ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಬಿಸಿಲು ನಾಲ್ಕಾಣೆಗೆ ಡಜನ್‌!

By Staff
|
Google Oneindia Kannada News

ಬೆಂಗಳೂರು : ಚಾಂದ್ರಮಾನ ಯುಗಾದಿಯ ದಿನ ಅಂದರೆ ಭಾನುವಾರ ಬೆಂಗಳೂರಿನಲ್ಲಿ ಭಾರಿ ಬಿಸಿಲಿತ್ತು. ಚೈತ್ರ - ವಸಂತರೊಂದಿಗೇ ನಾಡಿಗೆ ಬಿಸಿಲೂ ಬಂದಿದೆ. ಬೆಂಗಳೂರೂ ಸೇರಿದಂತೆ ರಾಜ್ಯದ ಎಲ್ಲೆಡೆ ಬಿಸಿಲು ಸುರಿಯುತ್ತಿದೆ. ಮಹಡಿಯ ಮೇಲೆ ಹಪ್ಪಳ ಸಂಡಿಗೆ ಒಣಗುತ್ತಿದ್ದರೆ, ಬಿಸಿಲ ಬೇಗೆ, ಧಗೆಯಿಂದ ಮೈ ಕಾಯುತ್ತಿದೆ. ಬೆವರು ಸುರಿಯುತ್ತಿದೆ. ಸೋಮವಾರ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು.

ಹವಾನಿಯಂತ್ರಿತ ನಗರಿ ಬೆಂಗಳೂರಿನಲ್ಲಿ ಮಾರ್ಚ್‌ ತಿಂಗಳಿನಲ್ಲೇ ಬಿಸಿಲು ಸಕತ್ತಾಗಿ ಏರುತ್ತಿದೆ. ಇದೇನು ಬಿಸಿಲಪ್ಪಾ, ರಣ ಬಿಸಿಲು, ಉಬ್ಬೆಗೆ ಹಾಕಿದಂತೆ ಆಗಿದೆ. ಏನು ಮಾಡೋದು ಎಂದು ಮನೆಯಲ್ಲಿ ಹಿರಿಯರು ಮಾತಾಡುತ್ತಿದ್ದಾರೆ. ಇಲ್ಲ ಬಿಡ್ರಿ ಬೆಂಗಳೂರು ಹಾಳಾಗಿ ಹೋಯ್ತು. ಹಿಂದೆಂದೂ ಈಪಾಟಿ ಬಿಸಿಲಿರಲಿಲ್ಲ. ಬೆಂಗಳೂರಲ್ಲಿ ವರ್ಷೇವರ್ಷೆ ಬಿಸಿಲು ಹೆಚ್ಚುತ್ತಲೇ ಇದೆ. ಹೀಗೇ ಮುಂದುವರಿದರೆ, ಇಲ್ಲೂ ಸನ್‌ಸ್ಟ್ರೋಕ್‌ ಹೊಡೆದು ಜನ ಸತ್ತೇ ಸಾಯ್ತಾರೆ ಎಂಬ ಸ್ವೀಪಿಂಗ್‌ ಸ್ಟೇಟ್‌ಮೆಂಟ್‌ಗಳೂ ಯಥೇಚ್ಛವಾಗಿ ಕೇಳಿಬರುತ್ತಿವೆ.

ಬೆಂಗಳೂರಲ್ಲಿ ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಬಿಸಿಲು ಹೆಚ್ಚಾಗಿದೆಯೇ? ನಾಲ್ಕಾರು ವರ್ಷಗಳಿಂದ ಬೆಂಗಳೂರಿನ ವಾಯುಗುಣದಲ್ಲಿ ಏರುಪೇರುಗಳಾಗಿವೆಯೇ? ವಿಜ್ಞಾನಿಗಳು ವರ್ಷೇ ವರ್ಷೇ ಬಿಸಿಲು ಏರುತ್ತಿದೆ ಎಂಬ ಹೇಳಿಕೆ ಕೇಳಿದರೇ ನಗುತ್ತಾರೆ. ಇದು ಊಹೆಗೂ ನಿಲುಕದ ಕಲ್ಪನೆ. ಚಳಿಗಾಲ ಕಳೆದು ಬೇಸಿಗೆ ಬಂದಾಗ ನಮಗೆ ಬಿಸಿಲು ಏರುತ್ತಿದೆ, ಹೋದ ವರ್ಷಕ್ಕಿಂತ ಈ ವರ್ಷ ಬಿಸಿಲು ಹೆಚ್ಚಾಗಿದೆ ಎಂಬ ಭಾವನೆ ಮೂಡಿಸಿರಬಹುದು ಅಷ್ಟೇ ಅನ್ನುತ್ತಾರೆ.

