• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಂಕದ ಸಿಂಗಾರಿ, ಧುಮ್ಮಿಕ್ಕುವ ಜಲನಾರಿ

By Staff
|

ಜಲಪಾತ ಅಂದಕೂಡಲೇ ನೆನಪಿಗೆ ಬರುವುದು ಮಾನವನಾಗಿ ಹುಟ್ಟಿದ ಮೇಲೆ ನೋಡಲೇಬೇಕಾದ ಜೋಗದ ಗುಂಡಿ. ಜೋಗದ ಭವ್ಯತೆಯೇ ಅಂಥಾದ್ದು . ಆದರೆ, ಜೋಗದಷ್ಟು ಭವ್ಯ, ಭಾರೀ ಅಲ್ಲದಿದ್ದರೂ ತಂತಮ್ಮ ಅನನ್ಯತೆ, ಸೌಂದರ್ಯಗಳಿಂದಾಗಿ ಮನ ಸೆಳೆವ ಜಲಪಾತಗಳು ಕರ್ನಾಟಕದಲ್ಲಿ ಸಾಕಷ್ಟಿವೆ. ಅಂಥಾ ಕೆಲವು ಪ್ರಮುಖ ಜಲಪಾತಗಳನ್ನು ಹೆಕ್ಕಿ ತಂದಿದ್ದೇವೆ. ಜಲಲಲ .. ನೀರಹಾಡಿಗೆ ಮೈ- ಮನಸ್ಸು ಕೊಡಿ .

ಎತ್ತರದ ವೃಕ್ಷಗಳ ನಡುವೆ ಬಿತ್ತರಗೊಳ್ಳುವ ಅಬ್ಬಿ

ಸೂರ್ಯ ಕಿರಣಗಳ ಮರೆಮಾಡುತ್ತ ಮುಗಿಲ ಚುಂಬಿಸುವ ವೃಕ್ಷಗಳ ನಡುವೆ ಕಣ್ಣು ತುಂಬುವ ಈ ಜಲಪಾತಕ್ಕೆ ಜೆಸ್ಸಿ ಫಾಲ್ಸ್‌ ಎನ್ನುವ ಹೆಸರೂ ಇದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಪನದಿಯ ಸೃಷ್ಟಿ ಈ ಅಬ್ಬಿ . ಕೊಡಗಿನ ಕೇಂದ್ರ ಮಡಿಕೇರಿಯಿಂದ 5 ಕಿಮೀ ದೂರದಲ್ಲಿದೆ.

ಹಾಲು ಹೊಳೆ.. ಹಾಲುನೊರೆ.. ಇದು ದೂದ್‌ಗಂಗಾ

ಹಾಲಿನ ಹೊಳೆಯೇ ಹುಚ್ಚಾಗಿ ಧುಮ್ಮಿಕ್ಕುವ ಸೊಬಗು ಗೋವಾದ ಕೊಲೆಂ ರೈಲ್ವೆ ನಿಲ್ದಾಣದಿಂದ 10 ಕಿಮೀ ದೂರದಲ್ಲಿದೆ. ಗೋವಾದ ರಾಜಧಾನಿ ಪಣಜಿಯಿಂದ ದೂದ್‌ ಗಂಗಾ ಜಲಪಾತಕ್ಕೆ ತಾಸಿನ ಹಾದಿ, ಅಂದರೆ 60 ಕಿಮೀ. ರೈಲಿನಲ್ಲೇ ಪ್ರಯಾಣಿಸಬೇಕು. ಚಾರಣಕ್ಕೂ ಅವಕಾಶವಿದೆ. ಈ ಸೊಬಗಿಗೆ ದೂದ್‌ಸಾಗರ್‌ ಎನ್ನುವ ಹೆಸರೂ ಇದೆ.

ಮುಗಿಲಿಂದ ಜಾರಿದ ಗಗನ ಚುಕ್ಕಿ- ಭರ ಚುಕ್ಕಿ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಘನತೆ ಪಡೆದಿರುವುದು ತನ್ನಲ್ಲಿನ ಜಲಪಾತ ಶಿವನಸಮುದ್ರದಿಂದ. ಕಾವೇರಿ ನದಿಯ ಸೋಜಿಗ ಈ ಜಲ ಧಾರೆ. ಗಗನ ಚುಕ್ಕಿ, ಭರ ಚುಕ್ಕಿ ಎನ್ನುವ ಕವಲುಗಳಾಗಿ ಲಾಳಾಕೃತಿಯಲ್ಲಿ ಜಲಪಾತ ಧುಮ್ಮಿಕ್ಕುತ್ತದೆ. ರಭಸ ಹೆಚ್ಚಾದಾಗ ನೋಡಬೇಕು, ಒಂದೇ ಕವಲಂತೆ ಕಾಣುವ ಭ್ರಮೆಯ. ಮೈಸೂರಿನಿಂದ 50 ಕಿಮೀ, ಬೆಂಗಳೂರಿನಿಂದ 76 ಕಿಮೀ ದೂರದಲ್ಲಿದೆ ಈ ಚೈತನ್ಯ, ಚೆಲುವಿನ ತಾಣ. ಅಂದಹಾಗೆ, ಭಾರತದಲ್ಲಿ ಮೊದಲ ಬಾರಿಗೆ ವಿದ್ಯುತ್‌ ಉತ್ಪಾದನೆಯಾದದ್ದು ಇಲ್ಲಿಯೇ.

