ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಹಲ್ಕಾ : ಯಾರಿಗಾದರೂ ಆತಂಕವಾಗಿದ್ದರೆ ಅದು ಸುಳ್ಳು- ಅನಂತಮೂರ್ತಿ

By Staff
|
Google Oneindia Kannada News

ಬೆಂಗಳೂರು : ತೆಹಲ್ಕಾ ಪ್ರಕರಣ ವಾಜಪೇಯಿ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ ಎನ್ನುವ ಇಂಗಿತವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಯು.ಆರ್‌. ಅನಂತಮೂರ್ತಿ ವ್ಯಕ್ತ ಪಡಿಸಿದ್ದಾರೆ.

ಇಂದಿರಾಗಾಂಧಿಯನ್ನು ಜನ ನಂಬಿದ್ದರು. ಆಕೆಗಂಥಾ ವ್ಯಕ್ತಿತ್ವವಿತ್ತು . ಅಂತಹುದೇ ವ್ಯಕ್ತಿತ್ವವನ್ನು ಪ್ರಧಾನಿ ವಾಜಪೇಯಿ ಕೂಡ ಹೊಂದಿದ್ದಾರೆ ಎಂದು ಅನಂತಮೂರ್ತಿ ಹೇಳಿದರು. ಭಾರತದ ಇಂದಿನ ರಾಜಕೀಯ ಸನ್ನಿವೇಶ ಕುರಿತಂತೆ ಸ್ನೇಹ ಚಿಂತನ ಬಳಗ ಏರ್ಪಡಿಸಿದ್ದ ಸಂವಾದದಲ್ಲಿ ಸೋಮವಾರ ಅವರು ಮಾತನಾಡುತ್ತಿದ್ದರು.

ತೆಹಲ್ಕಾ ಡಾಟ್‌ ಕಾಂ ಪ್ರಕರಣ ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬೇಕಿತ್ತೋ ಆ ಮಟ್ಟಿಗೆ ಬೀರಿಲ್ಲ . ಅದು ಸೃಷ್ಟಿಸಬಹುದಾಗಿದ್ದ ಆತಂಕವನ್ನೂ ಸೃಷ್ಟಿಸಿಲ್ಲ . ಎಲ್ಲ ರಾಜಕೀಯ ಪಕ್ಷಗಳೂ ಪರಸ್ಪರ ಭ್ರಷ್ಟಾಚಾರದ ಕೆಸರನ್ನು ಎರಚಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್‌, ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪವನ್ನು ಹೊರಿಸಿದರೆ, ಕಾಂಗ್ರೆಸ್ಸನ್ನು ಭ್ರಷ್ಟರ ಪಕ್ಷ ಎಂದು ಬಿಜೆಪಿ ಕರೆಯುತ್ತದೆ. ಈ ಕೆಸರು ಎರಚಿಕೊಳ್ಳುವ ಕೆಲಸವನ್ನು ಬಿಟ್ಟು , ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಎಲ್ಲಾ ಪಕ್ಷಗಳು ಒಟ್ಟಿಗೆ ಕುಳಿತು ಚಿಂತಿಸುವುದು ಸದ್ಯದ ಜರೂರು ಎಂದು ಅನಂತಮೂರ್ತಿ ಹೇಳಿದರು.

