ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿದ ಏಣಿಯನ್ನು ಒದ್ದ ಸೋನಿಯಾ

By Staff
|
Google Oneindia Kannada News

*ಎಸ್‌. ಪ್ರವೀಣ್‌, ಹೊಸಪೇಟೆ

ಬಳ್ಳಾರಿ : ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು. ಸೋನಿಯಾ ಅವರೇ ತಮ್ಮ ಜಿಲ್ಲೆಯ ಸಂಸದರಾದ ಮೇಲೆ ಇನ್ನೇನು, ಬಳ್ಳಾರಿ ಭೂಲೋಕದ ಸ್ವರ್ಗವೇ ಆಗುತ್ತದೆ ಎಂದು ಕನಸು ಕಂಡವರಿಗೆ ಕಡಿಮೆ ಏನಿಲ್ಲ.

ಸೋನಿಯಾ ಕೇವಲ ಬಳ್ಳಾರಿಯಿಂದಷ್ಟೇ ಅಲ್ಲದೇ, ತಮ್ಮ ಪತಿ ರಾಜೀವಗಾಂಧಿ ಅವರು ಪ್ರತಿನಿಧಿಸುತ್ತಿದ್ದ ಅಮೇೕಠಿಯಿಂದಲೂ ಸ್ಪರ್ಧಿಸಿದ್ದರು. ಸೋನಿಯಾರಿಗೆ ವಿಜಯಲಕ್ಷ್ಮೀ ಎರಡೂ ಕ್ಷೇತ್ರಗಳಲ್ಲೂ ಒಲಿಯಿತು. ಕೊನೆಗೆ ನಿರೀಕ್ಷೆಯಂತೆ ಸೋನಿಯಾ ಅಮೇಠಿಯ ಸ್ಥಾನ ಉಳಿಸಿಕೊಂಡು, ಬಳ್ಳಾರಿಯ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಾಗ, ಬಳ್ಳಾರಿ ಜನತೆಯ ಕನಸು ನುಚ್ಚುನೂರಾಯಿತು.

ಆದರೆ, ತಮ್ಮ ಪಕ್ಷದ ಅಧ್ಯಕ್ಷೆಗೆ ಸಂಪೂರ್ಣ ಬೆಂಬಲ ನೀಡಿದ ಜನರ ಋಣ ತೀರಿಸಲು ರಾಜ್ಯದ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 3300 ಕೋಟಿ ರುಪಾಯಿಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನೇ ಪ್ರಕಟಿಸಿದರು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ, ಹದಗೆಟ್ಟ ರಸ್ತೆಗಳಲ್ಲಿ ಓಡಾಡುತ್ತಾ, ಕುಡಿಯುವ ನೀರಿಗೂ ಬವಣೆ ಪಡುತ್ತಿದ್ದ ಬಳ್ಳಾರಿಯ ಜನತೆ ಈ ಪ್ರಕಟಣೆಯಿಂದ ಹಿರಿಹಿರಿ ಹಿಗ್ಗಿದರು.

ಮರಳಿತೇ ಗತವೈಭವ : ಬಳ್ಳಾರಿ ವಿಶ್ವಭೂಪಟದಲ್ಲಿ ರಾರಾಜಿಸುವ ಕಾಲ ದೂರವಿಲ್ಲ. ಬಳ್ಳಾರಿಗೆ ಮತ್ತೆ ವಿಜಯನಗರದರಸರ ಕಾಲದ ವೈಭವ ಬಂದೇ ಬಿಟ್ಟಿತು ಎಂದು ಗಾಳಿಗೋಪುರಗಳನ್ನೇ ಕಟ್ಟಿದರು. ಬಳ್ಳಾರಿ ಎಂದೆಂದೂ ಕಾಂಗ್ರೆಸ್‌ನ ಭದ್ರಕೋಟೆ. ಈವರೆಗೆ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳ ಹೊರತು ಮತ್ತಾವ ಪಕ್ಷದ ಸ್ಪರ್ಧಾಳೂ ಜಯಗಳಿಸಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ದಶಕಗಳ ಕಾಲ ಆಡಳಿತ ನಡೆಸಿದೆ. ಇಷ್ಟಾದರೂ ಕಾಂಗ್ರೆಸ್‌ ಅನ್ನೇ ನಂಬಿರುವ ಬಳ್ಳಾರಿ ಮಾತ್ರ ಬರಿದು ಬರಿದಾಗೇ ಉಳಿದಿದೆ.

