Get Updates
Get notified of breaking news, exclusive insights, and must-see stories!

ಎಂಎಡ್‌ ಸಂಜೆ ಕಾಲೇಜುಗಳಿಗೆ ಬೀಗ !

* ಕೆ. ರಾಜಲಕ್ಷ್ಮಿ ರಾವ್‌

ಬೆಂಗಳೂರಿನಲ್ಲಿರುವ ಎರಡು ಎಂಎಡ್‌ ಸಂಜೆ ಕಾಲೇಜುಗಳು ಮಾರ್ಚ್‌ ಹದಿನಾರರಂದು ಬಾಗಿಲು ಹಾಕಿವೆ. ಪ್ರತಿ ಶೈಕ್ಷಣಿಕ ವರ್ಷದ ಕೊನೆಗೆ ಈ ರೀತಿ ಬಾಗಿಲು ಮುಚ್ಚುವುದು, ಹೊಸ ಶೈಕ್ಷಣಿಕ ವರ್ಷದಲ್ಲಿ ಬಿಸಿಲು ತಗ್ಗುವ ಹೊತ್ತಿಗೆ ಬಾಗಿಲು ತೆರೆಯುವುದು ಮಾಮೂಲೆ. ಆದರೆ, ಈ ಬಾರಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಬಾಗಿಲು ತೆರೆಯುವ ನಿರೀಕ್ಷೆ ಯಾರಿಗೂ ಇಲ್ಲ .

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) ರೆಗ್ಯುಲರ್‌ ಮತ್ತು ಡಿಸ್ಟೆನ್ಸ್‌ ಮೋಡ್‌ಗಳನ್ನು ಮಾತ್ರ ಅಂಗೀಕರಿಸಿದ್ದು , ಸಂಜೆ ಕಾಲೇಜುಗಳ ಬಗ್ಗೆ ಏನನ್ನೂ ಹೇಳಿಲ್ಲ . ಇದರಿಂದಾಗಿ ಎಂಎಡ್‌ ಸಂಜೆ ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಆಹ್ವಾನಿಸುವುದಿಲ್ಲ . ಸಂಜೆ ಕಾಲೇಜುಗಳನ್ನು ಅಂಗೀಕರಿಸದೇ ಇರುವ ಎನ್‌ಸಿಟಿಇ ಪ್ರಸ್ತುತ ಟೀಚರ್ಸ್‌ ಟ್ರೆೃನಿಂಗ್‌ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಎಂಎಡ್‌ ಮಾಡಬೇಕು ಎಂಬ ಆದೇಶವನ್ನೂ ಹೊರಡಿಸಿದೆ.

ಸ್ವಾಯತ್ತತೆ ಸಿಕ್ಕಿದ ನಂತರ ಎಂಎಡ್‌ ಸಂಜೆ ಕಾಲೇಜುಗಳಿಗೆ ಕೊಕ್‌

ಶಿಕ್ಷಕರ ಶಿಕ್ಷಣ ವಲಯವನ್ನು ಎನ್‌ಸಿಟಿಇ ನೋಡಿಕೊಳ್ಳುತ್ತದೆ. ಎನ್‌ಸಿಟಿಇ 1997ರವರೆಗೆ ಸಲಹಾ ಮಂಡಳಿಯಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಆದರೆ 97ರಲ್ಲಿ ಎನ್‌ಸಿಟಿಇಗೆ ಸ್ವಾಯತ್ತತೆ ಸಿಕ್ಕಿದ ತಕ್ಷಣ ಡಿಸ್ಟೆನ್ಸ್‌ ಮೋಡ್‌ ಮತ್ತು ರೆಗ್ಯುಲರ್‌ ಮೋಡ್‌ಗಳನ್ನು ಮಾತ್ರ ಮಾನ್ಯ ಮಾಡಿದೆ. ಎನ್‌ಸಿಟಿಇಯ ನಾಲ್ಕು ಸಮಿತಿಗಳು ದೇಶದಲ್ಲಿದ್ದು, ಕರ್ನಾಟಕ ಇರುವುದು ದಕ್ಷಿಣ ವಿಭಾಗದಲ್ಲಿ .

ಈವರೆಗೆ, ಬೆಂಗಳೂರಿನ ಎಂಇಎಸ್‌ ಮತ್ತು ಆರ್‌ವಿ ಟೀಚರ್ಸ್‌ ಕಾಲೇಜುಗಳಲ್ಲಿ ಎಂಎಡ್‌ ಸಂಜೆ ಕಾಲೇಜುಗಳು ನಡೆಯುತ್ತಿದ್ದವು. ಇವೆರಡೂ ದೊಡ್ಡ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ್ದರಿಂದ ಎಂಎಡ್‌ ಸಂಜೆ ಕಾಲೇಜುಗಳಿಗೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಬರುತ್ತಿದ್ದರು. ಎರಡೂ ಕಾಲೇಜಿನ ಪ್ರಾಂಶುಪಾಲರು ಇಂಡಿಯಾ ಇನ್ಫೋದೊಡನೆ ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.

