ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ- ನ್ಯೂಜಿಲೆಂಡ್‌ಒಂಡೇ ಫಿಕ್ಸ್‌ ಆಗಿತ್ತು : ಮಿಯಾಂದಾದ್‌

By Staff
|
Google Oneindia Kannada News

ಕರಾಚಿ : ಕ್ರಿಕೆಟ್ಟಿನ ಕಣದಲ್ಲಿ ತನ್ನ ಕತ್ತು ಕೊಯ್ದುಕೊಳ್ಳುವಂಥಾ ಕೋಪದಿಂದ ಸುದ್ದಿ ಮಾಡುತ್ತಿದ್ದ ಛಲಗಾರ ಹಾಗೂ ಪಾಕಿಸ್ತಾನ ತಂಡದ ಉಚ್ಚಾಟಿತ ತರಪೇತುದಾರ ಜಾವೆದ್‌ ಮಿಯಾಂದಾದ್‌ ಹೇಳುತ್ತಿದ್ದಾರೆ- ಪಾಕಿಸ್ತಾನ ನ್ಯೂಜಿಲೆಂಡ್‌ಗೆ ಒಂಡೇ ಸರಣಿಯಲ್ಲಿ ಸೋತಿರುವುದು ಮ್ಯಾಚ್‌ಫಿಕ್ಸಿಂಗ್‌ನಿಂದಾಗಿ. ಈ ಬಗ್ಗೆ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನಿಖೆ ನಡೆಸಬೇಕು.

ಇಷ್ಟು ದಿನ ದೇಶಕ್ಕೋಸ್ಕರ ಬಾಯಿಮುಚ್ಚಿ ಕೂತಿದ್ದೆ. ಈಗ ಬಾಯಿಬಿಡುವ ಕಾಲ ಬಂದೊದಗಿದೆ. ಪಾಕಿಸ್ತಾನ ಬೇಕಂತಲೇ ನ್ಯೂಜಿಲೆಂಡ್‌ಗೆ ಸೋತಿದೆ ಅನ್ನುವುದನ್ನು ನಮ್ಮ ಬಳಿ ಇರುವ ವಿಡಿಯೋ ಮತ್ತು ಆಡಿಯೋ ತುಣುಕುಗಳೇ ಸ್ಪಷ್ಟಪಡಿಸುತ್ತವೆ. ಹಕೀಕತ್ತನ್ನು ಪತ್ತೆ ಮಾಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಶೀಘ್ರವೇ ವಿಚಾರಣೆಗೆ ಆದೇಶ ಕೊಡಬೇಕು. ಇಲ್ಲವಾದರೆ ಮ್ಯಾಚ್‌ಫಿಕ್ಸಿಂಗ್‌ಗೆ ಮಂಗಳ ಹಾಡುವುದು ಅಸಾಧ್ಯವಾದೀತು ಎಂಬುದು ಮಿಯಾಂದಾದ್‌ ಆಗ್ರಹ.

ಎಲ್ಲಾ ಗೊತ್ತಿದ್ದೂ ಸುಮ್ಮನಿದ್ದೆ : ಪಾಕಿಸ್ತಾನ ಒಂಡೇ ಸರಣಿಯನ್ನು 2-3ರಲ್ಲಿ ಸೋತಿತು. ಹ್ಯಾಮಿಲ್ಟನ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲೂ ಹೀನಾಯ ಸೋಲುಂಡ ಪಾಕ್‌ ಸರಣಿಯನ್ನು 1-1ರಲ್ಲಿ ಸಮನಾಗಿಸಿಕೊಂಡಿತು. ಕಳೆದ 6 ವರ್ಷಗಳಿಂದ ಪಾಕ್‌ ಕ್ರಿಕೆಟ್ಟಿಗೆ ಕಳ್ಳಾಟದ ಆರೋಪ ಅಂಟಿದೆ. ನ್ಯಾಯಮೂರ್ತಿ ಮಲಿಕ್‌ ಮೊಹಮ್ಮದ್‌ ಖಯ್ಯಾಮ್‌ ವಿಚಾರಣೆ ನಡೆಸಿದ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಪಾಕ್‌ ತಂಡದ ಮಾಜಿ ನಾಯಕ ಸಲೀಂ ಮಲಿಕ್‌ ಹಾಗೂ ವೇಗಿ ಅತಾವುರ್‌ ರೆಹಮಾನ್‌ ಮೇಲೆ ನಿಷೇಧ ಹೇರಲಾಗಿದೆ. ಈ ವಿಷಯ ನನಗೆ ಮೊದಲೇ ಗೊತ್ತಿತ್ತು. ಹೇಳಿದ್ದರೆ ವಿಶ್ವ ಕಪ್‌ ಕ್ರಿಕೆಟ್ಟಿಗೇ ತೊಂದರೆಯಾದೀತೆಂದು ಸುಮ್ಮನಾಗಿದ್ದೆ ಎನ್ನುತ್ತಾರೆ ಮಿಯಾಂದಾದ್‌.

ಆಟಗಾರರ ತಪ್ಪಿಗೆ ನಾನು ಬಲಿಪಶು : ಅವರೇ ಹೇಳುವಂತೆ ನ್ಯೂಜಿಲೆಂಡ್‌ ಪ್ರವಾಸದಲ್ಲಿ ತಡಬಡಾಯಿಸಿದ ಪಾಕ್‌ ತಂಡದ ಆಟಕ್ಕೆ ಬಲಿಪಶುವಾದದ್ದು ಮಿಯಾಂದಾದ್‌. ಮಂಗಳವಾರ ಅವರನ್ನು ತರಪೇತುದಾರ ಪಟ್ಟದಿಂದ ಪಿಸಿಬಿ ಕೆಳಗಿಳಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಆಟಾಗಾರರು ಹೋದ ಪುಟ್ಟ ಬಂದ ಪುಟ್ಟ ಎಂಬ ಧೋರಣೆ ತೋರಿದರು. 300ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಅನುಭವ ಇರುವ ಬೌಲರ್‌ಗಳೂ ಅಡ್ಡಾದಿಡ್ಡಿ ಬೌಲಿಂಗ್‌ ಮಾಡಿದರು. ಈ ಆಟ ಕಂಡಾಗಲೇ ನನಗೆ ಈ ಪಂದ್ಯ ಫಿಕ್ಸ್‌ ಆಗಿದೆ ಎಂದೆನಿಸಿತು ಎಂಬುದು ಮಿಯಾಂದಾದ್‌ ವಿವರಣೆ.

ವಾಸಿಂ ಅಕ್ರಂ, ವಕಾರ್‌ ಯೂನಸ್‌, ಇಂಜಮಾಮ್‌- ಉಲ್‌- ಹಕ್‌, ಸಯೀದ್‌ ಅನ್ವರ್‌, ಮುಶ್ತಾಕ್‌ ಅಹ್ಮದ್‌ ಹಾಗೂ ಅಕ್ರಂ ರಾಜಾ ಮೇಲೆ ಖಯ್ಯಾಮ್‌ ಆಯೋಗದ ವಿಚಾರಣೆ ನಂತರ ದಂಡ ವಿಧಿಸಲಾಗಿತ್ತು. ಈಗ ಮತ್ತೆ ಕಳ್ಳಾಟದಲ್ಲಿ ತೊಡಗಿರುವುದು ನಿಜವೇ ಆದರೆ ಪಾಕ್‌ ಕ್ರಿಕೆಟ್ಟಿಗೇ ಶೇಮ್‌ ಶೇಮ್‌. ಅಲ್ಲವೇ?

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X