ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಬೀಚ್‌ಗಳು

By Staff
|
Google Oneindia Kannada News

ಬೇಸಿಗೆ ಬಂದಿದೆ. ಮಕ್ಕಳಿಗೆ ಪರೀಕ್ಷೆಯೂ ಮುಗಿದಿದೆ. ಕಚೇರಿಗೆ ನಾಲ್ಕು ದಿನ ರಜೆ ಹಾಕಿ ಕರ್ನಾಟಕದ ಕರಾವಳಿಯಲ್ಲಿ ಸುತ್ತಾಡಬೇಕು ಎಂದು ಮನ ತುಡಿಯುತ್ತಿದೆ. ಉಕ್ಕಿ ಉಕ್ಕಿ ಬರುವ ಸಮುದ್ರದ ಅಲೆಗಳಲ್ಲಿ ಜಲಕ್ರೀಡೆ ಆಡಬೇಕು ಎಂದು ಮನಸ್ಸು ಹಾತೊರೆಯುತ್ತಿದೆ ಅಲ್ಲವೆ? ಹಾಗಾದರೆ ತಡವೇಕೆ, 320 ಕಿ.ಮೀಟರ್‌ಗಳ ಉದ್ದದ ಕರಾವಳಿ ತೀರವನ್ನು ಹೊಂದಿರುವ ಕರ್ನಾಟಕದಲ್ಲಿ ಬೀಚ್‌ಗಳಿಗೆ ಕೊರತೆಯೇ ? ಸೂಟ್‌ಕೇಸ್‌ ರೆಡಿ ಮಾಡಿಕೊಂಡು ಬಸ್‌ ಏರಲು ಸಿದ್ಧರಾಗಿ...

ಕರ್ನಾಟಕ ಕರಾವಳಿಯ ಪ್ರಮುಖ ಬೀಚ್‌ಗಳ ಕಿರುಪರಿಚಯ :

Om Beachಕಾರವಾರ : ನಾ ನೋಡಿ ನಲಿಯುವ ಕಾರವಾರ... ಓ ಕಾರವಾರ, ಕಡಲಿನ ತೀರ.. ಎಂಬ ಚಿತ್ರಗೀತೆ ಕೇಳಿರುವಿರಲ್ಲವೇ? ಕಾರವಾರ, ಸುಂದರ ಸಮುದ್ರತೀರ ನಗರ. ಬೆಂಗಳೂರಿನಿಂದ ಕಾರವಾರಕ್ಕೆ 525 ಕಿ.ಮೀ. ಕಾರವಾರದಿಂದ ಗೋವಾ ಬಲು ಹತ್ತಿರ. 100 ಕಿ.ಮೀಟರ್‌.

ಕಾರವಾರಕ್ಕೆ ರಾಜ್ಯದ ಬಹುತೇಕ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಬಸ್‌ ಸೌಕರ್ಯ ಇದೆ. ಕಾರವಾರದಿಂದ ಗೋವಾ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಮೈಸೂರುಗಳಿಗೆ ಬಸ್‌ ಸೌಕರ್ಯವಿದ್ದರೆ, ಕೊಂಕಣ ರೈಲ್ವೆಯೂ ಇಲ್ಲೇ ಹಾದು ಹೋಗುತ್ತದೆ. ಖಾಸಗೀ ಹಾಗೂ ಸರಕಾರಿ ಇಲಾಖೆಗಳ ಪ್ರವಾಸೋದ್ಯಮದ ಬಸ್‌ ಸೌಕರ್ಯವೂ ಇದೆ.

