ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 118 ರನ್‌ಗಳ ನಿರಾಯಾಸ ಜಯ, 2-1 ಮುನ್ನಡೆ

By Staff
|
Google Oneindia Kannada News

ಇಂದೋರ್‌ : 10 ಸಾವಿರ ರನ್ನುಗಳ ಮೈಲುಗಲ್ಲು ದಾಟಿದ್ದಲ್ಲದೆ, ಒಂದು ದಿನದ ಪಂದ್ಯಗಳಲ್ಲಿ ತಮ್ಮ 28ನೇ ಶತಕ ದಾಖಲಿಸಿದ ಸಚಿನ್‌ ತಾಳ್ಮೆಯಾಟ ಹಾಗೂ ಹರ್ಭಜನ್‌ ಮತ್ತು ಅಗರ್ಕರ್‌ ಕರಾರುವಕ್ಕಾದ ದಾಳಿಯಿಂದ ಭಾರತ , ಆಸ್ಟ್ರೇಲಿಯಾ ವಿರುದ್ಧ 118 ರನ್‌ಗಳ ಭಾರೀ ಜಯ ಗಳಿಸಿದೆ. ಈಗ ಭಾರತ ಸರಣಿಯಲ್ಲಿ 2-1ರಿಂದ ಮುಂದಿದೆ.

ಗೆಲ್ಲಲು 300 ರನ್‌ ಗಳಿಸುವ ಸವಾಲನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಕಂಡಿತು. ಮತ್ತೆ ತಮ್ಮ ಜಾಗೆಗೆ ಬಂದು ಇನ್ನಿಂಗ್ಸ್‌ ಆರಂಭಿಸಿದ ಗಿಲ್‌ಕ್ರಿಸ್ಟ್‌ , ಜಾಹಿರ್‌ ಖಾನ್‌ ಚೆಂಡುಗಳನ್ನು ಚಿಂದಿ ಉಡಾಯಿಸಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಉತ್ತಮ ಬೆಂಬಲ ಕೊಡುತ್ತಿದ್ದ ಡೇಮಿಯನ್‌ ಮಾರ್ಟಿನ್‌ ಶ್ರೀನಾಥ್‌ ಎಸೆತವನ್ನು ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. ಅಲ್ಲಿಂದ ಆಸ್ಟ್ರೇಲಿಯಾ ಅಲ್ಲಾಡಲು ಶುರುವಾಯಿತು.

ಗಿಲ್‌ಕ್ರಿಸ್ಟ್‌ ಫಾರ್ಮ್‌ ಕಂಡುಕೊಂಡು 70 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್‌ ಇದ್ದ 63 ರನ್‌ ದೋಚಿದರು. 2 ಬಾರಿ ಜೀವದಾನ ಪಡೆದಿದ್ದ ಅವರ ಕ್ಯಾಚನ್ನು ಗಂಗೂಲಿ ಮತ್ತೊಮ್ಮೆ ಬಿಡಲಿಲ್ಲ. ಹರ್ಭಜನ್‌ಗೆ ಗಿಲ್‌ಕ್ರಿಸ್ಟ್‌ ಮೊದಲ ಬಲಿ. ತಡಕಾಡಿ ಹಾಗೂ ಹೀಗೂ 23 ರನ್‌ ಗಳಿಸಿದ್ದ ಪಾಂಟಿಂಗ್‌ ಅಗರ್ಕರ್‌ಗೆ ಕಾಟ್‌ ಅಂಡ್‌ ಬೌಲ್ಡ್‌ ಆದರು. ನಂತರ ಬಂದವರಾರೂ ನಿಂತು ಆಡಲಿಲ್ಲ.

