ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಒತ್ತು

By Staff
|
Google Oneindia Kannada News

ಬೆಂಗಳೂರು : ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಪ್ರಕ್ರಿಯೆಯ ಪ್ರಸ್ತಾಪ 2001-02ನೇ ಸಾಲಿಗೆ ಮಂಡಿಸಲಾಗಿರುವ ರಾಜ್ಯ ಬಜೆಟ್‌ನಲ್ಲಿ ಅಡಕವಾಗಿದೆ. ಉತ್ತರ ಕರ್ನಾಟಕದ ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿಯ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಹಾಗೂ ಪ್ರಾದೇಶಿಕ ಅಸಮತೋಲನ ನೀಗಿಸಲು ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ.

ರೈತರಿಗೆ ನೆರವಾಗುವ ಸಣ್ಣ ಉದ್ದಿಮೆಗಳಿಗೆ ಉದಾರ ರಿಯಾಯಿತಿ ನೀಡಲಾಗಿದೆ. ತೆರಿಗೆ ವಂಚನೆ ತಡೆಗೆ ಕ್ರಮ, ತೆರಿಗೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಕೃಷಿ, ರಸ್ತೆ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿಯ ಬಗ್ಗೆಯೂ ಒತ್ತು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ತೆರಿಗೆ ಸುಧಾರಣಾ ಆಯೋಗ ಹಾಗೂ ಹಾರನಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಮಧ್ಯಂತರ ವರದಿ ಶಿಫಾರಸುಗಳು ಹೊಸ ಬಜೆಟ್‌ನಲ್ಲಿ ಅಡಕವಾಗಿರುವುದು ಮೇಲ್ನೋಟಕ್ಕೇ ಕಂಡುಬಂದಿದೆ.

ಸರಕಾರಿ ವೆಚ್ಚ ತಗ್ಗಿಸಲು ಹಲವಾರು ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಕೃಷಿ ವಲಯಕ್ಕೆ ಪ್ರೋತ್ಸಾಹ ನೀಡಿ, ಶ್ರೀ ಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಮಂಡಿಸಲಾಗಿರುವ ಬಜೆಟ್‌ನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಹೊಸ ತೆರಿಗೆ ವಿಧಿಸಲಾಗಿದೆ. ಮೋಟಾರು ವಾಹನ ಹಾಗೂ ಸ್ಟಾಂಪ್‌ ಮತ್ತು ನೋಂದಣಿ ಶುಲ್ಕದಿಂದ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಗಳಿಂದ 286 ಕೋಟಿ ರುಪಾಯಿ ನಿರೀಕ್ಷಿಸಲಾಗಿದೆ.

ಅಬಕಾರಿ ಮೂಲದಿಂದ 10 ಕೋಟಿ ರುಪಾಯಿ, ವಾಣಿಜ್ಯ ತೆರಿಗೆ ಬಾಬ್ತಿನಿಂದ 125 ಕೋಟಿ, ಮೋಟಾರು ವಾಹನ ಕ್ಷೇತ್ರದಿಂದ 54 ಕೋಟಿ ರುಪಾಯಿ ಹಾಗೂ ಸ್ಟಾಂಪ್‌ ಮತ್ತು ನೋಂದಣಿ ಶುಲ್ಕ ಹೆಚ್ಚಳದಿಂದ 95 ಕೋಟಿ ರುಪಾಯಿ ಹೆಚ್ಚುವರಿ ಆದಾಯ ರೂಢಿಸುವ ಗುರಿ ಹೊಂದಲಾಗಿದೆ.

ಇಷ್ಟೆಲ್ಲಾ ಕಸರತ್ತಿನ ನಡುವೆಯೂ ಕೃಷ್ಣ ಅವರು ಕೊರತೆ ಬಜೆಟ್‌ ಅನ್ನೇ ಮಂಡಿಸಿದ್ದಾರೆ. ಮೊಬೈಲ್‌ ಫೋನ್‌, ಇಂಟರ್‌ನೆಟ್‌, ಇ ಕಾಮರ್ಸ್‌, ಇಂಟರ್‌ ಸೈಬರ್‌ ಕೆಫೆ, ಹೆಲಿಕಾಪ್ಟರ್‌, ಏರ್‌ ಟ್ಯಾಕ್ಸಿ ಸೇವೆ ಒದಗಿಸುವ ಕಂಪನಿಗಳನ್ನು ವೃತ್ತಿ ತೆರಿಗೆ ವ್ಯಾಪ್ತಿಗೆ ಸೇರಿಸಲಾಗಿದೆ. ಹಿಂದಿನ ವರ್ಷ ಇದ್ದ ರೈತ ಕಲ್ಯಾಣ ನಿಧಿಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಚಿತ್ರದುರ್ಗ, ಮಾಲೂರು, ಮದ್ದೂರು, ಬಾಗಲಕೋಟೆ, ವಿಜಾಪುರದಲ್ಲಿ ಕೃಷಿ ಸಂಸ್ಕರಣ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ.

ದಾನಿಗಳ ನೆರವಿನಿಂದ ಹಾಗೂ ಶಿಕ್ಷಣ ಇಲಾಖೆ ಮತ್ತು ಕಾರ್ಪೊರೇಟ್‌ ಸಂಸ್ಥೆಗಳ ಸಹಯೋಗದಲ್ಲಿ ಶಾಲೆಗಳ ದತ್ತು ಸ್ವೀಕಾರ ಹಾಗೂ ಅಭಿವೃದ್ಧಿಗೆ ಚಿಂತಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರ ನೆರವಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಕಾರು, ಜೀಪು, ಖಾಸಗಿ ಬಸ್‌ಗಳಿಗೆ ಜೀವನ ಪರ್ಯಂತ ತೆರಿಗೆ ಪದ್ಧತಿ ಅನುಷ್ಠಾನಕ್ಕೆ ಬರಲಿದೆ.