ಸಮುದ್ರ ತೀರದಲ್ಲಿರುವ ಹಲವು ಪ್ರೇಕ್ಷಣೀಯ ಸ್ಥಳ ಹಾಗೂ ಬೀಚ್‌ಗಳನ್ನು ಕಾಣುವ ಪ್ರವಾಸಿಗರಿಗೆ ಕಾರವಾರ ಒಂದು ಉತ್ತಮ ಸ್ಟಾರ್ಟಿಂಗ್‌ ಪಾಯಿಂಟ್‌. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ಗೀತಾಂಜಲಿಯ ಕವಿ ರವೀಂದ್ರನಾಥ ಠಾಕೂರರ ಪ್ರಶಂಸೆಗೂ ಪಾತ್ರವಾಗಿ, ಪ್ರೇರಣೆ ನೀಡಿದ್ದ ಈ ಸುಂದರ ತಾಣ ಕರ್ನಾಟಕಕ್ಕೆ ಪ್ರಕೃತಿ ದೇವಿ ನೀಡಿದ ಕೊಡುಗೆಯೇ ಸರಿ. ರವೀಂದ್ರನಾಥ ಠಾಕೂರರು ತಮ್ಮ ಪ್ರಥಮ ನಾಟಕವನ್ನು ರಚಿಸಿದ್ದೇ ಈ ಕಡಲ ತೀರದಲ್ಲಿ.

ಕಾರವಾರದ ಬೀಚ್‌ನಲ್ಲಿ ಅಡ್ಡಾಡಿ, ಸಮುದ್ರ ಸ್ನಾನ, ಸೂರ್ಯ ಸ್ನಾನ, ಮರಳ ಸ್ನಾನ ಮಾಡಿ ಆನಂದಪಟ್ಟ ಪರಿಸರ ಪ್ರಿಯರು, ದೈವಭಕ್ತರು ನಂತರ ಹತ್ತಿರದಲ್ಲೇ ಇರುವ ಸದಾಶಿವಗಢದ ಕೋಟೆ, ದುರ್ಗ ಮಂದಿರ, ಅಷ್ಟಕೋನದ ಅಪರೂಪದ ಚರ್ಚ್‌ ಮತ್ತು 300 ವರ್ಷಗಳಷ್ಟು ಹಳೆಯ ವೆಂಕಟರಮಣ ದೇವಾಯಲವನ್ನು ನೋಡಬಹುದು.

ನೀವು ವನ್ಯಜೀವಿ ಹಾಗೂ ಪಕ್ಷಿ ಪ್ರೇಮಿಗಳಾದರೆ, ಇಲ್ಲಿಗೆ ಕೇವಲ 93 ಕಿ.ಮೀಟರ್‌ ದೂರದಲ್ಲಿರುವ ದಾಂಡೇಲಿ ಉದ್ಯಾನಕ್ಕೆ ಹೋಗಿ ಬರಬಹುದು. ಬಿಸಿಲಿನಲ್ಲಿ ನಿಮ್ಮ ಬಾಯಾರಿಕೆ ತೀರಿಸಲು ತಾಜ ಬೊಂಡ ಅರ್ಥಾತ್‌ ಎಳನೀರು ದೊರಕುತ್ತದೆ. ವಾಸ್ತವ್ಯಕ್ಕೆ 56 ಕಿ.ಮೀಟರ್‌ ದೂರದಲ್ಲಿ ಸುಸಜ್ಜಿತವಾದ ಕೆ.ಎಸ್‌.ಟಿ.ಡಿ.ಸಿ.ಯ ಹೊಟೆಲ್‌ ಸಮುದ್ರ ಗೋಕರ್ಣ ಇದೆ. ಹತ್ತಿರದಲ್ಲೇ ಇರುವ ಶಿರಸಿ ಮಾರಿಕಾಂಬ ದೇವಾಲಯ, ಶಿರಸಿ ಬಳಿ ಇರುವ ಇತಿಹಾಸ ಪ್ರಸಿದ್ಧ ಬನವಾಸಿ, ಸನಿಹದಲ್ಲೇ ಇರುವ ಚಾರಣಕ್ಕೆ ಹೆಸರಾದ ಯಾಣವನ್ನೂ ನೋಡಬಹುದು.

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X