ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾ ಕ್ರಿಕೆಟ್‌ ನೋಡಲು ಕೀರ್ತಿ ಆಜಾದ್‌,ಶತ್ರುಘ್ನ ಸಿನ್ಹಗೆ ಬುಲಾವು

By Staff
|
Google Oneindia Kannada News

ಶಾರ್ಜಾ : ಕ್ರಿಕೆಟರ್ಸ್‌ ಬೆನಿಫಿಟ್‌ ಫಂಡ್‌ ಸೀರೀಸ್‌ (ಸಿಬಿಎಫ್‌ಎಸ್‌) ನ ಮುಖ್ಯ ವ್ಯವಸ್ಥಾಪಕ ಜಾಹಿದ್‌ ನೂರಾನಿ ಇನ್ನೂ ತೃಪ್ತರಾಗಿಲ್ಲ. ಭಾರತ ಶಾರ್ಜಾದಲ್ಲಿ ಆಡಲು ಒಲ್ಲೆ ಅಂದಿದೆ. ಆದರೆ, ಯಾಕೆ ಎಂದು ವಿವರಿಸಬೇಕು ಎಂಬುದು ಅವರ ಆಗ್ರಹ. ಭಾರತದ ನಿರ್ಧಾರ ಬದಲಿಸುವುದೇ ಸಿಬಿಎಫ್‌ಎಸ್‌ ಪರಮೋದ್ದೇಶ. ಈ ಕಾರಣ ಬಿಜೆಪಿಯ ಮಂತ್ರಿಗಳಾದ ಕೀರ್ತಿ ಆಜಾದ್‌ (ಮಾಜಿ ಟೆಸ್ಟ್‌ ಕ್ರಿಕೆಟಿಗ) ಹಾಗೂ ಚಿತ್ರನಟ ಶತ್ರುಘ್ನ ಸಿನ್ಹಗೆ ತ್ರಿಕೋನ ಸರಣಿ ನೋಡಲು ಬನ್ನಿ ಎಂದು ಸಿಬಿಎಫ್‌ಎಸ್‌ ಆಮಂತ್ರಣ ಕೊಟ್ಟಿದೆ.

ಟೊರಾಂಟೋ, ಸಿಂಗಪೂರ್‌ ಹಾಗೂ ಶಾರ್ಜಾದಲ್ಲಿ ಇನ್ನು 3 ವರ್ಷಗಳ ಕಾಲ ಭಾರತ ತಂಡ ಕ್ರಿಕೆಟ್‌ ಆಡುವುದಿಲ್ಲ ಎಂದು ಭಾರತ ಸರ್ಕಾರ ಕಳೆದ ವಾರ ಘೋಷಿಸಿತು. ಆದರೆ ಯಾಕೆ ? ಈ ಪ್ರಶ್ನೆಗೆ ಸರ್ಕಾರ ಉತ್ತರ ಕೊಟ್ಟಿಲ್ಲ. ಶಾರ್ಜಾ ಕ್ರಿಕೆಟ್‌ ಮೆಕ್ಕಾ. ಅತಿ ಹೆಚ್ಚು, ಅಂದರೆ 167 ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಿರುವ ಅಗ್ಗಳಿಕೆ ಅದರದು. ಭಾರತ- ಪಾಕ್‌ ಹಣಾಹಣಿ ಅಂದರೆ ಮುಗಿಯಿತು, ಟಿಕೆಟ್ಟಿಗೆ ಜನ ನಾ ಮುಂದು ತಾ ಮುಂದು ಅನ್ನುತ್ತಾರೆ. ಇಂಥಾದರಲ್ಲಿ ಭಾರತ ಹಟ ಹಿಡಿದಿರುವುದು ತರವಲ್ಲ ಎನ್ನುತ್ತಿದೆ ಸಿಬಿಎಫ್‌ಎಸ್‌.

ಜಾಹಿದ್‌ ನೂರಾನಿ ಮಾತಾಡುತ್ತಾರೆ ..

ಭಾರತದ ಮನಸ್ಸನ್ನು ಬದಲಿಸಿಲು ಏನು ಮಾಡಬೇಕು ಎಂಬುದು ನಮಗೆ ತಿಳಿಯಬೇಕಷ್ಟೆ . ಭಾರತ ಕಳೆದೊಂದು ವರ್ಷದಿಂದ ಪಾಕ್‌ ವಿರುದ್ಧ ಆಡಲು ಒಲ್ಲೆ ಅಂದಿದೆ. ಈಗಲೂ ಅದೇ ಪಟ್ಟು ಭಾರತದ್ದು. ಇದೊಂದೇ ಕಾರಣವಾದರೆ ನಾವು ಹೆಚ್ಚೇನೂ ಮಾಡಲಾಗದು. ಆದರೆ ಶಾರ್ಜಾದಲ್ಲಿ 3 ವರ್ಷಗಳ ಕಾಲ ಆಡುವುದಿಲ್ಲ ಅಂದರೇನರ್ಥ ? ನಮ್ಮ ವ್ಯವಸ್ಥೆಯಲ್ಲೇನಾದರೂ ಲೋಪವಿದೆಯಾ ? ಇವಕ್ಕೆಲ್ಲಾ ಭಾರತ ಸರ್ಕಾರ ಉತ್ತರ ಕೊಡಬೇಕು.

