ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಕರಣ ನವೀಕರಣ : ನಮ್ಮೂರ ದಾರಿಗಿಡಿ ದಿಗ್ಗಜರ ಹೆಸರ ರಂಗವಲ್ಲಿ

By Staff
|
Google Oneindia Kannada News

*ರವಿಶಂಕರ್‌ ಬಳೆ, ದುಬೈ

ದೇಶದ ರಾಜಧಾನಿ ತನ್ನ ಎಲ್ಲಾ ಪ್ರದೇಶಗಳನ್ನೂ ಪ್ರತಿನಿಧಿಸಬೇಕು. ಆದರೆ ದೆಹಲಿಯಲ್ಲಿ ಯಾವುದೊಂದು ರಸ್ತೆಗೂ ಕನ್ನಡಿಗನ ಹೆಸರನ್ನು ಇಟ್ಟಿಲ್ಲ- ವರ್ಷಗಳ ಹಿಂದೆ ಹಾ.ಮಾ.ನಾಯಕರು ‘ಪ್ರಜಾಮತ’ದ ಒಂದು ಸಂಪುಟದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದರು. ಆಗ ನಾನು ಕರ್ನಾಟಕದಲ್ಲೇ ಇದ್ದೆ.

ಇವತ್ತಿಗೂ ದೆಹಲಿಯಲ್ಲಿ ತ್ಯಾಗರಾಜ ರಸ್ತೆಯುಂಟು; ಪುರಂದರದಾಸ ರಸ್ತೆಯಿಲ್ಲ (ಕರ್ನಾಟಕ ಸಂಗೀತದ ಪಿತಾಮಹ ಎಂದು ಪುರಂದರದಾಸರು ಗುರ್ತಿಸಿಕೊಂಡಿದ್ದಾರೆ). ಕೆಲವೊಮ್ಮೆ ಹೀಗಾಗುತ್ತದೆ. ಅದು ಒತ್ತಟ್ಟಿಗಿರಲಿ. ಒಂದು ವೇಳೆ ದೆಹಲಿ ಸರ್ಕಾರ ಬೆಂಗಳೂರಿನ ರಸ್ತೆಗಳಿಗೆ ಯಾರ್ಯಾರ ಹೆಸರುಗಳನ್ನಿಟ್ಟಿದ್ದೀರಿ ಎಂದು ಬೆಟ್ಟು ಮಾಡಿ ತೋರಿಸಿದರೆ ? ನಮ್ಮ ಉತ್ತರವೇನು? ಬನ್ನಿ, ಪರಿಶೀಲಿಸೋಣ...

ನಾನು ಹಲವು ವರ್ಷಗಳಿಂದ ಅನಿವಾಸಿ ಕನ್ನಡಿಗನಾಗಿದ್ದೇನೆ. ಕರ್ನಾಟಕದಿಂದ ಹೊರಗೆ ಅನೇಕ ಜಾಗೆಗಳಲ್ಲಿ ವಾಸ ಮಾಡಿದ್ದೇನೆ. ಆದರೆ ಮುಂಬಯಿ ಸೇರಿದಂತೆ ಅಲ್ಲೆಲ್ಲಾ ಕನ್ನಡದ ವ್ಯಕ್ತಿಯನ್ನು ಸ್ಮರಿಸುವ ಯಾವೊಂದು ರಸ್ತೆಯೂ ಇಲ್ಲ. ವಲಸೆ ಬಂದವರಿಗೆ ಚಾಪೆ ಹಾಸುವ ಮೊದಲ ನಗರಿ ಮುಂಬಯಿಯಲ್ಲಿ ಯಾವುದೋ ಹಳೇ ರಸ್ತೆಗೆ ಸರ್‌.ಎಂ.ವಿಶ್ವೇಶ್ವರಯ್ಯನವರ ಹೆಸರು ಇಟ್ಟಿದ್ದರು. ಆದರೀಗ ಆ ರಸ್ತೆ ಒಂದು ಪಳೆಯುಳಿಕೆ. ಮಂಗಳೂರು ಮೂಲದ ಕೆಲ ಮಂದಿಯ ಹೆಸರುಗಳನ್ನು ಅವರು ಮಾಡಿರುವ ನಾಗರಿಕ ಸೇವೆಯ ದೆಸೆಯಿಂದಷ್ಟೆ ರಸ್ತೆಗಳಿಗೆ ಇಡಲಾಗಿದೆ. ಇದನ್ನು ಹೊರತುಪಡಿಸಿದರೆ, ಗಾಂಧಿ, ನೆಹರು, ವಿವೇಕಾನಂದ ಹೆಸರುಗಳನ್ನುಳಿದು ಮಿಕ್ಕೆಲ್ಲಾ ರಸ್ತೆಯ ಹೆಸರುಗಳು ಒಂದೋ ಮುಂಬಯಿಯ ಜನರವು, ಇಲ್ಲವೇ ಮಹಾರಾಷ್ಟ್ರದ ಹೆಸರಾಂತ ವ್ಯಕ್ತಿಗಳವು.