ದಿಕ್ಕೇ ತೋಚುತ್ತಿಲ್ಲ : ಸಂಜೆ ಕಾಲೇಜುಗಳನ್ನು ಅಂಗೀಕರಿಸದೇ ಇರುವುದರಿಂದ ಮುಂದೆ ಏನು ಮಾಡುವುದಕ್ಕೂ ತೋಚುತ್ತಿಲ್ಲ ಎಂದು ಆರ್‌ವಿ ಟೀಚರ್ಸ್‌ ಕಾಲೇಜಿನ ಪ್ರಾಂಶುಪಾಲ, ಡಾ. ಎಸ್‌. ಭಾಸ್ಕರ್‌ ಹೇಳುತ್ತಾರೆ. ಎಂಎಡ್‌ನ್ನು ಉಳಿಸಿಕೊಳ್ಳಲು ಎಲ್ಲಾ ಶಿಕ್ಷಕರ ಕಾಲೇಜಿನ ಪ್ರಾಂಶುಪಾಲರು ಆರ್‌ವಿ ಟೀಚರ್ಸ್‌ ಕಾಲೇಜಿನಲ್ಲಿ ಇತ್ತೀಚೆಗೆ ಸಭೆ ಸೇರಿದ್ದರು. ಖ್ಯಾತ ಶಿಕ್ಷಣ ತಜ್ಞ ರೋಹಿಡೇಕರ್‌ ಅವರು ದೆಹಲಿಗೆ ಹೋಗಿ ಎನ್‌ಸಿಟಿಇ ಕೇಂದ್ರದಲ್ಲಿ ಎಂಎಡ್‌ ಸಂಜೆ ಕಾಲೇಜುಗಳನ್ನೂ ಮಾನ್ಯ ಮಾಡುವಂತೆ ಮನವಿ ಮಾಡಿಕೊಂಡರು. ಇಲ್ಲಿನ ಪ್ರಾಂಶುಪಾಲರುಗಳ ಸಭೆಯ ಆಗ್ರಹ ಮತ್ತು ಮನವಿ ಪತ್ರಗಳನ್ನು ಸಲ್ಲಿಸಿದರು. ಫಲಿತಾಂಶ ಮಾತ್ರ ಸೊನ್ನೆ. ಮ್ಯಾನೇಜ್‌ಮೆಂಟ್‌ ಒಪ್ಪಿದರೆ ರೆಗ್ಯುಲರ್‌ ಮೋಡ್‌ಆರಂಭಿಸಲು ಯತ್ನಿಸುತ್ತೇವೆ ಎಂದು ಭಾಸ್ಕರ್‌ ಹೇಳುತ್ತಾರೆ.

ಸಂಜೆ ಕಾಲೇಜುಗಳು ಉದ್ಯೋಗಿಗಳಿಗೆ ತುಂಬಾ ಸಹಕಾರಿಯಾಗಿದ್ದವು. ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಕೆಲಸ, ಸಂಜೆ ಕಾಲೇಜಿನಲ್ಲಿ ಓದು ಅನ್ನುವ ದೊಡ್ಡ ಸಮೂಹವೇ ಇದೆ. ಅಲ್ಲದೆ ಇತರ ಶಿಕ್ಷಕರ ಬೋಧನಾ ಕಾಲೇಜುಗಳಲ್ಲಿರುವ ಅಧ್ಯಾಪಕರಿಗೂ ಸಂಜೆ ಕಾಲೇಜು ಉಪಯುಕ್ತವಾಗಿತ್ತು ಎನ್ನುವ ಎಂ ಇ ಎಸ್‌ ಟೀಚರ್ಸ್‌ ಕಾಲೇಜಿನ ಪ್ರಾಂಶುಪಾಲ ಎ. ಎನ್‌. ವಿಜಯ ಮೂರ್ತಿ ಸಂಜೆ ಕಾಲೇಜುಗಳು ಮುಚ್ಚುತ್ತಿರವ ಬಗ್ಗೆ ವಿಷಾದಿಸುತ್ತಾರೆ. ಸಂಜೆ ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು, ಪಾಠ ಪಟ್ಟಿ ರೂಪಿಸುವುದು, ಪರೀಕ್ಷೆಗಳನ್ನು ನಡೆಸುವುದು ವಿಶ್ವವಿದ್ಯಾಲಯವೇ. ಆದರೆ ಒಂದು ವರ್ಷದ ಪಾಠ ಪಟ್ಟಿಯನ್ನು ಎರಡು ವರ್ಷಕ್ಕೆ ವಿಸ್ತರಿಸಲಾಗುತ್ತದೆ ಅಷ್ಟೇ.