ಆಯವ್ಯಯದಲ್ಲಿ ಅಡಕವಾಗಿರುವ ಇನ್ನಿತರ ಅಂಶಗಳು :

  • ಸೆರಾಮಿಕ್‌ ಮಾರಾಟ ಕರ ಶೇ. 10ರಿಂದ 12ಕ್ಕೆ ಏರಿಕೆ ಪ್ರಸ್ತಾಪ
  • ಮ್ಯೂಸಿಕ್‌ ಸಿಸ್ಟಮ್‌, ಎಲೆಕ್ಟ್ರಾನಿಕ್‌ ಉಪಕರಣಗಳ ಬಿಡಿಭಾಗ ತುಟ್ಟಿ
  • ಬ್ರಾಂಡ್‌ ಹೆಸರಿನ ಚಹಾ, ಬಣ್ಣ, ವಾರ್ನಿಷ್‌ ತೆರಿಗೆ ಶೇ. 10ರಿಂದ 12ಕ್ಕೆ ಏರಿಕೆ
  • ಪಾನ್‌ ಮಸಾಲಾ, ಎಲ್ಲ ಬಗೆಯ ಒಣ ಹಣ್ಣುಗಳ ಮೇಲಿನ ಕರ ಹೆಚ್ಚಳ
  • ಕಂಪ್ಯೂಟರ್‌, ಸಾಫ್ಟ್‌ವೇರ್‌, ಪಠ್ಯವಲ್ಲದ ಮುದ್ರಿತ ಪುಸ್ತಕಗಳ ಮೇಲೆ ಶೇ.2ರಿಂದ 8ರವರೆಗೆ ಮಾರಾಟ ಕರ ಪ್ರಸ್ತಾಪ
  • ಬ್ರಾಂಡ್‌ ಕೊಬ್ಬರಿ ಎಣ್ಣೆಗೆ ಶೇಕಡಾ 4ರ ಬದಲು ಶೇ. 15ರಷ್ಟು ತೆರಿಗೆ
  • ಎಲ್‌.ಪಿ.ಜಿ., ಸಿಎಂಜಿ ಕನ್ವರ್ಟರ್‌ಗಳ ಮಾರಾಟ ತೆರಿಗೆ ಶೇ. 4ರಷ್ಟು ಇಳಿಕೆ ಸಂಭವ
  • ಸಗಟು ಖರೀದಿದಾರರನ್ನು ಆಕರ್ಷಿಸಲು ಪ್ರವೇಶ ತೆರಿಗೆ ಬದಲಾವಣೆ
  • ಕಲರ್‌ ಟಿ.ವಿ, ಡಿವಿಡಿ ಪ್ಲೇಯರ್‌ಗಳ ಅಂತಾರಾಜ್ಯ ತೆರಿಗೆ ಶೇ. 4ರಿಂದ ಶೇ.2ಕ್ಕೆ
  • ಫೋಟೋಗ್ರಫಿಕ್‌ ಫಿಲ್ಮ್ಸ್‌ ಹಾಗೂ ಪೇಪರ್‌ಗಳ ದರದಲ್ಲಿ ಶೇ. 4 (ಹಿಂದಿನ ದರ ಶೇ. 4. ಹೆಚ್ಚಳದ ನಂತರ ಶೇ.8) ರಷ್ಟು ಹೆಚ್ಚಳ
  • ಸಿನಿಮಾ ಪೋಸ್ಟರ್‌ಗಳು ಹಾಗೂ ಜಾಹೀರಾತಿನ ದರದಲ್ಲಿ 1500 ಸಾವಿರ ರುಪಾಯಿ ಹೆಚ್ಚಳ
  • ಬಜೆಟ್‌ನ ಒಟ್ಟು ದರದಲ್ಲಿ ಶೇ.32ರಷ್ಟನ್ನು ಆಹಾರ ನಿಯಂತ್ರಣ ಮತ್ತು ನಿಯಂತ್ರಣ ಕ್ಷೇತ್ರಗಳಿಗೆ ಮೀಸಲು
  • ಶಿಕ್ಷಣ, ಕ್ರೀಡೆ, ಕಲಾ ಮತ್ತು ಸಂಸ್ಕೃತಿ ಅಭಿವೃದ್ಧಿಗೆ 544.75 ಕೋಟಿ ರುಪಾಯಿ
  • ಆರೋಗ್ಯಾಭಿವೃದ್ಧಿಗೆ 268 ಕೋಟಿ ರುಪಾಯಿ
  • ಮಾಸಿಕ 15 ಸಾವಿರ ಅಥವಾ ಅದಕ್ಕಿಂತ ಹೆಚ್ಚು ವೇತನ ಪಡೆಯುವ ವೃತ್ತಿಪರರು ತಿಂಗಳಿಗೆ 200 ರುಪಾಯಿ ತೆರಿಗೆ ಕಟ್ಟಬೇಕು
  • ಮದ್ಯ ತಯಾರಿಕಾ ಕಂಪನಿಗಳ ಪರವಾನಿಗೆ ಶುಲ್ಕದಲ್ಲಿ ಭಾರೀ ಏರಿಕೆ (6 ಲಕ್ಷ ರುಪಾಯಿಯಿಂದ 11 ಲಕ್ಷ ರುಪಾಯಿ)
(ಇನ್ಫೋ ವರದಿ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X