ಕಲಾಕ್ಷೇತ್ರಕ್ಕೆ ಹರಿಹರ, ರಾಘವಾಂಕ ಅಥವಾ ಗುಬ್ಬಿ ವೀರಣ್ಣನವರ ಹೆಸರಿಡಬೇಕಿತ್ತು

ಬೆಂಗಳೂರಿನ ವಿಷಯಕ್ಕೆ ಬಂದಾಗ, ರಾಜಗೋಪಾಲಾಚಾರಿ ಹೆಸರಿನಲ್ಲಿ ರಾಜಾಜಿನಗರವಿದೆ. ಆದರೆ ಟಿಪ್ಪೂ ಸುಲ್ತಾನ್‌ ಹಾಗೂ ಕಿತ್ತೂರು ಚೆನ್ನಮ್ಮನನ್ನು ಸ್ಮರಿಸುವ ಒಂದೇ ಒಂದು ರಸ್ತೆ ಇಲ್ಲ. ತ್ಯಾಗರಾಜನಗರವಿದೆ. ಕನಕ ಅಥವಾ ಪುರಂದರ ನಗರ ಇಲ್ಲ. ಕನಕದಾಸ ವೃತ್ತ ಅಷ್ಟೇನೂ ಮುಖ್ಯವಾಗುವುದಿಲ್ಲ. ಗಾಂಧಿ, ನೆಹರು, ಭೋಸ್‌, ನರಸಿಂಹರಾಜ, ಕೃಷ್ಣರಾಜ, ಚಾಮರಾಜ ಇಂಥವರ ಹೆಸರಿನ ರಸ್ತೆಗಳು, ಬಜಾರುಗಳು, ನಗರಗಳು ಅಸಂಖ್ಯ.

ಸ್ಯಾಂಕಿ ರಸ್ತೆ ಈಗಲೂ ಅದೇ ಹೆಸರಲ್ಲಿದೆ. ಚೌಡಯ್ಯ ರಸ್ತೆ ಎಂದು ಬದಲಿಸುವ ಗೊಡವೆಗೆ ಯಾರೂ ಹೋಗಿಲ್ಲ. ರವೀಂದ್ರ ಕಲಾಕ್ಷೇತ್ರಕ್ಕೆ ಹರಿಹರ, ರಾಘವಾಂಕ ಅಥವಾ ಗುಬ್ಬಿ ವೀರಣ್ಣನವರ ಹೆಸರಿಡಬೇಕಿತ್ತು. ಶಾಂತಿನಗರ, ಮಲ್ಲೇಶ್ವರ, ಜಯನಗರ, ಬನಶಂಕರಿ ಮೊದಲಾದವು ಧಾರ್ಮಿಕತೆಯ ಬಿಂಬಗಳೇ ವಿನಃ ಯಾವುದೇ ಸ್ಮರಣೆಯ ಹೆಸರುಗಳಲ್ಲ.