ಶಾರ್ಜಾ ಬೆಟ್ಟಿಂಗ್‌ ಹಾಗೂ ಮ್ಯಾಚ್‌ಫಿಕ್ಸಿಂಗ್‌ ತಾಣ ಅನ್ನುತ್ತಾರೆ. ಈಗ ಅದರತ್ತ ಎಚ್ಚರಿಕೆಯ ಕಣ್ಣು ಇರಿಸಲಾಗಿದೆ. ಭ್ರಷ್ಟಾಚಾರದ ಬಗ್ಗೆ ಗುಮಾನಿ ಬಂದರೆ ವಿಚಾರಣೆ ನಡೆಸಲು ಉನ್ನತ ಮಟ್ಟದ ಸಮಿತಿಯಾಂದನ್ನು ಸಿದ್ಧಪಡಿಸಲಾಗಿದೆ. ಬ್ರಿಟಿಷ್‌ ಸಾಲಿಸಿಟರ್‌ ಜಾರ್ಜ್‌ ಸ್ಟಾಪಲ್ಸ್‌, ವೆಸ್ಟಿಂಡೀಸ್‌ನ ಮಾಜಿ ನಾಯಕ ಕ್ಲೈವ್‌ ಲಾಯ್ಡ್‌ ಹಾಗೂ ಯುಎಇ ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಮಿತಿಯ ಸದಸ್ಯರು. ಇವರಿಗೆ ಸಿಬಿಎಫ್‌ಎಸ್‌ ಸಂಪೂರ್ಣ ಬೆಂಬಲ ನೀಡಲಿದೆ. ಪಾಕ್‌ನ ಆಸಿಫ್‌ ಇಕ್ಬಾಲ್‌ ಮೇಲೆ ಭ್ರಷ್ಟಾಚಾರದ ಆರೋಪ ಎದ್ದಿತು. ಸಿಬಿಎಫ್‌ಎಸ್‌ ಮುಖ್ಯ ಸಂಯೋಜನಾಧಿಕಾರಿಯಾಗಿ ಅವರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇಷ್ಟು ದೀರ್ಘ ಕಾಲ ಕೆಲಸ ಮಾಡಿದವರನ್ನು ಉಚ್ಚಾಟಿಸಲು ನಾವು ಸಿದ್ಧರಿರಲಿಲ್ಲ. ಆದರೆ ಆಸಿಫ್‌ ತಾವೇ ಖುರ್ಚಿಯಿಂದ ಇಳಿದರು.

ಭಾರತದೊಟ್ಟಿಗೆ ಕೋಕ್‌ ಕೂಡ ಹಿಂದಕ್ಕೆ : ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತ ಸಮಾಧಾನವಾಗಿಲ್ಲ. ಟೂರ್ನಿಯಲ್ಲಿ ಆಡಲು ಭಾರತ ಒಲ್ಲೆ ಅಂದಿರುವುದು ಟಿಕೆಟ್‌ ಮಾರಾಟಕ್ಕೆ ಹೊಡೆತ ಕೊಟ್ಟಿದೆ. ಭಾರತ ಒಲ್ಲೆ ಎಂದಾಕ್ಷಣ ಲಘುಪಾನೀಯ ದಿಗ್ಗಜ ಕೋಕಾಕೋಲಾ ಟೂರ್ನಿಯ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿಯಿತು. ಇದು ಇನ್ನೊಂದು ಪೆಟ್ಟು. ಇಷ್ಟೆಲ್ಲಾ ಪೆಟ್ಟು ತಿಂದರೂ ಸಿಬಿಎಫ್‌ಎಸ್‌ ಭಾರತ ಸರ್ಕಾರದ ವಿರುದ್ಧ ಕೋರ್ಟಿಗೆ ಹೋಗಿಲ್ಲ (ಕೋರ್ಟಿಗೆ ಹೋಗಿದೆ ಅಂತ ಪುಕಾರುಗಳೆದ್ದಿವೆ).

ಸಹಾಯ ಧನದಲ್ಲಿ 35 ಸಾವಿರ ಡಾಲರ್‌ ಖೋತಾ : ಭಾರತದ ಮಾಜಿ ಕ್ರಿಕೆಟಿಗರಾದ ಮನ್ಸೂರ್‌ ಅಲಿ ಖಾನ್‌ ಪಟೌಡಿ, ಫರೂಕ್‌ ಎಂಜಿನಿಯರ್‌ ಹಾಗೂ ಚೇತನ್‌ ಶರ್ಮಗೆ ಸಿಬಿಎಫ್‌ಎಸ್‌ ಕೊಡಲಿರುವ ಸಹಾಯ ಧನದಲ್ಲಿ 35 ಸಾವಿರ ಡಾಲರ್‌ನಷ್ಟು ಕಡಿತ ಉಂಟಾಗಲಿದೆ. ಇದು ತನ್ನ ಮಾಜಿ ಕ್ರಿಕೆಟಿಗರಿಗೆ ಭಾರತವೇ ಕೊಡುತ್ತಿರುವ ಬಳುವಳಿ! ಸಹಾಯ ಧನ ಯಾವ ಕ್ರಿಕಟಿಗರಿಗೆ ಸೇರಬೇಕೆಂದು ನಿರ್ಧರಿಸುವುದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ, ನಾವಲ್ಲ. ಇನ್ನು ಮುಂದೆ ಭಾರತ ಆಡಿದಲ್ಲಿ ಮಾತ್ರ ಅಲ್ಲಿನ ಮಾಜಿ ಕ್ರಿಕೆಟಿಗರಿಗೆ ಈ ಸಹಾಯ ಲಭ್ಯ.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X