಡವ 140 ರನ್‌ಗಳಿಂದ ಮಣಿಸುವುದರ ಮೂಲಕ ತಮ್ಮ ಹಿರಿಯ ಆಟಗಾರನಿಗೆ ಅಪರೂಪದ ಸೆಂಡ್‌ ಆಫ್‌ ಕೊಟ್ಟಿತು.

ಮರ್ವಿನ್‌ ಧಿಲ್ಲಾನ್‌ ಎಸೆತಕ್ಕೆ ದಕ್ಷಿಣ ಆಫ್ರಿಕದ ಪಾಲ್‌ ಆ್ಯಡಮ್ಸ್‌ ಬಲಿಯಾಗುತ್ತಿದ್ದಂತೆ, ತಂಡದ ಆಟಗಾರರೆಲ್ಲಾ ಫೈನ್‌ ಲೆಗ್‌ ಕಡೆಗೆ ಓಡಿದರು. ಅರೆ, ಕ್ಯಾಚ್‌ ಹಿಡಿದದ್ದು ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಸ್ಯಾಮುಯಲ್ಸ್‌. ಎಲ್ಲಾ ಯಾಕೆ ಫೈನ್‌ ಲೆಗ್‌ ಕಡೆಗೊಡುತ್ತಿದ್ದಾರೆ ಅಂತ ಅಂದುಕೊಳ್ಳುವಷ್ಟರಲ್ಲಿ ಕ್ಯಾಮೆರಾ ಕಣ್ಣು ಅಲ್ಲಿದ್ದ ಹಿರಿಯ ವಾಲ್ಷ್‌ ಕಡೆಗೆ ತಿರುಗಿತು.

ಕಣ್ಣು ಸಣ್ಣಗೆ ತುಂಬಿತ್ತು : ತಂಡದ ಪ್ರತಿಯಾಬ್ಬ ಸದಸ್ಯ ನೆಚ್ಚಿನ ಸಹ ಆಟಗಾರನಿಗೆ ಬಿಗಿಯಪ್ಪುಗೆ ನೀಡಿದರು. ಭಾರತದ ಕ್ರಿಕೆಟ್‌ ಪ್ರೇಮಿಗಳಂತೆ ಅಷ್ಟೇನೂ ಅಬ್ಬರಿಸದ ಕೆರೇಬಿಯನ್‌ ಅಭಿಮಾನಿಗಳು ತಣ್ಣಗೆ ವಾಲ್ಷ್‌ಗೆ ವಿದಾಯ ಹೇಳಿದರು. ಆತನನ್ನು ಸುತ್ತುವರಿದು, ತುಂಬು ಹೃದಯದಿಂದ ಮಾತಾಡಿದರು. ವಾಲ್ಷ್‌ ಮುಖದಲ್ಲಿ ಸಾರ್ಥಕ್ಯದ ನಗೆ ತುಂಬಿತ್ತು. ತಮ್ಮ ಕೊನೆಯ ಗೆಲುವಿನಾಟದ ನೆನಪಿಗೆ ವಾಲ್ಷ್‌ ವಿಕೆಟ್ಟೊಂದನ್ನು ಕೈಗೆತ್ತಿಕೊಂಡರು. ಬ್ಯಾಟಿಂಗ್‌ ಸೆನ್ಷೇಷನ್‌ ಲಾರಾ, ಅಂಪೈರ್‌ ಸ್ಟೀವ್‌ ಬಕ್ನರ್‌ ಕೈಲಿದ್ದ ಚೆಂಡನ್ನೂ ವಾಲ್ಷ್‌ಗೆ ನೆನಪಿನ ಕಾಣಿಕೆಯಾಗಿ ಕೊಟ್ಟರು. ಸರಳ ಸಮಾರಂಭದಲ್ಲಿ ವಾಲ್ಷ್‌ಗೆ ಗುಡ್‌ ಬೈ ಹೇಳಲಾಯಿತು. ಜನ ಹಾಡಿದರು, ಕುಣಿದರು.

ಗ್ರೀನ್‌ ರೂಮಿನಲ್ಲಿ ದಕ್ಷಿಣ ಆಫ್ರಿಕದ ಆಟಗಾರರೂ ಶಾಂಪೇನ್‌ ಪಾರ್ಟಿಗೆ ರೆಡಿಯಾಗಿದ್ದರು. ಕ್ರಿಕೆಟ್ಟಿಗೆ ವಿದಾಯ ಹೇಳಿದ ಆಟಗಾರ ಒಂದು ಸಿಪ್‌ ಶ್ಯಾಂಪೇನ್‌ ಕುಡಿದು, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಅವರ ಕಣ್ಣು ಸಣ್ಣಗೆ ತುಂಬಿ ಬಂದಿತ್ತು.

ಮುಂದೇನು ? ವಾಲ್ಷ್‌ ಇನ್ನಾರು ತಿಂಗಳು ರೆಸ್ಟ್‌ ತೊಗೋತಾರೆ. ತನ್ನ ಹೆಂಡತಿ, ಮಗ- ಮಗಳೊಟ್ಟಿಗೆ ದೀರ್ಘಾವಧಿ ಹರಟೆ ಕೊಚ್ಚುತ್ತಾರೆ. ಹಾಡುತ್ತಾರೆ, ಕುಣಿಯುತ್ತಾರೆ. ಗಾಲ್ಫ್‌ ಆಡುತ್ತಾರೆ. ನಂತರ ಅವರ ಉಳಿದ ಜೀವನ ಹೇಗೆ ಕಳೆಯಬೇಕೆಂದು ಪ್ಲಾನ್‌ ಮಾಡಿಕೊಳ್ಳುತ್ತಾರೆ. ಇ-ದಿ-ಷ್ಟೂ ಬೀಳ್ಕೊಡುಗೆ ಹಬ್ಬದಲ್ಲಿ ವಾಲ್ಷ್‌ ಹೇಳಿದ್ದು.

ಹದಿನೇಳು ವರ್ಷದ ಕ್ರಿಕೆಟ್‌ ಜೀವನ . 132 ಪಂದ್ಯ. ವಿಶ್ವ ದಾಖಲೆಯ 519 ವಿಕೆಟ್‌. ವಾಲ್ಷ್‌ ನಮ್ಮ- ನಿಮ್ಮ ಮನದಲ್ಲಿ ಉಳಿಯಲು ಇಷ್ಟು ಸಾಕಲ್ಲವೇ?

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X