ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೆಯ ಧರಿಸಿದವನ ಮಲೆಯ ಮಡಿಲಲ್ಲಿ...

By Staff
|
Google Oneindia Kannada News

ಬೆಂಗಳೂರಿಂದ ನೀವು ಪಶ್ಚಿಮದತ್ತ ಆಕಾಶ ನೋಡಿದರೆ ಎತ್ತರದೊಂದು ಬೆಟ್ಟ ಆಗಸಕ್ಕೆ ಮುತ್ತಿಕ್ಕುತ್ತಿರುವುದು ಕಾಣುತ್ತದೆ. ಅದೇ ದಕ್ಷಿಣ ಕಾಶಿ ಶಿವಗಂಗೆ. ಬೆಂಗಳೂರು- ತುಮಕೂರು ರಸ್ತೆಯಲ್ಲಿ 42 ಕಿ.ಮೀ. ದೂರದಲ್ಲಿರುವ ದಾಬಸ್‌ಪೇಟೆ ಬಳಿ ಎಡಕ್ಕೆ ತಿರುಗಿ ಏಳೆಂಟು ಕಿ.ಮೀ. ಪಯಣಿಸಿದಲ್ಲಿ ಶಿವಗಂಗೆ ಸಿಗುತ್ತದೆ. ಕರ್ನಾಟಕದ ಎತ್ತರದ ಬೆಟ್ಟ-ಗ-ಳ-ಲ್ಲೊಂ-ದಾ-ದ ಈ ಬೆಟ್ಟ ಹತ್ತುವುದೇ ಒಂದು ಮಜಾ. ಬೆಟ್ಟದ ತುಟ್ಟ ತುದಿಯ ನಂದಿ ಸುತ್ತಿ ಬಂದರೆ ಸಾರ್ಥಕ್ಯ. ಹರಕೆ ಹೊತ್ತ ಮಂದಿ ಹೊರೆ ಹೊತ್ತು ನಿರಾಯಾಸ ಸಾಗುವುದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ಅದಳವಂಶದ ವಿಷ್ಣುವರ್ಧನ ಕಟ್ಟಿಸಿದ ಗಂಗಾಧರೇಶ್ವರ ದೇವಾಲಯ ಇಲ್ಲಿನ ಬೃಹತ್‌ ದೇವಾಲಯ. ಇಲ್ಲಿನ ಗಂಗಾಧರೇಶ್ವರನ ಲಿಂಗಕ್ಕೆ ತುಪ್ಪ ಸವರಿದರೆ ಅದು ಬೆಣ್ಣೆಯಾಗುತ್ತದೆಂಬ ಪ್ರತೀತಿ ಇದೆ. ಈ ಜಾಗೆ ಎಷ್ಟು ತಂಪು ಎಂಬುದಕ್ಕಿದು ನಿದರ್ಶನ. ಅನೇಕ ತೀರ್ಥಗಳನ್ನು ಗರ್ಭದಲ್ಲಿಟ್ಟುಕೊಂಡ ಈ ಬೆಟ್ಟದ ಅರ್ಧಭಾಗದಲ್ಲಿ ಒರಳುಕಲ್ಲು ತೀರ್ಥವಿದೆ. ಆ ತೀರ್ಥ ದ ನೀರು ಯಾರ ಕೈಗೆ ಎಟಕುತ್ತದೋ ಅಂಥವರು ಅದೃಷ್ಟವಂತರು ಎಂಬುದು ಜನರ ನಂಬುಗೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲೆ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳೆಂಬ ತಪ್ಪು ಅಭಿಪ್ರಾಯ ಜನರಲ್ಲಿದೆ. ವಾಸ್ತವವಾಗಿ ಆಕೆ ಸಲ್ಲೇಖನ ವ್ರತ ಕೈಗೊಂಡು ಜೀವ ತ್ಯಜಿಸಿದಳೆಂಬುದು ಇತಿಹಾಸಕಾರರ ಅಭಿಮತ.

ಬೆಟ್ಟದ ಸಂದಿನ ನಡುವೆ ತಣ್ಣೆನಿಸುವ ಪಾತಾಳ ಗಂಗೆ, ಹರಕೆ ಗಣಪತಿ, ರೇಣುಕಾ, ಶಾರದಾದೇವಿ, ಆಂಜನೇಯ, ಸುಬ್ರಹ್ಮಣ್ಯ ಮೊದಲಾದ ಪುಟ್ಟ ದೇವಾಲಯಗಳೂ ಇಲ್ಲುಂಟು. ಗಂಗಾಧರೇಶ್ವರನ ದೇವಾಲಯದಲ್ಲಿ ಸುರಂಗ ಮಾರ್ಗವೊಂದಿದ್ದು ಅದು ಬೆಂಗಳೂರಿನ ಗವಿ ಗಂಗಾಧರೇಶ್ವರನ ದೇವಾಲಯವ ಸಂಪರ್ಕಿಸುತ್ತದೆ ಎಂದು ನಂಬಿಕೆ. ಒಂದೊಂದು ದಿಕ್ಕಿನಿಂದ ಒಂದೊಂದು ಥರಾ ಕಾಣುವ ಶಿವಗಂಗೆ ಬೆಟ್ಟ ನಂದಿ, ಸರ್ಪ, ಗಂಗಾಧರ, ಗಣಪ ಮೊದಲಾದ ಆಕಾರಗಳಲ್ಲಿ ಕಾಣುತ್ತದೆ. ತಂಗಲು ಇಲ್ಲಿ ಒಳ್ಳೆ ಹೊಟೇಲು ಇಲ್ಲ. ಸಂಚಾರಕ್ಕೆ ಬಸ್ಸುಗಳು- ಮ್ಯಾಕ್ಸಿಕ್ಯಾಬ್‌ಗಳಿವೆ. ತೊಂದರೆಯಿಲ್ಲ.