ಬಳ್ಳಾರಿಯ ಸಮಗ್ರ ಅಭಿವೃದ್ಧಿಗೆ 3300 ಕೋಟಿ ರುಪಾಯಿಗಳ ಸೋನಿಯಾ ಪ್ಯಾಕೇಜ್‌ ಎಂಬ ವಿಶೇಷ ಯೋಜನೆಯಡಿ ಹಣ ಬಿಡುಗಡೆ ಮಾಡುವುದಾಗಿ 21-10-1999ರಂದು ಘೋಷಿಸಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧೀ ಹಾಗೂ ಬಳ್ಳಾರಿ ಜಿಲ್ಲೆಯ ಜನರ ಅನುಗ್ರಹಕ್ಕೆ ಪಾತ್ರರಾದರು. ಆದರೂ ಅಭಿವೃದ್ಧಿ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ.

ಅಭಿವೃದ್ಧಿ ಕಾಣದ ಹಳ್ಳಿಗಳಲ್ಲಿ, ಕುಡಿವ ನೀರಿಗೂ ಬವಣೆ ಪಡುತ್ತಾ, ಹದಗೆಟ್ಟ ರಸ್ತೆಗಳಲ್ಲಿ ಕೆಂಧೂಳು ಕುಡಿಯುತ್ತಾ, ಕುಂಟುತ್ತಾ ಕುಪ್ಪಳಿಸುತ್ತಾ ಸಾಗುವ ಬಳ್ಳಾರಿ ಜಿಲ್ಲೆಯ ಮಂದಿ 3300 ರುಪಾಯಿಗಳ ಯೋಜನೆ ಇಂದು ಬರುತ್ತದೆ, ನಾಳೆ ಬರುತ್ತದೆ, ತಮ್ಮ ಜಿಲ್ಲೆ ಭೂಲೋಕದ ಸ್ವರ್ಗವಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಾಸ್ತವವೇ ಬೇರೆ : ಎಸ್‌.ಎಂ. ಕೃಷ್ಣ ಅವರು ದ್ವಾಪರಯುಗದ ಶ್ರೀಕೃಷ್ಣನಂತೆಯೋ ಇಲ್ಲೊಂದು ಚಮತ್ಕಾರವನ್ನೇ ಮಾಡಿದರು. ಸೋನಿಯಾ ಅವರ ರಾಜೀನಾಮೆಯಿಂದ ಬೇಸರಗೊಂಡಿದ್ದ ಬಳ್ಳಾರಿಯ ಜನತೆ ಮರು ಚುನಾವಣೆಯಲ್ಲಿ ಪಕ್ಷಕ್ಕೆ ಕೈಕೊಡದಂತೆ ಸೋನಿಯಾಗಾಂಧಿ ಪ್ಯಾಕೇಜ್‌ ಅಡಿಯಲ್ಲಿ 3300 ಕೋಟಿ ರುಪಾಯಿ ಅಭಿವೃದ್ಧಿ ಯೋಜನೆ ಪ್ರಕಟಿಸಿದರು.