ಗೋಕಾಕ ನೋಡದ ಕಣ್ಣುಗಳ್ಯಾಕ

ಗೋಕಾಕದ ಚಲುವೇ ಅಂಥಾದ್ದು . ಕರ್ನಾಟಕದ ನಯಾಗರ ಎಂದೇ ಹೆಸರಾದ ಈ ಧಾರೆ ಬೆಳಗಾವಿಯಿಂದ 60 ಕಿಮೀ ದೂರದಲ್ಲಿದೆ. ಗೋಕಾಕ್‌ನಿಂದ ಐದೇ ಕಿಮೀ ಉದ್ದದ ಹಾದಿ. ಈ ಸೊಬಗು ಘಟಪ್ರಭೆಯ ಸೃಷ್ಟಿ . 162 ಅಡಿ ಎತ್ತರದಿಂದ ಧರೆಗಿಳಿಯುವ ಜಲಪಾತದ ಸದ್ದು ಒಂದು ಕಿಮೀ ದೂರದವರೆಗೆ ಮೊರೆಯುತ್ತದೆ. ಲಾಳಾಕಾರದ ಗೋಕಾಕ ಸೃಷ್ಟಿಸುವ ಹಾಲುನೊರೆಯ ಸೊಬಗು ನೋಡಿಯೇ ತಣಿಯಬೇಕು.

ಮಾನವನಾಗಿ ಹುಟ್ಟಿದ ಮ್ಯಾಲೆ ಕಾಣಲೇ ಬೇಕಾದ ಜೋಗದ ಗುಂಡಿ

ಗೋಕಾಕ ಕರ್ನಾಟಕದ ನಯಾಗರವಾದರೆ, ಜೋಗ ಭಾರತದ ನಯಾಗರ. ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳ ನಡುವೆ ಜಲಲ ಧಾರೆಯ ನರ್ತನ. ಗೆರಸೊಪ್ಪೆ ಧಾರೆಯ ಮತ್ತೊಂದು ಹೆಸರು. ಶರಾವತಿ ಅಮ್ಮ . ತೀರ್ಥಹಳ್ಳಿ ಸಮೀಪದ ಅಂಬುತೀರ್ಥದಲ್ಲಿ ಉಗಮಿಸುವ ಶರಾವತಿ ಮೈದುಂಬಿ ಜೋಗವಾಗುತ್ತಾಳೆ. ಜೋಗಕ್ಕೆ ನಾಲ್ಕು ಮುಖ- ರಾಜ, ರಾಣಿ, ರೋರರ್‌, ರಾಕೆಟ್‌. 962 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಾಳೆ. ಸಾಗರದಿಂದ 35 ಕಿಮೀ ದೂರದಲ್ಲಿದೆ ಈ ನಯಾಗರ.

ಗರತಿಯ ತ್ಯಾಗ ನೆನಪಿಸುವ ಮದಗ

ಹಾವೇರಿ ಜಿಲ್ಲೆಯಲ್ಲಿರುವ ಮದಗ ಜಲಪಾತಕ್ಕೆ ರಾಣೆಬೆನ್ನೂರಿನಿಂದ 34 ಕಿಮೀ ದೂರದ ಹಾದಿ. ಹಸಿರು ಸಿರಿಯ ನಡುವೆ 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ನೋಡುಗರ ಮೈ ಮರೆಸುತ್ತದೆ. ಗರತಿಯ ತ್ಯಾಗದ ಜನಪದ ಐತಿಹ್ಯವನ್ನು ಹೊಂದಿರುವ ಮದಗದ ಕೆರೆ ಜಲಪಾತದ ಪಕ್ಕದಲ್ಲಿದೆ. ಇದರಿಂದಾಗಿಯೇ ಮಾಯದಂಥಾ ಮಳೆ ಬಂತಣ್ಣಾ ಮದಗದ ಕೆರೆಗೆ ಹಾಡು ಜಲಪಾತ ನೋಡುವಾಗ ನಿಮಗೆ ನೆನಪಾಗುತ್ತದೆ.

ನಾಲ್ಕು ಹೋಳಾಗಿ ಧುಮ್ಮಿಕ್ಕುವ ಮಹಾಶ್ವೇತೆ ಸಾತೊಡ್ಡಿ

ಯಲ್ಲಾಪುರದಿಂದ 20 ಕಿಮೀ ದೂರದಲ್ಲಿ ಸಾತೊಡ್ಡಿ ಜಲಪಾತ ಧುಮ್ಮಿಕ್ಕುತ್ತಿದೆ. ನಾಲ್ಕು ಹೋಳಾಗಿ 300 ಅಡಿ ಆಳಕ್ಕೆ ಇಳಿಯುವ ಸಾತೊಡ್ಡಿ ದೆಬ್ಬೇಸಾಲು ಎಂದೂ ಜನಪ್ರಿಯಳು. ಹಸಿರು ಹೊದಿಕೆಯ ನಡುವೆ ಹರಿಯುವ ಈ ಮಹಾಶ್ವೇತೆ ಕೊನೆಗಾಣುವುದು ಕಾಳಿ ನದಿಯಲ್ಲಿ.

ವಾರ್ತಾಸಂಚಯ

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more