Get Updates
Get notified of breaking news, exclusive insights, and must-see stories!

ಐಟಿಯಲ್ಲಿ ಭಾರತಕ್ಕೆ ಯಾರು ಸವಾಲು? ಉತ್ತರ ಚೀನಾ

ಬೆಂಗಳೂರು : ಮಾಹಿತಿ ತಂತ್ರಜ್ಞಾನದಲ್ಲಿ ನಾಗಾಲೋಟದಿಂದ ಓಡುತ್ತಿರುವ ಭಾರತಕ್ಕೆ ಯಾರು ಸವಾಲು? ಉತ್ತರ ಚೀನಾ. ಇನ್ನೈದು ವರ್ಷಗಳಲ್ಲಿ ಅಮೆರಿಕೆಯ ಸಿಲಿಕಾನ್‌ ನಗರಿಗೆ ಸಾಟಿಯಾಗಬಲ್ಲ ಬೆಂಗಳೂರಿನ ಐಟಿ ದಿಗ್ಗಜರು ಮೈಯೆಲ್ಲಾ ಕಣ್ಣಾಗಿ ಈಗ ಚೀನಾವನ್ನು ಗಮನಿಸುತ್ತಿದ್ದಾರೆ.

ಇನ್ನು ಕೆಲವೇ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕಬಲ್ಲ ಪ್ರಚ್ಛನ್ನ ಶಕ್ತಿ ಚೀನಾಗೆ ಇದೆ ಎಂದು ಬೀಜಿಂಗ್‌ ಮೂಲದ ಮೇಡ್‌ಫಾರ್‌ಚೈನಾ ಡಾಟ್‌ ಕಾಂನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಮಿಕಾ ಟ್ರೂಮನ್‌ ಗುರುವಾರ ಸುದ್ದಿಗಾರರಿಗೆ ಹೇಳಿದ್ದಾರೆ.

ಇಂಟರ್‌ನೆಟ್‌ ನಿಯಂತ್ರಣದ ವಿಷಯದಲ್ಲಿ ಸರ್ಕಾರದ ಬಿಗಿ ಹಿಡಿತ, ಇಂಗ್ಲಿಷ್‌ ಮಾತನಾಡಬಲ್ಲ ಅತಿ ಕಡಿಮೆ ಮಂದಿ, ಭಾರತಕ್ಕೆ ಹೋಲಿಸಿದಲ್ಲಿ ಕಡಿಮೆ ತಾಂತ್ರಿಕ ಪರಿಣತರು ಇವೆಲ್ಲಾ ಚೀನಾದ ಸಮಸ್ಯೆಗಳು ಅನ್ನುವುದು ನಿಜ. ಆದರೆ ಚೀನಾ ಆರ್ಥಿಕವಾಗಿ ಸಾಕಷ್ಟು ಬಲಾಢ್ಯವಾಗಿದ್ದು, ಈ ಸಮಸ್ಯೆಗಳಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಬಲ್ಲುದು ಎಂದು ಟ್ರೂಮನ್‌ ತಿಳಿಸಿದರು.

ಚೀನಾದಲ್ಲಿನ ಸರಾಸರಿ ತಲಾದಾಯ 3 ಸಾವಿರ 800 ಡಾಲರ್‌ಗಳು. ಭಾರತದ್ದು ಬರೀ 1 ಸಾವಿರದ 800. ಚೀನಾ ದೇಶದ ರಫ್ತಿನ ಪ್ರಮಾಣ ಭಾರತಕ್ಕಿಂತ 3 ಪಟ್ಟು ಹೆಚ್ಚು. ಭಾರತದಲ್ಲಿ 18.95 ದಶಲಕ್ಷ ದೂರವಾಣಿ ಸಂಪರ್ಕಗಳಿದ್ದರೆ, ಚೀನಾದಲ್ಲಿ 100 ದಶಲಕ್ಷ ಸಂಪರ್ಕಗಳಿವೆ. ಇಂಟರ್‌ನೆಟ್‌ ಸಂಪರ್ಕಕ್ಕೆ ಮೂಲಭೂತವಾದ ಈ ವಿಷಯಗಳಲ್ಲಿ ಭಾರತಕ್ಕಿಂತ ನಾವು ಸಾಕಷ್ಟು ಮುಂದಿರುವುದೇ ಮಾಹಿತಿ ತಂತ್ರಜ್ಞಾನದ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗಲು ಸಾಕಲ್ಲವೇ ಎಂದು ಟ್ರೂಮನ್‌ ಸವಾಲೆಸೆದರು.

ಮಾರ್ಚ್‌ 13ರಂದು ಮುಗಿದ 12ನೇ ಏಷ್ಯಾ ಕಾರ್ಪೊರೇಟ್‌ ಸಮ್ಮೇಳನದಲ್ಲಿ ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಕಿರಣ್‌ ಮಜುಂದಾರ್‌, ಜೈವಿಕ ತಂತ್ರಜ್ಞಾನದಲ್ಲಿ ಚೀನಾ ನಮಗಿಂತ ಸಾಕಷ್ಟು ಮುಂದೆ ಹೋಗಿದೆ ಎಂದಿದ್ದರು. ಈಗ ಐಟಿಯಲ್ಲೂ ನಾವೇ ಮುಂದೆ ಹೋಗುತ್ತೇವೆ ಎನ್ನುತ್ತಿದ್ದಾರೆ ಚೀನಾದ ಮಂದಿ. ಅಲ್ಲಿಗೆ ಭಾರತದ ಭವಿತವ್ಯದ ಸ್ಪರ್ಧಿ ಅಮೆರಿಕೆ ಅಲ್ಲ, ಚೀನಾ ಎಂದಾಯಿತು.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+