Get Updates
Get notified of breaking news, exclusive insights, and must-see stories!

ನೀರಿಗೆ ಬಂದೇನವ್ವಾ ತಂಗಿ ಖಾಲಿ ಕೊಡವೇನಾ ...

*ರಾಜು ಮಹತಿ

ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎಂಬ ಗಾದೆಮಾತು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನತೆಗೆ ವಸ್ತುಶಃ ನಿಜವಾಗಿದೆ.

ಈ ಎರಡು ಜಿಲ್ಲೆಗಳಲ್ಲಿ 12ಕ್ಕೂ ಹೆಚ್ಚು ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುತ್ತವೆ. ಆದರೆ ಮಾರ್ಚ್‌ ಬಂತೆಂದರೆ ಪಶ್ಚಿಮ ಘಟ್ಟಗಳ ಬುಡದಲ್ಲೇ ಇರುವ ಸುಳ್ಯ, ಬೆಳ್ತಂಗಡಿ, ಕಾರ್ಕಳಗಳೂ ಸೇರಿದಂತೆ ಸಮುದ್ರ ತೀರದ ಮಂಗಳೂರು, ಮೂಲ್ಕಿ, ಉಡುಪಿ, ಬ್ರಹ್ಮಾವರ, ಕುಂದಾಪುರಗಳಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿದೆ. ಕೊಡಪಾನಗಳ ಸಾಲುಗಳು ತೊಟ್ಟಿಕ್ಕುವ ಬೋರ್‌ವೆಲ್‌ ಮುಂದಿರುತ್ತವೆ.

ಸ್ಥಳೀಯ ಚುನಾಯಿತ ಸಂಸ್ಥೆಗಳ ಸಭೆಗಳಲ್ಲಿಯೂ ಕುಡಿಯುವ ನೀರಿನ ಅಭಾವದ ಪ್ರತಿಧ್ವನಿ ಮೊಳಗುತ್ತದೆ. ಖಾಲಿ ಕೊಡಗಳ ಮೆರವಣಿಗೆ ಪ್ರತಿಭಟನೆಗಳು ನಡೆಯುತ್ತವೆ. ಆದರೆ ಸಮಸ್ಯೆಯನ್ನು ಶಾಶ್ವತವಾಗಿ ನಿಭಾಯಿಸುವ ದಿಶೆಯಲ್ಲಿ ಸಮಗ್ರವಾದ ಯಾವ ಯೋಜನೆಯೂ ಅನುಷ್ಠಾನಗೊಂಡಿಲ್ಲ. ಈ ವರ್ಷ ಕುಡಿಯುವ ನೀರಿಗೆ ಸಂಬಂಧಿಸಿ ರಾಜೀವ್‌ಗಾಂಧಿ ಕುಡಿಯುವ ನೀರಿನ ಚಾಲನಾ ಯೋಜನೆಯಾಂದು ರೂಪಿಸಲಾಗಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡುವ ಯತ್ನ ನಡೆಯುತ್ತಿದೆ ಎನ್ನುತ್ತಾರೆ - ಅಧಿಕಾರಸ್ತರು, ಜನ ಪ್ರತಿನಿಧಿಗಳು.

ವಿಚಾರಸಂಕಿರಣಗಳು ಸಮಾಲೋಚನೆಗಳು ನೀರು ತರುತ್ತವೆಯೇ ?

ರಾಜೀವ್‌ ಗಾಂಧಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿ, ಸಮಾಲೋಚನಾ ಸಭೆಗಳು ವಿಚಾರ ಸಂಕಿರಣಗಳು ನಡೆದಿವೆ. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಘೋರ್ಪಡೆಯವರು ಇದರಲ್ಲಿ ಸ್ವತಃ ಪಾೖಲ್ಗೊಂಡಿದ್ದಾರೆ. ಇಲ್ಲಿ ಕೊಳವೆ ಬಾವಿಗಳಿಂದ ಪ್ರಯೋಜನ ಇಲ್ಲ. ನದಿಗಳಿಗೆ ಸಣ್ಣ ಸಣ್ಣ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿದರೆ ಪ್ರತೀ ಬೇಸಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾದೀತು ಎಂದು ಸ್ಥಳೀಯ ಜನಪ್ರತಿನಿಧಿಗಳು ಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ಕಡಿಮೆ ಖರ್ಚಿನ ಬಾಬತ್ತು ಎಂಬ ಕಾರಣದಿಂದ ಸಚಿವರು ಸದ್ಯಕ್ಕೆ ಕೊಳವೆ ಬಾವಿ ತೋಡುವುದೇ ಸೂಕ್ತ ಎಂದು ಸಲಹೆ ಮಾಡಿದ್ದಾರೆ.