ಭರವಸೆಯ ಆಟಗಾರ ಬೆವೆನ್‌ (6) ಅವರು ಹರ್ಭಜನ್‌ ಉತ್ತಮ ಎಸೆತಕ್ಕೆ ಬೌಲ್ಡ್‌ ಆದರು. ಕೊಂಚ ಪ್ರತಿರೋಧ ತೋರಿದ ಸ್ಟೀವ್‌ ವಾ (23) ಸಚಿನ್‌ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಪೆವಿಲಿಯನ್‌ಗೆ ತೆರಳಿದರು. ಭಾರತದ ಪರ ಹರ್ಭಜನ್‌ 37 ರನ್ನಿತ್ತು (9 ಓವರ್‌) 3 ವಿಕೆಟ್‌ ಕಿತ್ತರೆ, ಅಗರ್ಕರ್‌ 38 (8 ಓವರ್‌) ರನ್ನಿತ್ತು 3 ವಿಕೆಟ್‌ ಪಡೆದರು. 2 ವಿಕೆಟ್‌ ಕಿತ್ತ ಶ್ರೀನಾಥ್‌ ಆಸ್ಟ್ರೇಲಿಯಾ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು. ಆಸ್ಟ್ರೇಲಿಯಾ 181 ರನ್‌ಗಳಿಗೆ ಕುಸಿಯಿತು.

ಇದಕ್ಕೂ ಮುನ್ನ ತಮ್ಮ ಮಾಮೂಲಿ ಆಟವಾಡದೆ ತಾಳ್ಮೆ ಮೆರೆದ ಸಚಿನ್‌ ಒಂಡೇ ಪಂದ್ಯಗಳಲ್ಲಿ 10 ಸಾವಿರ ರನ್‌ಗಳ ಮೈಲುಗಲ್ಲು ನೆಟ್ಟು ಬಹಳ ಮುಂದೆ ಹೋಗಿ, ತಮ್ಮ 28ನೇ ಶತಕವನ್ನೂ ದಾಖಲಿಸಿದರು (19 ಬೌಂಡರಿಗಳಿದ್ದ 139). ಸಲೀಸಾಗಿ ಆಡಿದ ವಿವಿಎಸ್‌ ಲಕ್ಷ್ಮಣ್‌ (6 ಬೌಂಡರಿಗಳಿದ್ದ 83) ಸಚಿನ್‌ಗೆ ಸಾಥ್‌ ನೀಡಿದರು. ಈ ಇಬ್ಬರ ಉತ್ತಮ ಆಟದ ನೆರವಿನಿಂದ 2ನೇ ವಿಕೆಟ್‌ಗೆ 199 ರನ್‌ಗಳು ಬಂದವು.

ನಂತರ ದಿಢೀರ್‌ ಕುಸಿತ ಕಂಡ ಭಾರತ 300ರ ಗಡಿ ದಾಟಲಾಗಲಿಲ್ಲ. ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ 299 ರನ್‌ ಗಳಿಸಿತು. ಆಸ್ಟ್ರೇಲಿಯಾ ಪರ 3 ವಿಕೆಟ್‌ ಕಿತ್ತ ಮೆಕ್‌ಗ್ರಾತ್‌ ಒಂಡೇ ಪಂದ್ಯಗಳಲ್ಲಿ 200 ವಿಕೆಟ್‌ ಪಡೆದ ಗೌರವಕ್ಕೆ ಪಾತ್ರರಾದರು. ಫ್ಲೆಮಿಂಗ್‌ಗೆ 2 ವಿಕೆಟ್‌ ಸಿಕ್ಕಿತು. ರನ್‌ ಓಡುವದರಲ್ಲಿ ಎಂದಿನ ತಡಕಾಟ ಮುಂದುವರೆಸಿದ ಭಾರತದ ಲಕ್ಷ್ಮಣ್‌ ಹಾಗೂ ಹೇಮಾಂಗ್‌ ಬದಾನಿ (23) ರನೌಟ್‌ ಆದರು. ರನ್‌ ವೀರ ಮಾಸ್ಟರ್‌ಬ್ಲಾಸ್ಟರ್‌ ತೆಂಡೂಲ್ಕರ್‌ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X