ಲಂಚ ತೆಗೆದುಕೊಳ್ಳುವವರು ಅಂದೂ ಇದ್ದರು, ಇವತ್ತೂ ಇದ್ದಾರೆ

ಪಕ್ಷಕ್ಕಾಗಿ ಹಣ ಪಡೆದೆ ಎಂದು ಹೇಳಿಕೊಳ್ಳುವವರು ಗಾಂಧಿ, ನೆಹರೂ ಕಾಲದಲ್ಲೂ ಇದ್ದರು. ಮಂತ್ರಿಯಾದವನು ಪ್ರಲೋಭನೆಗೆ ಬಗ್ಗದೆ ಇದ್ದಾಗ ಆತನನ್ನು ಹೃದಯಹೀನ ಎಂದು ತೆಗಳುವ ಸಾಧ್ಯತೆಗಳೂ ಇವೆ. ಅಮೆರಿಕದಲ್ಲಿ ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ನೀಡಲಾಗಿದೆ. ಅಲ್ಲಿ ಅಧ್ಯಕ್ಷ ಬುಷ್‌ಗಾಗಿ 1 ಸಾವಿರ ಡಾಲರ್‌ ಕೊಟ್ಟು ಊಟ ಹಾಕಿಸುತ್ತಾರೆ. ಆ ವ್ಯಕ್ತಿಯಾಂದಿಗೆ ಅಧ್ಯಕ್ಷರು ಎರಡು ನಿಮಿಷ ಮಾತಾಡುತ್ತಾರೆ. ಅಧ್ಯಕ್ಷರ ಜೊತೆ ಬರುವ ವ್ಯಕ್ತಿ ಊಟ ಹಾಕಿಸಿದ ವ್ಯಕ್ತಿಯ ವಿಳಾಸ ಪಡೆಯುತ್ತಾನೆ. ಆ ಸಂದರ್ಭದಲ್ಲಿ ನೀಡಲಾಗುವ ಅರ್ಜಿಯ ಬಗೆಗೂ ಅಧ್ಯಕ್ಷರು ವಿಶೇಷ ಗಮನ ಹರಿಸುತ್ತಾರೆ ಎಂದು ಅನಂತಮೂರ್ತಿ ವಿವರಿಸಿದರು.

ಭ್ರಷ್ಟಾಚಾರ, ಚುನಾವಣೆ, ರಾಜಕಾರಣ ಮುಂತಾದ ವಿಷಯಗಳ ಬಗ್ಗೆ ಇತಿಹಾಸ - ವಾಸ್ತವಗಳ ನೆಲೆಗಟ್ಟಿನಲ್ಲಿ ಅನಂತಮೂರ್ತಿ ಮಾತನಾಡಿದರು. ಅವರ ಮಾತಿನ ಪ್ರಮುಖ ಅಂಶಗಳನ್ನು ಹೆಕ್ಕುವುದಾದರೆ -