ಕುಡಿತಿನಿ ಯೋಜನೆ : ಈ ಪೈಕಿ 2500 ಕೋಟಿ ರುಪಾಯಿಗಳನ್ನು ಕುಡುತಿನಿ ಥರ್ಮಲ್‌ ವಿದ್ಯುತ್‌ ಘಟಕಕ್ಕೆ ತಿರುಗಿಸಿದರು. ಕುಡಿತಿನಿ ಯೋಜನೆ ಕೃಷ್ಣರ ಕೈಗೂಸೇನಲ್ಲ. ಜನತಾದಳ ಸರಕಾರ ಅಸ್ಥಿತ್ವದಲ್ಲಿದ್ದಾಗಲೇ ಕುಡುತಿನಿಯಲ್ಲಿ ಥರ್ಮಲ್‌ ವಿದ್ಯುತ್‌ ಘಟಕ ಸ್ಥಾಪಿಸಲು ಅಂದಿನ ಸರಕಾರ ಶಂಕುಸ್ಥಾಪನೆ ನೆರವೇರಿಸಿತ್ತು. ಸಚಿವ ಸಂಪುಟದ ಒಪ್ಪಿಗೆಯ ಬಳಿಕ ಆಡಳಿತಾತ್ಮಕ ಮಂಜೂರಾತಿಯೂ ದೊರೆತಿತ್ತು. ಭೂಸ್ವಾದೀನ ಪ್ರಕ್ರಿಯೆಗೂ ಚಾಲನೆ ದೊರೆತಿತ್ತು.

ರಾಜಕೀಯ ಬದಲಾವಣೆಯಲ್ಲಿ ಎಸ್‌.ಎಂ. ಕೃಷ್ಣ ಆಡಳಿತದ ಚುಕ್ಕಾಣಿ ಹಿಡಿದರು. ಜಾಣತನದಿಂದ 2500 ರುಪಾಯಿಗಳನ್ನು ಈ ಯೋಜನೆಗೆ ತಿರುಗಿಸಿದರು. ಇನ್ನುಳಿದ 700 ಕೋಟಿ ರುಪಾಯಿ ಸೋನಿಯಾ ಪ್ಯಾಕೇಜ್‌ನಲ್ಲಿ ಸೇರುತ್ತದೆ. ಆದರೆ, ಈ ಯೋಜನೆಯ ಬಗ್ಗೆ ಬಳ್ಳಾರಿ ಜನತೆಗೆ ಏನೇನೂ ತಿಳಿದಿಲ್ಲ. ಜನಪ್ರತಿನಿಧಿಗಳು ತಿಳಿಸುವ ಸಾಹಸವನ್ನೂ ಮಾಡಿಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ಯಾವುದೇ ಕಲ್ಪನೆ ಇಲ್ಲ.

ಒಂದೊ ಎರಡೋ ಯೋಜನೆಗಳಿಗೆ ಅಲ್ಪ ಸ್ವಲ್ಪ ಹಣ ಬಿಡುಗಡೆಯಾಗಿದೆ. ಆದರೆ, ಸಮಗ್ರ ಅಭಿವೃದ್ಧಿ ಎಂಬ ಪದದ ಅರ್ಥವೇ ಬಳ್ಳಾರಿಗರಿಗೆ ಅರ್ಥವಾಗದ್ದಾಗಿದೆ. ಶನಿವಾರ ಬೆಳಗ್ಗೆ ಸೋನಿಯಾ ಅವರು ಬೆಂಗಳೂರು ಅರಮನೆ ಆವರಣದಲ್ಲಿ ಕಾಂಗ್ರೆಸ್‌ನ 81ನೇ ಪೂರ್ಣಾಧಿವೇಶನ ಉದ್ಘಾಟಿಸಿದ್ದಾರೆ. ಯೋಜನೆ ಪ್ರಕಟಗೊಂಡು ಈಗಾಗಲೇ ಒಂದೂವರೆ ವರ್ಷ ಕಳೆದಿದೆ. ಈಗಲಾದರೂ ಇದು ಈಡೇರೀತೆ ಎಂದು ಸೋನಿಯಾರನ್ನೇ ಕೇಳಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X