Get Updates
Get notified of breaking news, exclusive insights, and must-see stories!

ನಾಡ ಮಡಿಲಿಗೆರಸಋಷಿಯ ಮನೆ

ಇನ್ನು ‘ಭಾರತ ಜನನಿಯ ತನುಜಾತೆ’ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಮನೆಗೆ ನಾವೆಲ್ಲ ಹೋಗಬಹುದು. ಕವಿ ಉಸಿರಾಡಿದ ಕ್ಷಣಗಳನ್ನು, ಆ ಕ್ಷಣಗಳನ್ನು ಒದಗಿಸಿದ ಪರಿಸರದ ಮುಖಾಂತರ ಅಂದಾಜು ಮಾಡಬಹುದು. ಖರೆಯ ಆಜೂಬಾಜಿಗೆ ನೀವು ತಲುಪಿದರೂ ಆಶ್ಚರ್ಯವಿಲ್ಲ . ದೊಡ್ಡ ಮನಸ್ಸು ಮಾಡಿದ ಆಮೆವೇಗದ ಸರ್ಕಾರಕ್ಕೆ ಧನ್ಯವಾದಗಳು.

ಕುವೆಂಪು ಜೀರ್ಣಿಸಿಕೊಂಡಿದ್ದ ಶೇಕ್ಸ್‌ಪಿಯರ್‌, ವರ್ಡ್ಸ್‌ವರ್ತ್‌ ಮೊದಲಾದವರಿಗೆ ಸಂದ ಉಡುಗೊರೆ ಈಗ ಅವರಿಗೂ ಸಲ್ಲುತ್ತಿರುವುದು ಸಂತಸವೇ. ಶನಿವಾರ, ಏಪ್ರಿಲ್‌ 7 ರಸಋಷಿಯ ಹುಟ್ಟುಹಬ್ಬ , ಇತಿಹಾಸದ ಪುಟ ಸೇರಿದೆ. ಮುಖ್ಯಮಂತ್ರಿ ಕೃಷ್ಣ ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಉಡುಗೊರೆ ಕೊಟ್ಟಿದ್ದಾರೆ. ಸುಮಾರು 200 ವರ್ಷಕ್ಕೂ ಹೆಚ್ಚು ಹಳೆಯ ಮನೆಯನ್ನು ಮತ್ತೆ ಕಳೆಗಟ್ಟುವಂತೆ ಮಾಡಲು ಸರ್ಕಾರ 8 ವರ್ಷಗಳ ಕಾಲ ಸರ್ಕಸ್ಸು ಮಾಡಿದೆ. ಬನ್ನಿ, ಅದರತ್ತ ಒಂದು ಕ್ಷಿಪ್ರ ನೋಟ ಬೀರೋಣ-

1992-- 2001 : 1992. ಬಂಗಾರಪ್ಪ ನೇತೃತ್ವದ ಸರ್ಕಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ರಚಿಸಿ, ಅವರ ಮನೆಯನ್ನು ಸ್ಮಾರಕವಾಗಿಸಲು ನಾಂದಿ ಹಾಡಿತು. ಮನೆಯನ್ನು ರಿಪೇರಿ ಮಾಡುವುದೋ, ಕೆಡವಿ ಮತ್ತೆ ಕಟ್ಟುವುದೋ ಪ್ರಶ್ನೆ ಎದುರಾಯಿತು. ರಿಪೇರಿ ಮಾಡಿದರೆ ಸಾಕೆಂದು ಸರ್ಕಾರ ಹೇಳಿತು. ಆದರೆ ಮನೆ ಎಷ್ಟು ಶಿಥಿಲವಾಗಿತ್ತೆಂದರೆ, ಮುಟ್ಟಿದ ಭಾಗ ಕಳಚಿ ಧುತ್ತೆಂದು ಬೀಳುತ್ತಿತ್ತು. 1996- ಪುನರ್‌ ನಿರ್ಮಾಣವೇ ಸರಿ ಎಂದಿತು ಸರ್ಕಾರ.

