ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ರೋಮಾಂಚಕ ಜಯ, ಕ್ರಿಕೆಟ್‌ಗೆ ವಿಜಯೋತ್ಸವ

By Staff
|
Google Oneindia Kannada News

ಚೆನ್ನೈ : ಜಯಲಕ್ಷ್ಮಿ ಚಂಚಲೆಯಾದರೂ, ಕೊನೆಗೆ ಭಾರತದ ಮನೆಗೇ ಬಂದಳು. ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿತು. ಪಂದ್ಯದಲ್ಲಿ 15 ವಿಕೆಟ್ಟುಗಳ ದೋಚಿದ್ದಲ್ಲದೆ ಕೊನೆ 2 ರನ್‌ಗಳನ್ನು ಓಡಿದ ಹರ್ಭಜನ್‌ಗೆ ಧನ್ಯವಾದಗಳು.

ಗೆಲ್ಲಲು 155 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತನ್ನ 2ನೇ ಪಾಳಿಯಲ್ಲಿ 18 ರನ್‌ಗಳಾಗುವಷ್ಟರಲ್ಲಿ ಶಿವಸುಂದರ್‌ ದಾಸ್‌ ವಿಕೆಟ್‌ ಕಳೆದುಕೊಂಡಿತು. ಗದೆ ಹಿಡಿದು ಬಂದ ಲಕ್ಷ್ಮಣ್‌, ಗಿಲ್ಲೆಸ್ಪಿ, ಮಿಲ್ಲರ್‌ ಹಾಗೂ ವಾರ್ನ್‌ ಚೆಂಡುಗಳಿಗೆ ದಿಟ್ಟ ಉತ್ತರ ಕೊಡುತ್ತಾ ಒಂದು ತುದಿಯಲ್ಲಿ ನಿಂತರು. ಚೆನ್ನಾಗೇ ಆಡುತ್ತಿದ್ದ ರಮೇಶ್‌ ಇಲ್ಲದ ರನ್‌ಗೆ ಓಡಿ ರನ್‌ಔಟ್‌ ಆದರು. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದ್ದ ತೆಂಡೂಲ್ಕರ್‌ (17) ಹಾಗೂ ತಡಕು ಮಹಾರಾಜ ಸೌರವ್‌ ಗಂಗೂಲಿ (4) , ಗಿಲ್ಲೆಸ್ಪಿ ಮೋಡಿಗೆ ವಿಕೆಟ್‌ ಒಪ್ಪಿಸಿದರು.

ಎರಡನೇ ಟೆಸ್ಟನ್ನು ಉಳಿಸಿಕೊಳ್ಳುವಲ್ಲಿ ಗಣನೀಯ ಪಾತ್ರ ವಹಿಸಿದ್ದ ಕಲೆಗಾರ ದ್ರಾವಿಡ್‌ (4) ಕೋಲಿನ್‌ ಮಿಲ್ಲರ್‌ ಎಸೆತವನ್ನು ಲಾಂಗ್‌ ಆಫ್‌ ತಲೆ ಮೇಲೆ ಹೊಡೆಯಲು ಹೋಗಿ ವಿಫಲರಾಗಿ ಕ್ಯಾಚಿತ್ತರು. ಇಷ್ಟಾಗುವ ಹೊತ್ತಿಗೆ ಭಾರತದ ಸ್ಕೋರು 5 ವಿಕೆಟ್‌ ನಷ್ಟಕ್ಕೆ 122. ಆಗ ಆಸ್ಟ್ರೇಲಿಯಾ ತಂಡದಲ್ಲಿ ಜೀವ ಸಂಚಾರವಾಯಿತು. ಅವರ ಬೇಟೆಯೂ ಶುರುವಾಯಿತು. ಇನ್ನಿಂಗ್ಸಲ್ಲಿ ಒಟ್ಟು 4 ಕ್ಯಾಚ್‌ ಹಿಡಿದ ಮಾರ್ಕ್‌ ವಾ, ವಿವಿಎಸ್‌ ಲಕ್ಷ್ಮಣ್‌ (12 ಬೌಂಡರಿಗಳಿದ್ದ 65) ಹೊಡೆದ ಹಿಡಿಯಲು ಅಸಾಧ್ಯ ಎನ್ನುವಂಥ ಚೆಂಡನ್ನೂ ಬಲಕ್ಕೆ ಜಿಂಕೆಯಂತೆ ಜಿಗಿದು ತೆಗೆದುಕೊಂಡರು. ಅಲ್ಲಿಂದ ಭಾರತ ಮಾನಸಿಕವಾಗಿ ಕುಸಿಯಿತು.

ವಯಸ್ಸಾದರೂ ಅಗತ್ಯ ಸಮಯದಲ್ಲಿ ಒಳ್ಳೆ ಆಟ ಆಡಿದ ವಿಕೆಟ್‌ ಕೀಪರ್‌ ಸಮೀರ್‌ ಧಿಘ (ಅಜೇಯ 21) ಕ್ರೀಸಿಗಂಟಿ ನಿಂತು, ಆಸ್ಟ್ರೇಲಿಯಾ ಕೈಯಿಂದ ಗೆಲುವನ್ನು ಕಸಿದರು. ಈ ನಡುವೆ ಬಹುತುಲೆ ಹಾಗೂ ಜಾಹಿರ್‌ ಖಾನ್‌ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದರು. 8 ನೇ ವಿಕೆಟ್‌ಗೆ ಧಿಘಯಾಂದಿಗೆ ಜೊತೆಯಾದ ಹರ್ಭಜನ್‌ ಭಾರತಕ್ಕೆ ಅತ್ಯವಾದ ಗೆಲುವಿನ ರನ್ನನ್ನು ಚಚ್ಚಿದಾಗ ಆವರೆಗೂ ಮುಖ ಊದಿಸಿಕೊಂಡಿದ್ದ ಗಂಗೂಲಿ ಮುಖದಲ್ಲಿ ಒಮ್ಮೆಗೇ ಜೀವ ಸಂಚಾರ. ಮೈದಾನದ ತುಂಬಾ ಮಿಂಚುಗಳ ಪುಳಕ.

ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದ ಹೇಡನ್‌ ಹಾಗೂ ಎರಡೂ ಇನಿಂಗ್ಸ್‌ಗಳಿಂದ 15 ವಿಕೆಟ್‌ಗಳನ್ನು ಕಿತ್ತ ಹರ್ಭಜನ್‌ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು. ಸರಣಿಯಲ್ಲಿ 32 ವಿಕೆಟ್‌ಗಳನ್ನು ಉರುಳಿಸಿದ ಹರ್ಭಜನ್‌ ಸರಣಿ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X