ಥಂಡಾ ಥಂಡಾ ಕೂಲ್‌ ಕೂಲ್‌: ತಾಲ್ಲೂಕಿನಲ್ಲಿ ಇನ್ನೊಂದು ಪುಟ್ಟ ಬೆಟ್ಟ. ಅದರ ಮೇಲೊಂದು ಕೋಟೆ; ಶೂರಗಿರಿ. ಬೇಸಗೆಯಲ್ಲಿ ರಿಲೀಫ್‌ ಕೊಡುವ ತಂಪಾದ ಜಾಗೆ. ಸ್ಥಳದ ಹೆಸರು ನಿಜಗಲ್ಲು. ಹಳೇ ನಿಜಗಲ್ಲು ಎಂದೂ ಕರೆಯುತ್ತಾರೆ. ನೆಲಮಂಗಲದಿಂದ 23 ಕಿ.ಮೀ. ದೂರದಲ್ಲಿದೆ. ಬೆಟ್ಟ ಕಡೆದು ಮಾಡಿರುವ ಗುಹೆ ಎಸಿಗಿಂತಲೂ ಹಿತವಾದ ತಂಪೆರೆಯುತ್ತದೆ.

ನೆನಪಲ್ಲುಳಿದ ನೆಲವರು : ಜಿನ ಪಂಥೀಯರು ಹೆಚ್ಚಾಗಿದ್ದ ತಾಲ್ಲೂಕಿನ ಎಲೆ ಕ್ಯಾತನಹಳ್ಳಿಯಲ್ಲಿ ಹಿಂದೆ ತಾಮ್ರದ ಪಾತ್ರೆಗಳು ತಯಾರಾಗುತ್ತಿದ್ದವಂತೆ. ಈಗ ಈ ಕಾಯಕ ಶ್ರವಣಬೆಳಗೊಳಕ್ಕೆ ವರ್ಗಾಯಿಸಲ್ಪಟ್ಟಿದೆ. ಇಂಥಾ ಹಳತಾದರೂ ಅರಿಯದ ಹೊಸತುಗಳು, ತಾಣಗಳ, ಹುದುಗಿಸಿಟ್ಟಿಕೊಂಡಿರುವ ನೆಲಮಂಗಲ ವರದರಾಜ ಶೆಟ್ಟಿಯವರಂಥ ಸ್ವಾತಂತ್ರ್ಯ ಹೋರಾಟಗಾರನ್ನು ನಾಡಿಗೆ ಕೊಟ್ಟಿದೆ. ದೊಡ್ಡಬೆಲೆ ನರಸಿಂಹಾಚಾರ್‌, ಸೊಂಡೇಕೊಪ್ಪ ಶ್ರೀಕಂಠಶಾಸ್ತ್ರಿಯಂಥಾ ವಿದ್ವಾಂಸರು- ಮೇಷ್ಟ್ರು ಇವತ್ತಿಗೂ ಜನಮನದಲ್ಲಿದ್ದಾರೆ. ರಂಗ ಹಾಗೂ ಸಿನಿಮಾ ಜಗತ್ತಿನ ಹೊನ್ನಪ್ಪ ಭಾಗವತರ್‌ ತಾಲ್ಲೂಕಿನ ಹ್ಯಾಡಾಳಿನವರು. ನಿವೃತ್ತ ಚೀಫ್‌ ಎಪಿಗ್ರಫಿಸ್ಟ್‌ ಆಫ್‌ ಇಂಡಿಯಾ, ಲಕ್ಷ್ಮೀನಾರಾಯಣ ರಾವ್‌ ನೆಲಮಂಗಲದವರು. ತನ್ನ ಹಾಡಿನಿಂದ ಮನೆಮಾತಾಗಿದ್ದ ಚೌಡಿಕೆ ಸುಬ್ಬಯ್ಯ ತಾಲ್ಲೂಕಿನ ಕೊಡುಗೆ.

ಇದು ನೆಲಮಂಗಲ. ಬೆಂಗಳೂರಿನಲ್ಲಿ ತಂಗುವ ಮಂದಿ ಒಂದು ದಿನ ಬಿಡುವು ಮಾಡಿಕೊಂಡರೆ ಸಾಕು. ಇಡೀ ತಾಲ್ಲೂಕಿನ ತಾಣಗಳನ್ನು ಟೂ ವ್ಹೀಲರ್‌ನಲ್ಲೇ ನೋಡಿಬರಬಹುದು. ಮನಸ್ಸು ಮಾಡಿ.

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X