ಹಾಳಾಗಿದ್ದ ಬಾಸೆಲ್‌ ಮಿಷನ್‌ ಕಂಪನಿಯ ಹಂಚಿನ ಜಾಗೆಗೆ ನಾಡಹಂಚು ಸೇರಿದವು. ಕುಸುರಿಯಿಂದ ಕವನ ಹೇಳುತ್ತಿದ್ದ 18 ಕಂಬಗಳ ಅಂಕಣ ಹೆಬ್ಬಾಗಿಲು ಈಗಲೂ ಹಿಂದಿನಂತೆಯೇ ಇದೆ. ಆದರೆ ಅದರ ಮೇಲೆ ಹೊಸ ಪಾಲಿಷ್‌ ಮೂಡಿದೆಯಷ್ಟೆ . ಮೂರಂತಸ್ತಿನ ಸೂರು, ಮರದ ಮೆಟ್ಟಿಲು, ಕಿರಿದಾದ ಕದಗಳು ಮನೆ ತನ್ನ ಹಳೆಯ ಸತ್ವ ಉಳಿಸಿಕೊಂಡಿರುವಂತೆ ಮೂಡಿವೆ. ಬಾಣಂತಿಮನೆ, ಊಟದಮನೆ, ಹೇಮಾವತಿ ಅವರೊಡನೆ ಕುವೆಂಪು ಮದುವೆಯಾದ ಮಂಟಪ ಎಲ್ಲಾ ಉಂಟು.

ಕಣಜ, ಪಣಥ, ಮೀನು ಹಿಡಿಯುವ ಕೋಣೆ, ಕುವೆಂಪು ಓದುತ್ತಿದ್ದ ಕೋಣೆ ಇವೆಲ್ಲಾ ಇನ್ನು ಮುಂದೆ ಕುವೆಂಪು ಸಂಗ್ರಹಾಲಯಗಳು. ಹಿತ್ತಲಲ್ಲಿ ಹಳೆ ಮಾದರಿಯ ಸ್ನಾನದ ಕೋಣೆ. ಕಂಬಗಳ ಕುಸುರಿಗೆ ಸಾಗರದ ಗುಡಿಗಾರ ವೆಂಕಟೇಶ್‌ ಜೀವತುಂಬಿದರೆ, ಮಾಳಿಗೆಗೆ ಎಚ್‌.ಕೆ.ಜಯಾನಂದ ಹಾಗೂ ರತ್ನಾಕರ್‌ ಮೆರುಗು ನೀಡಿದ್ದಾರೆ. ಇಷ್ಟೆಲ್ಲಾ ಕೆಲಸದ ಉಸ್ತುವಾರಿ ವಹಿಸಿದ್ದು ಶಿವಮೊಗ್ಗ ವೆಂಕಟೇಶ್‌.

ಕಳೆಗಟ್ಟಿರುವ ಕವಿ ಶೈಲ ಬೆಟ್ಟ : ಕುವೆಂಪು ಕವನದ ಸಾಲುಗಳ ನಡುವೆ ಬೆರತುಹೋಗಿರುವ ಕವಿ ಶೈಲ ಬೆಟ್ಟ ಈಗ ಮದುಮಗಳು. ಅವರ ನೆಚ್ಚಿನ ಈ ಜಾಗೆಯಲ್ಲೇ ಅವರ ಸಮಾಧಿಯೂ ಉಂಟು. 13 ಅಡಿ ಎತ್ತರದ ಕಲ್ಲಿನ ಕಮಾನುಗಳು ಈಗ ಕೈಬೀಸಿ ಕರೆಯುತ್ತಿವೆ. ಸಿದ್ಧಾರ್ಥ ಹೆಗಡೆ ಕೊಟ್ಟಿರುವ ಕಾಸಿಗೆ ಶಿವಪ್ರಸಾದ್‌ ಸಾರ್ಥಕ್ಯ ಒದಗಿಸಿದ್ದಾರೆ. ಸುಮಾರು 80 ಲಕ್ಷ ರುಪಾಯಿ ಖರ್ಚು, 8 ವರ್ಷಗಳ ಪ್ರಯತ್ನ ಈಗ ಸ್ಮಾರಕವಾಗಿದೆ. ನೀವೂ ಒಮ್ಮೆ ಭೇಟಿ ಕೊಡಿ.