ರೋಹಿಡೇಕರ್‌ಗೆ ಇನ್ನೂ ಆಸೆ ಇದೆ : ಸಂಜೆ ಕಾಲೇಜುಗಳ ಪ್ರಾಂಶುಪಾಲರು ಅಥವ ಆಡಳಿತ ಮಂಡಳಿ ಸ್ವಲ್ಪ ಕಾಸು ಖರ್ಚು ಮಾಡಿ ಕೋರ್ಟಿಗೆ ಹೋದರೂ ಸಂಜೆ ಕಾಲೇಜುಗಳು ಮತ್ತೆ ಆರಂಭವಾಗುತ್ತವೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆದುಕೊಂಡು ಬಂದ ಕಾಲೇಜುಗಳು ಮೌನವಾಗಿರುವ ಎನ್‌ಸಿಟಿಇಯನ್ನು ನೋಡಿಕೊಂಡು ಕೈ ಕಟ್ಟಿ ಕುಳಿತುಕೊಳ್ಳಬಾರದು ಎನ್ನುತ್ತಾರೆ, ದೆಹಲಿಗೆ ಹೋಗಿ ಎನ್‌ಸಿಟಿಇ ನಿರ್ದೇಶಕರಿಗೆ ಸಂಜೆ ಕಾಲೇಜುಗಳನ್ನು ಅಂಗೀಕರಿಸುವಂತೆ ಕೇಳಿಕೊಂಡ ರೋಹಿಡೇಕರ್‌. ಕಾಲೇಜುಗಳೇನೂ ಮುಚ್ಚಿಲ್ಲ . ಈ ಬಾರಿ ಅಂಗೀಕಾರ ಸಿಕ್ಕಿಲ್ಲ ಅಷ್ಟೇ. ಕೋರ್ಟ್‌ ನೋಟೀಸ್‌ ಬಿಟ್ಟರೆ ತಕ್ಷಣ ಎನ್‌ ಸಿಟಿಇ ಪ್ರತಿಕ್ರಿಯಿಸುತ್ತದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಎನ್‌ಸಿಟಿಇ ಮಾನ್ಯತೆ ನೀಡುವಂತೆ ಕೇಳಿಕೊಂಡಿದ್ದೇವೆ

ಎನ್‌ಸಿಟಿಇಯ ದಕ್ಷಿಣ ವಿಭಾಗದ ಗೌರವಾಧ್ಯಕ್ಷ ಸುರೇಂದ್ರ ನಾಥ್‌ ಎಂಇಎಸ್‌ ಕಾಲೇಜಿನ ಆಡಳಿತ ಮಂಡಳಿಯಲ್ಲಿದ್ದಾರೆ. ಎಂಎಡ್‌ ಸಂಜೆ ಕಾಲೇಜು ಮುಚ್ಚಿ ಹೋಗುತ್ತದಯೇ ಎಂದು ಪ್ರಶ್ನಿಸಿದಾಗ, ಎನ್‌ಸಿಟಿಇ ಎಂಎಡ್‌ ಸಂಜೆ ಕಾಲೇಜುಗಳಿಗೆ ಮಾನ್ಯತೆ ನೀಡಿಲ್ಲ ಎಂದು ಹೇಳಲಾಗದು. ಕರೆಸ್ಪಾಂಡೆನ್ಸ್‌ ಮತ್ತು ಡಿಸ್ಟೆಂಟ್‌ ಕೋರ್ಸುಗಳಿಗೆ ಮಾನ್ಯತೆ ನೀಡುವಾಗ ಸಂಜೆ ಕಾಲೇಜುಗಳಿಗೆ ಮಾನ್ಯತೆ ನೀಡಿಲ್ಲ ಅಷ್ಟೇ. ಕರ್ನಾಟಕ ರಾಜ್ಯದ ಪರವಾಗಿ ಈಗಾಗಲೇ ಸಂಜೆ ಕಾಲೇಜುಗಳಿಗೆ ಮಾನ್ಯತೆ ನೀಡುವಂತೆ ಎನ್‌ಸಿಟಿಇಯ ಕೇಂದ್ರ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಎನ್‌ಸಿಟಿಇ ಮಾನ್ಯತೆ ನೀಡಿದ ತಕ್ಷಣ ಮತ್ತೆ ಕಾಲೇಜುಗಳು ಆರಂಭವಾಗುತ್ತವೆ ಎಂದು ಆಶಾವಾದಿಯಾಗಿ ಹೇಳುತ್ತಾರೆ.

ಕಾಲೇಜು ಆಡಳಿತ ಮಂಡಳಿ ಮತ್ತು ಎನ್‌ಸಿಟಿಇಯ ಈ ಹೋರಾಟದ ನಡುವೆ ಎಂಎಡ್‌ ಸಂಜೆ ಕಾಲೇಜುಗಳು ಶಾಶ್ವತವಾಗಿ ಮುಚ್ಚಿ, ವಿದ್ಯಾರ್ಥಿಗಳನ್ನು ತ್ರಿಶಂಕು ಸ್ಥಿತಿಗೆ ತಾರದಿರಲಿ. ಮುಚ್ಚಿರುವ ಬಾಗಿಲು ಬರುವ ಜೂನ್‌ನಲ್ಲಿ ಮತ್ತೆ ತೆರೆಯಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+