  • ಸತ್ಯಸಂಧ ವ್ಯಕ್ತಿಯ ಹಿಂದೆ ಅನೀತಿಯ ವ್ಯಕ್ತಿ ಇರುತ್ತಾನೆ. ಹಣ ತರುವ ಶಕ್ತಿ ಇಲ್ಲದಿದ್ದರೆ ನಾಯಕನಾಗಲು ಸಾಧ್ಯವಿಲ್ಲ . ಅಂದಮೇಲೆ ಅಧಿಕಾರವೂ ಸಿಗೊಲ್ಲ . ಆದ್ದರಿಂದಲೇ ಇಂದು ಚುನಾವಣೆಗಳಲ್ಲಿ ಸಿಕ್ಕಾಪಟ್ಟೆ ದುಡ್ಡು ಖರ್ಚಾಗುತ್ತಿದೆ.
  • ಭ್ರಷ್ಟಾಚಾರದ ಬಗೆಗಿನ ಯೋಚನೆಗಳೂ ಸಾವಿರಾರು ವರ್ಷಗಳಿಂದಲೂ ನಡೆದು ಬಂದಿವೆ. ಭ್ರಷ್ಟಾಚಾರಕ್ಕೆ 40 ಬಗೆಯ ಕಾರಣಗಳನ್ನು ತನ್ನ ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ವಿವರಿಸಿದ್ದಾನೆ. ಭ್ರಷ್ಟಾಚಾರವನ್ನಾತ ದುಶಾನ, ಪ್ರದೂಶನ ಎಂದು ಕರೆದಿದ್ದಾನೆ. ಪ್ರದೂಶನ ಎಂದರೆ ಮಾಲಿನ್ಯ.
  • ಭ್ರಷ್ಟಾಚಾರ ನಾಲಿಗೆ ತುದಿಯಲ್ಲಿಡುವ ಜೇನು. ಜೇನನ್ನು ನಾಲಗೆ ಆಗಾಗ ಸವಿಯುತ್ತಲೇ ಇರುತ್ತದೆ.
  • ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತೀರ್ಥಹಳ್ಳಿಯ ಒಬ್ಬ ವರ್ತಕ - ಮರ್ಯಾದೆ ಬಿಟ್ಟು ದುಡ್ಡು ಮಾಡು. ದುಡ್ಡು ಮಾಡಿದ ಮೇಲೆ ಮರ್ಯಾದೆ ತಂತಾನೆ ಬರುತ್ತದೆ ಎಂದು ಹೇಳುತ್ತಿದ್ದ . ಇಂದು ದೇಶ ಅದೇ ಸ್ಥಿತಿಗೆ ತಲುಪಿದೆ.
  • ತೆಹಲ್ಕಾ ಪ್ರಕರಣದಿಂದ ತನಗೆ ಷಾಕ್‌ ಆಗಿದೆ ಎಂದು ಯಾವುದೇ ರಾಜಕೀಯ ಪಕ್ಷ ಹೇಳಿಕೊಂಡರೆ, ಅದನ್ನು ನಾನು ನಂಬುವುದಿಲ್ಲ .
  • ಬೋಫೋರ್ಸ್‌ನಿಂದ ಪಡೆದ ಹಣವನ್ನು ದೇಶದಲ್ಲಿ ಪ್ರಜಾತಂತ್ರ, ಜಾತ್ಯತೀತತೆ ಬಲಪಡಿಸಲು ಬಳಸಲಾಯಿತು. ಹಿಂದೆ ರಷ್ಯಾದಲ್ಲಿ ವಾಮಮಾರ್ಗದಿಂದ ಬಂದ ಹಣವನ್ನು ಕಮ್ಯುನಿಸಂ ಪ್ರಚಾರಕ್ಕೆ ಬಳಸಲಾಗುತ್ತಿತ್ತು .
  • ಗುಜರಾತ್‌ ಭೂಕಂಪ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಸರ್ಕಾರ ಮಾಡಬಹುದಾದ ಕೆಲಸವನ್ನು ಅವರು ಮಾಡುತ್ತಿದ್ದರು.
  • ಆರ್‌ಎಸ್‌ಎಸ್‌ಗೆ ಮನಸ್ಸಿನ ಬೆಳವಣಿಗೆ ಆಗಿಲ್ಲ . ಅದರ ಸರಿಯಾದ ಉಪಯೋಗ ಆಗಿಲ್ಲ . ಮುಸ್ಲಿಮರು ದೇಶದ ಶತ್ರುಗಳು ಎಂದು ತಿಳಿದಿದ್ದಾರೆ. ಅದು ತಪ್ಪು . ದೇಶದ ವೈರಿಗಳು ಭ್ರಷ್ಟರು.
  • ದೇಶದ ಅತ್ಯಂತ ಭ್ರಷ್ಟ ಪಕ್ಷ , ಕಾನ್ಷಿರಾಂ ಅವರ ಬಿಎಸ್‌ಪಿ.
  • ಜಾರ್ಜ್‌ ಮೇಲಿನ ಆರೋಪ ಕೇಳಿ ನನಗೆ ಷಾಕ್‌ ಆಯಿತು. ಸಂಕಟವೂ ಆಯಿತು. ಆದು ನಿಜವಾದಲ್ಲಿ ನನಗೆ ಆತನ ಮೇಲಿನ ನಂಬಿಕೆ ಹೋಗುತ್ತದೆ.
ಶಾಸಕರ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮತದಾನ ಸಿನಿಮಾ ನಿರ್ದೇಶಕ ಟಿ.ಎನ್‌. ಸೀತಾರಾಂ ಹಾಗೂ ಶ್ರೀಪತಿರಾವ್‌ ಕೂಡ ಮಾತನಾಡಿದರು. ಆದರೆ, ಕಾರ್ಯಕ್ರಮದ ತುಂಬಾ ತುಂಬಿಕೊಂಡಿದ್ದುದು ಅನಂತ ಗುಂಗು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X