ಕುಪ್ಪಳ್ಳಿ- ಕವಿ ಶೈಲಕ್ಕೆ 1 ಕೋಟಿ ರುಪಾಯಿ : ಕುವೆಂಪು ಮನೆ ಈಗ ರಾಷ್ಟ್ರೀಯ ಸ್ಮಾರಕ. ಅದು ಹಾಗೇ ಉಳಿದು ಬಿಡಬಾರದು. ಅದು ಯಾತ್ರಾಸ್ಥಳವಾಗಿ ಅಭಿವೃದ್ಧಿ ಹೊಂದಬೇಕು. ಅದರತ್ತ ಸರ್ಕಾರ ಇನ್ನು ಗಮನ ಹರಿಸಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದು, ಮುಂದೆ ಕುಪ್ಪಳ್ಳಿಯ ರಸಋಷಿ ಮನೆ ಇನ್ನಷ್ಟು ಕಳೆಗಟ್ಟುವ ನಿರೀಕ್ಷೆಯಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಅನಂತಕುಮಾರ್‌, ಕುಪ್ಪಳ್ಳಿ ಮತ್ತು ಕವಿ ಶೈಲದ ಅಭಿವೃದ್ಧಿಗೆ 1 ಕೋಟಿ ರುಪಾಯಿ ಖರ್ಚು ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಕೃಷ್ಣ ನೆನಪು : ಮೈಸೂರಿನ ಒಂಟಿಕೊಪ್ಪಲಿನಲ್ಲಿ ಕುವೆಂಪು ಮಹಾರಾಜಾ ಕಾಲೇಜಿಗೆ ತಮ್ಮ ಫ್ರಿಫೆಕ್ಟ್‌ ಪುಟ್ಟ ಕಾರಲ್ಲಿ ಪಯಣಿಸುವ ಹಾದಿಯಲ್ಲಿ ಎಮ್ಮೆಗಳು ಅಡ್ಡಗಟ್ಟುತ್ತಿದ್ದವು. ಆಗ ಆ ಎಮ್ಮೆಗಳನ್ನು ನಾನೇ ಓಡಿಸುತ್ತಿದ್ದೆ. ಕುವೆಂಪು ಕಣ್ಣಲ್ಲೇ ಥ್ಯಾಂಕ್ಸ್‌ ಹೇಳುತ್ತಿದ್ದರು. ಈಗ ಅವರ ನಿವಾಸವನ್ನು ನಾಡಿಗೆ ಅರ್ಪಿಸಲು ಹೆಮ್ಮೆ ಎನಿಸುತ್ತದೆ ಎಂದು ಕೃಷ್ಣ ಶನಿವಾರ ಹರ್ಷಿಸಿದರು.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎನ್‌.ಡಿ.ವೆಂಕಟೇಶ್‌ ಶನಿವಾರದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ, ಪುತ್ರಿ ತಾರಿಣಿ ಹಾಗೂ ಅಳಿಯ ಚಿದಾನಂದ, ಸಾಹಿತಿ ಜಿ.ಎಸ್‌.ಶಿವರುದ್ರಪ್ಪ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಸಿ, ಕಟ್ಟಡ ಪುನರ್ನಿರ್ಮಾಣ ಮಾಡಿದ ಕಲೆಗಾರರು, ಮಂತ್ರಿಗಳಾದ ಡಿ.ಬಿ.ಚಂದ್ರೇಗೌಡ, ಮೋಟಮ್ಮ, ರಾಣಿ ಸತೀಶ4 ಮೊದಲಾದವರು ಹಾಜರಿದ್ದರು.

ಕುವೆಂಪು ನೆನಪಾಗಿ ಅವರ ಮನೆ ನಮ್ಮ - ನಿಮ್ಮದಾಗಿದೆ. ಅದನ್ನು ಉಳಿಸಿ, ಬೆಳೆಸುವಂತೆ ಸರ್ಕಾರವನ್ನು ಎಚ್ಚರಿಸುತ್ತಾ ಇಂಥಾ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ ಕುಮ್ಮಕ್ಕು ಕೊಡುವ ಮನಸ್ಸನ್ನು ನೀವೂ ಯಾಕೆ ಮಾಡಬಾರದು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+