ಕಳೆದ 60 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ವಯೋವೃದ್ಧರೊಬ್ಬರು ಖಂಡಿತವಾಗಿಯೂ ಬೆಂಗಳೂರಿನಲ್ಲಿ ಪ್ರತಿವರ್ಷ ಕನಿಷ್ಠ ಒಂದು ಡಿಗ್ರಿ ಉಷ್ಣತೆ ಏರುತ್ತಿದೆ ಎಂಬ ಹೇಳಿಕೆಯನ್ನು ನೀಡುತ್ತಾರೆ. ವೈಜ್ಞಾನಿಕವಾಗಿ ಇದು ಸಾಧ್ಯವೇ? ಸುಮ್ಮನೆ ಲೆಕ್ಕ ಹಾಕೋಣ. 1975ರಲ್ಲಿ ಮಾರ್ಚ್‌ ತಿಂಗಳಿನಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಪ್ರತಿವರ್ಷ ಒಂದೊಂದು ಡಿಗ್ರಿ ಹೆಚ್ಚಾಗಿದ್ದೇ ನಿಜವಾದರೆ, ಈ 26 ವರ್ಷಗಳಲ್ಲಿ ಕನಿಷ್ಠ 26ಡಿಗ್ರಿಗಳಷ್ಟು ಉಷ್ಣಾಂಶ ಏರಬೇಕಿತ್ತು. ಅಂದರೆ ಇಂದು ಬೆಂಗಳೂರಿನಲ್ಲಿ ಕನಿಷ್ಠ 58 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕಿತ್ತು ಅಲ್ಲವೇ? ಹಾಗೆಂದ ಮಾತ್ರಕ್ಕೆ ವಾತಾವರಣದಲ್ಲಿ ತಾಪಮಾನ ಏರುವುದೇ ಇಲ್ಲ ಎಂದು ಅರ್ಥವಲ್ಲ. ಈ ಏರಿಕೆ ಪ್ರಮಾಣ ಅತ್ಯಲ್ಪ. ಅಂದರೆ 100 ವರ್ಷಗಳಲ್ಲಿ ಕೇವಲ 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ಉಷ್ಣತೆ ಏರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಬಿಸಿಲೇರಿದ ಅನುಭವ ಆಗುವುದೇಕೆ?: ಉತ್ತರ ಬಹು ಸರಳ. ಮರ ಗಿಡಗಳ ನಾಶ, ಹೆಚ್ಚುತ್ತಿರುವ ವಾಹನಗಳು, ಅವುಗಳಿಂದ ಹೊರಬರುವ ಹೊಗೆ, ಕೆರೆಗಳ ಕಣ್ಮರೆ, ನೈಸರ್ಗಿಕ ವನಗಳ ಜಾಗವನ್ನು ಆಕ್ರಮಿಸಿರುವ ಕಾಂಕ್ರೀಟ್‌ ಕಾಡುಗಳು. ಇದರಿಂದಾಗಿ ವಾತಾವರಣದಲ್ಲಿ ಬಿಸಿಯ ಅನುಭವ ಆಗುತ್ತದೆ. ಆದ್ದರಿಂದಲೇ ಮನೆಯ ಮುಂದೆರಡು ಗಿಡ ಬೆಳೆಸುವುದು ಒಳ್ಳೆಯದು.

ಹಿಂದೆ ಮನೆಗಳನ್ನು ಕಟ್ಟುವಾಗ ಛಾವಣಿ 16-17 ಅಡಿ ಎತ್ತರದಲ್ಲಿರುತ್ತಿತ್ತು. ಇಂದು ಅದು ಕೇವಲ 9-10 ಅಡಿಗಳಿಗೆ ಇಳಿದಿದೆ. ಮಿಗಿಲಾಗಿ ಹೆಂಚು, ಮರದ ತೊಲೆಗಳ ಜಾಗವನ್ನು ಶಾಖ ಹೀರುವ ಕಬ್ಬಿಣ, ಸಿಮೆಂಟ್‌ ಆವರಿಸಿವೆ. ಅವುಗಳು ಹೀರಿ ತಮ್ಮಲ್ಲಿ ಬಹುಕಾಲ ಹಿಡಿದಿಟ್ಟುಕೊಳ್ಳುವ ಕಾವಿನಿಂದಾಗಿ ಸೆಕೆ ಹೆಚ್ಚುವುದು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X