ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ ಗೋಪಿಚಂದ್‌

By Staff
|
Google Oneindia Kannada News

ಮುಂಬಯಿ : ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವದ ಗಮನವನ್ನೇ ಸೆಳೆದ ಹೈದರಾಬಾದ್‌ ಮೂಲದ ಪುಲ್ಲೇಲ ಗೋಪಿಚಂದ್‌ ಈಗ ವಿಶ್ವ ರ್ಯಾಂಕಿಂಗ್‌ನಲ್ಲಿ ಐದನೇ ಸ್ಥಾನವನ್ನು ಗಳಿಸಿದ್ದಾರೆ. ಡೆನ್‌ಮಾರ್ಕ್‌ನ ಪೀಟರ್‌ ಗಾಡೆ, ಚೀನಾದ ಕ್ಷಿಯಾ ಕ್ಷೋಂಜೆ, ಜಿ. ಕ್ಷಿನ್‌ಪೆಂಗ್‌ ಹಾಗೂ ಇಂಡೋನೇಷಿಯಾದ ಹೆಂಡ್ರಾನ್‌ ವಿಶ್ವ ರ್ಯಾಂಕಿಂಗ್‌ನಲ್ಲಿ ಮೊದಲ ನಾಲ್ಕು ಸ್ಥಾನವನ್ನು ಪಡೆದಿದ್ದಾರೆ.

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ಪ್ರಶಸ್ತಿ ಗೆಲ್ಲುವ ಮುನ್ನ ಗೋಪಿಚಂದ್‌ ವಿಶ್ವರ್ಯಾಂಕಿಂಗ್‌ನಲ್ಲಿ ಹತ್ತನೇ ಸ್ಥಾನ ಪಡೆದಿದ್ದರು. ದಶಕಗಳ ಬಳಿಕ ತಮ್ಮ ಕ್ರೀಡಾ ಸ್ಫೂರ್ತಿ ಹಾಗೂ ಗುರು ಪ್ರಕಾಶ್‌ ಪಡುಕೋಣೆಯವರು ಮಾಡಿದ್ದ ಸಾಧನೆಯ ಮೆಟ್ಟಿಲೇರಿದ ಗೋಪಿಚಂದ್‌ ಈಗ ಮನೆ ಮಾತಾಗಿದ್ದಾರೆ.

ಗೋಪಿಚಂದ್‌ ಈ ಹಿಂದೆ ಕೂಡ ಹಲವು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ, ಆ ಟೂರ್ನಿಗಳು ಗೋಪಿಚಂದ್‌ಗೆ ಒಲಿದಿರಲಿಲ್ಲ. ಛಲ ಬಿಡದ ಗೋಪಿಚಂದ್‌ ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎಂಬ ನಿಯಮಕ್ಕೆ ಅಂಟಿಕೊಂಡರು. ನಿರಂತರ ಅಭ್ಯಾಸ, ಅವಿರತ ಹೋರಾಟ ಹಾಗೂ ಆತ್ಮಸ್ಥೈರ್ಯದಿಂದ ಕೊನೆಗೂ ತಮ್ಮ ಕನಸನ್ನು ಈಡೇರಿಸಿಕೊಂಡರು.

ಹತ್ತನೇ ಕ್ರಮಾಂಕದಲ್ಲಿದ್ದ 27ರ ಹರೆಯದ ಗೋಪಿಚಂದ್‌ ಹತ್ತು ಸಾವಿರ ಡಾಲರ್‌ಗಳ ಪ್ರಶಸ್ತಿ ಗೆದ್ದು, ಈಗ ಹತ್ತನೇ ಕ್ರಮಾಂಕದಿಂದ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದರು. ಬರ್ಮಿಂಗ್‌ ಹ್ಯಾಂ ಕ್ರೀಡಾಂಗಣದಲ್ಲಿ ಪ್ರೌಡ್‌ ಆಫ್‌ ಇಂಡಿಯ ಪುಲ್ಲೇಲಾ ಗೋಪಿಚಂದ್‌ ಎಂಬ ಘೋಷಣೆಗಳು ಮೊಳಗುವಂತೆ ಮಾಡಿದರು.

ಗೋಪಿಚಂದ್‌ಗೆ ಅದ್ಧೂರಿ ಸ್ವಾಗತ : ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟ್ರೋಫಿಯಾಂದಿಗೆ ಶುಕ್ರವಾರ ನವದೆಹಲಿಯಿಂದ ಹೈದರಾಬಾದ್‌ನ ಬೇಗಂಪೇಟ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗೋಪಿಚಂದ್‌ಗೆ ಅದ್ಧೂರಿಯ ಸ್ವಾಗತ ನೀಡಲಾಯಿತು.

ಗೋಪಿಚಂದ್‌ರನ್ನು ತೆರೆದ ಸಾಲಂಕೃತ ಜೀಪಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ, ಜೀಪಿನ ಮುಂದೆ ನರ್ತಿಸಿ, ತಮ್ಮ ಆನಂದವನ್ನು ಹಂಚಿಕೊಂಡರು. ಕ್ರೀಡಾ ಸಚಿವ ಟಿ. ಸೀತಾರಾಂ ಜಯಶಾಲಿಯಾಗಿ ತವರಿಗೆ ಮರಳಿದ ಗೋಪಿ ಅವರನ್ನು ಆದರದಿಂದ ಬರಮಾಡಿಕೊಂಡರು.

ಸಾವಿರಾರು ಅಭಿಮಾನಿಗಳಿಂದ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ. ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಲಾಲ್‌ ಬಹದ್ದೂರ್‌ ಕ್ರೀಡಾಂಗಣದಲ್ಲಿ ಗೋಪಿಚಂದ್‌ಗೆ ಅತ್ಮೀಯ ಸಾರ್ವಜನಿಕ ಸನ್ಮಾನ. ರಾಜಭವನದಲ್ಲಿ ರಾಜ್ಯಪಾಲರಿಂದ ಅಭಿನಂದನೆ. ಇಂತಹ ಸುಪುತ್ರನ ಹಡೆದ ಮಾತಾ ಪಿತೃಗಳಿಗೂ ಈ ಸಂದರ್ಭದಲ್ಲಿ ಆತ್ಮೀಯವಾಗಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X