ಕೊಳವೆ ಬಾವಿಗಳಿಗೆ ತುಕ್ಕು ಹಿಡಿಸುವ ಉಪ್ಪುಗಾಳಿ

ವಾತಾವರಣದಲ್ಲಿ ಉಪ್ಪಿನ ಅಂಶ ಇರುವುದರಿಂದ ಕರಾವಳಿ ತೀರದಲ್ಲಿ ತೋಡಿದ ಕೊಳವೆ ಬಾವಿಗಳು ನಾಲ್ಕು ಐದು ವರ್ಷಗಳಲ್ಲಿ ತುಕ್ಕು ಹಿಡಿದು ಹಾಳಾಗುತ್ತವೆ. ಶೇಕಡಾವಾರು ಪ್ರಮಾಣ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೆಲವೆಡೆ ಬೋರ್‌ವೆಲ್‌ಗಳು ಉತ್ತಮವಾಗಿದೆ ಎಂಬ ಸರ್ಚಿಫಿಕೇಟ್‌ ಉಂಟು.

ಮಾರ್ಚ್‌ ಆರಂಭವಾಗುತ್ತಿದ್ದಂತೆಯೇ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ ಸಭೆಗಳಲ್ಲಿ , ಉಡುಪಿ ನಗರ ಸಭೆಯ ಮಾಸಿಕ ಮೀಟಿಂಗ್‌ಗಳಲ್ಲಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್‌, ತಾಲ್ಲೂಕ ಪಂಚಾಯತ್‌ ಸಭೆಗಳಲ್ಲಿ ಕುಡಿವ ನೀರಿನ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತದೆ. ಉಡುಪಿಯಲ್ಲಿ, ನಗರ ಸಭೆ ಸ್ವರ್ಣ ಎರಡನೇ ಹಂತದ ಯೋಜನೆ ಪೂರ್ಣಗೊಳ್ಳದೆ ಸಮಸ್ಯೆ ಪರಿಹಾರವಾಗದು ಎಂಬ ಅಧಿಕೃತ ಉತ್ತರದೊಂದಿಗೆ ಚರ್ಚೆಗೊಂದು ಅಲ್ಪ ವಿರಾಮ ಬೀಳುತ್ತದೆ ವಿನಃ ಟ್ಯಾಪ್‌ಗಳಲ್ಲಿ ನೀರು ಬರುವುದಿಲ್ಲ.

ನೇತ್ರಾವತಿ ನೀರು ಕೊಡುತ್ತಾಳೆ, ಆದರೆ...

ಮಂಗಳೂರು ನಗರಕ್ಕೆ ನೀರುಣಿಸುವ ಪ್ರಮುಖ ಜನಮೂಲವೆಂದರೆ ನೇತ್ರಾವತಿ ನದಿ. ಜಿಲ್ಲೆಗೆ ಇದೊಂದು ಜೀವ ನದಿ. ತುಂಬೆ ಬಳಿ ವೆಂಟೇಜ್‌ ಡ್ಯಾಂ ಕಟ್ಟಿ ಮಂಗಳೂರು ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಇಲ್ಲಿ ಸಾಕಷ್ಟು ನೀರಿದ್ದರೂ ವಿದ್ಯುತ್‌ ಸಮಸ್ಯೆಯಿಂದಾಗಿ ಮಂಗಳೂರು ನಗರದ ತೋಳು ಮತ್ತು ಮುಂಗೈಯಂತಿರುವ ಸುರತ್ಕಲ್‌, ಮೂಲ್ಕಿಗಳೂ ಈಗ ಕುಡಿಯುವ ನೀರಿನ ಕೊರತೆ ಎದುರಿಸುತ್ತದೆ. ಇದಲ್ಲಿ ಮೂಲ್ಕಿಯ ಪರಿಸ್ಥಿತಿ ಕೊಂಚ ಗಂಭೀರವಾಗಿಯೇ ಇದೆ. ನೀರಿಗಾಗಿ ಇಲ್ಲಿಯ ಜನ ಪ್ರತಿಭಟನೆ, ಮುಷ್ಕರ ನಡೆಸಿದ್ದಾರೆ, ಸದ್ಯಕ್ಕೆ ಅಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟೇ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+