ಬಿಡಿಎಗೊಂದು ಬಹಿರಂಗ ಪತ್ರ

ಹೆಸರುಗಳನ್ನು ಬದಲಿಸುವಾಗಲೂ ಎಚ್ಚರಿಕೆ ಅಗತ್ಯ. ಈಗಾಗಲೇ ನಾಲಗೆಯಲ್ಲಿ ಬೆಸೆದಿರುವ ಮೇಖ್ರಿ ಸರ್ಕಲ್‌, ಸ್ಯಾಂಕಿ ರಸ್ತೆಗಳ ಹೆಸರುಗಳನ್ನು ಏಕಾಏಕಿ ಬದಲಿಸಿದಲ್ಲಿ ಫಲಿತಾಂಶ ದಕ್ಕದು, ಅದು ಸದುದ್ದಿಶ್ಯದ್ದೂ ಆಗದು. ಹೀಗಾಗಿ ನಾನು ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕ್ಕೆ ಬರೆಯುತ್ತಿದ್ದೇನೆ; ಮಹಾನಗರ ಪಾಲಿಕೆ (ಬಿಎಂಸಿ) ಗೆ ಅಲ್ಲ. ಅಭಿವೃದ್ಧಿ ಅಥವಾ ವಿಸ್ತರಣೆಯ ಹಂತದಲ್ಲಿ ನಾಡು- ನುಡಿಗೆ ಕೊಡುಗೆ ಇತ್ತ ಮಹನೀಯರನ್ನು ನೆನೆಯುವುದು ಅಗತ್ಯ. ಕೇವಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರನ್ನು ಸ್ಮರಿಸಿದರಷ್ಟೆ ಸಾಲದು. ಭಾಷೆ, ಸಂಸ್ಕೃತಿ, ಆರ್ಥಿಕ ಕ್ಷೇತ್ರ, ಬದುಕಿದ ನೆಲ ಮೊದಲಾದೆಡೆಗಳಲ್ಲಿ ನಿಸ್ಪೃಹ ಸೇವೆ ಸಲ್ಲಿಸಿದ ಮಂದಿಯನ್ನು ನಾವು ನೆನೆಯಬೇಕು.

ಮೈಸೂರಲ್ಲಿ ಸಯ್ಯಾಜಿ ರಾವ್‌ ರಸ್ತೆಯಿದೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರಿನ ರಸ್ತೆಯೂ ಉಂಟು. ಟಿಪ್ಪೂ ಸುಲ್ತಾನ ಅಥವಾ ಕಿತ್ತೂರು ಚೆನ್ನಮ್ಮನ ಹೆಸರಲ್ಲಿ ಒಂದೇ ಒಂದು ರಸ್ತೆಯಿಲ್ಲ ! ಈ ಎಲ್ಲಾ ಬದಲಾವಣೆಗಳನ್ನು ತರಬಲ್ಲ ಅಧಿಕಾರ ನನ್ನಲ್ಲಿಲ್ಲ ಅನ್ನೋದು ಗೊತ್ತು. ಆದರೆ ಎಷ್ಟೆಲ್ಲಾ ಮಹನೀಯರು ಯಾವುದೋ ಮೂಲೆಗೆ ಸರಿಯುತ್ತಾರಲ್ಲ ಎಂಬುದಕ್ಕೆ ನನ್ನ ವಿಷಾದವಿದೆ. ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಈ ಕೆಳಕಂಡ ಮಹನೀಯರ ಹೆಸರನ್ನು ರಸ್ತೆಗಳಿಗೆ ಇಟ್ಟು ಸ್ಮರಿಸುವಂತಾದರೆ ನಾ ಧನ್ಯ-----

ಸಂಗೀತಗಾರರು : ಕುಮಾರ ಗಂಧರ್ವ, ಗಾನಯೋಗಿ ಪಂಚಾಕ್ಷರಿ, ಮಲ್ಲಿಕಾರ್ಜುನ ಮನ್ಸೂರ್‌, ಚೌಡಯ್ಯ, ಗಂಗೂಬಾಯಿ ಹಾನಗಲ್‌, ರಾಜಾ ಐಯ್ಯಂಗಾರ್‌, ಮೈಸೂರು ವಾಸುದೇವಾಚಾರ್ಯ, ದೊರೆಸ್ವಾಮಿ ಐಯ್ಯಂಗಾರ್‌ ಇತರರು.

ಕವಿ, ಸಾಹಿತಿಗಳು : ಪುರಂದರದಾಸ, ಕನಕದಾಸ, ವಿಜಯದಾಸ, ನೃಪತುಂಗ, ಹರಿಹರ, ಪಂಪ, ಸರ್ವಜ್ಞ (ಚೆನ್ನೈನಲ್ಲಿ ಈತನ ಪ್ರತಿಮೆ ಸ್ಥಾಪಿಸಬೇಕೆಂದು ನೀವು ಹೇಳುತ್ತಿದ್ದೀರಿ, ಅದು ಬೆಂಗಳೂರಲ್ಲಿ ಇದೆಯಾ ಎಂದು ಮೊದಲು ನೋಡಿಕೊಳ್ಳಿ!), ಮುದ್ದಣ್ಣ, ಅಕ್ಕಮಹಾದೇವಿ, ಬಸವಣ್ಣ, ಅ.ನ.ಕೃ, ತ.ರಾ.ಸು, ಬೀಚಿ, ಮಾಸ್ತಿ, ಶಿವರಾಮ ಕಾರಂತ, ಕುವೆಂಪು, ಲಂಕೇಶ್‌, ಹಾ.ಮಾ.ನಾಯಕ್‌, ತ್ರಿವೇಣಿ, ಡಾ.ಗೋಕಾಕ್‌, ಗೋವಿಂದ ಪೈ, ಪರ್ವತವಾಣಿ, ಶ್ರೀರಂಗ, ಟಿ.ಪಿ.ಕೈಲಾಸಂ, ಗೊರೂರು ರಾಮಸ್ವಾಮಿ ಮೊದಲಾದವರು (ಇದೊಂದು ಉದ್ದ ಪಟ್ಟಿ. ಯಾಕೆಂದರೆ, ಸಮಕಾಲೀನ ಕನ್ನಡ ಸಾಹಿತ್ಯ ದೇಶದಲ್ಲೇ ಶ್ರೀಮಂತವಾದದ್ದು).

ರಾಜವಂಶಗಳು/ ಸ್ವಾತಂತ್ರ್ಯ ಹೋರಾಟಗಾರರು/ ರಾಜಕಾರಣಿಗಳು/ ಯೋಧರು/ ಆಡಳಿತಗಾರರು : ಚಾಲುಕ್ಯ, ರಾಷ್ಟ್ರಕೂಟ, ಕದಂಬ, ಹೊಯ್ಸಳ, ಹಕ್ಕ ಬುಕ್ಕ, ಪುಲಿಕೇಶಿ, ಮಯೂರ ವರ್ಮ, (ಗೋವಾ ರಸ್ತೆ ಸಾರಿಗೆ ಹೆಸರು ಕದಂಬ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಗಳ ಮತ್ತು ಹೊಟೇಲ್‌ ಸರಪಳಿಯ ಹೆಸರು ಚಾಲುಕ್ಯ ಅನ್ನೋದು ನಿಮಗೆ ಗೊತ್ತೆ ? ಈ ಹೆಸರುಗಳ ಹೈಜಾಕ್‌ ಮಾಡಿರುವುದು ಮೊದಲ ನೋಟದಲ್ಲೇ ನಮಗೆ ತಿಳಿಸೋದೇನೆಂದರೆ- ಕದಂಬ ಹಾಗೂ ಚಾಲುಕ್ಯ ಮನೆತನಗಳು ಕನ್ನಡ ಮೂಲದವಲ್ಲ !) ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಟಿಪ್ಪೂ ಸುಲ್ತಾನ್‌, ಜನರಲ್‌ ತಿಮ್ಮಯ್ಯ, ಜನರಲ್‌ ಕಾರ್ಯಪ್ಪ, ಸರ್‌ ಮಿರ್ಜಾ ಇಸ್ಮಾಯಿಲ್‌, ಸರ್‌ ಎಂ. ವಿಶ್ವೇಶ್ವರಯ್ಯ, ಕೆಂಗಲ್‌ ಹನುಮಂತಯ್ಯ, ಸದಾಶಿವ ಕಾರ್ನಾಡ್‌, ದೇವರಾಜ್‌ ಅರಸ್‌, ಕಡಿದಾಳ್‌ ಮಂಜಪ್ಪ ಮೊದಲಾದವರು.

ಕಲೆ/ ಸಿನಿಮಾ : ಪುಟ್ಟಣ್ಣ ಕಣಗಾಲ್‌, ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಎಂ.ವಿ. ವೆಂಕಟಪ್ಪ, ನರಸಿಂಹ ರಾಜು, ಕಲ್ಪನ, ಹುಣಸೂರು ಕೃಷ್ಣಮೂರ್ತಿ ಮುಂತಾದವರು.

ರಸ್ತೆಗಳಿಗೆ ಹೆಸರಿಡುವುದರಲ್ಲಿ ಬೆಂಗಳೂರು ಒಂದು ಟ್ರೆಂಡ್‌ ಹುಟ್ಟಿಹಾಕಿದೆ. ಇದೇ ಮುಂದುವರೆದಲ್ಲಿ ತುಮಕೂರು, ಚಿತ್ರದುರ್ಗ ಅಥವಾ ಬೀದರ್‌ನಲ್ಲೂ ಗಾಂಧಿ, ನೆಹರು, ಭೋಸ್‌, ವಿವೇಕಾನಂದ, ಅಂಬೇಡ್ಕರ್‌, ಸಾವರ್ಕರ್‌ ಮೊದಲಾದವರ ಹೆಸರುಗಳ ರಸ್ತೆಗಳು ಹುಟ್ಟಿಕೊಳ್ಳುತ್ತವೆ.

ರಸ್ತೆ ಅಥವಾ ಬಡಾವಣೆಗಳಿಗಷ್ಟೆ ಈ ಹೆಸರುಗಳನ್ನಿಡುವುದು ಸೀಮಿತವಲ್ಲ. ಪ್ರವಾಸೋದ್ಯಮ, ಸಾರಿಗೆ, ವಿದ್ಯುತ್‌ ಮೊದಲಾದ ನಿಗಮ ವಗೈರೆಗಳಿಗೂ ಹೆಸರಾಂತ ವ್ಯಕ್ತಿಗಳ ಹೆಸರನ್ನು ಇಡಬಹುದು. ಉದಾಹರಣೆಗೆ ಬೆಂಗಳೂರಿನ ಗಸ್ತು ಪೊಲೀಸ್‌ ಪಡೆ ಹೊಯ್ಸಳ.

ಮರು ಹೆಸರನ್ನು ಇಡುವುದು ಒಂದು ಸರ್ಕಸ್ಸಾಗುತ್ತದೆ. ಅದು ಫಲದಾಯಕವಾಗದು. ಮದ್ರಾಸೇ ಇದಕ್ಕೊಂದು ಉದಾಹರಣೆ. ಹೀಗಾಗಿ ಯಾವುದೇ ಹೊಸ ಹೆಸರನ್ನು ಇಡುವ ಮೊದಲೇ ಸಾಕಷ್ಟು ಯೋಚಿಸಿ, ನಿರ್ಧಾರ ಕೈಗೊಳ್ಳುವುದು ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X