ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು : ರಥ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ವೃದ್ಧ

By Staff
|
Google Oneindia Kannada News

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ದೊಡ್ಡ ಬೆಟ್ಟ ಶ್ರೇಣಿಯ ಸೀತಾಳಯ್ಯನ ಗಿರಿ ಮಠದಲ್ಲಿ ಮಂಗಳವಾರ (ಮಾ.13) ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಉಳುವಾಗಿಲಿನ ದೇವೇಗೌಡ ಎಂಬ 75 ವರ್ಷದ ವೃದ್ಧರೊಬ್ಬರು ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಪ್ರತಿವರ್ಷದಂತೆಯೇ ಈ ವರ್ಷವೂ ಮಠದಲ್ಲಿ ಮಧ್ಯಾಹ್ನ ರಥೋತ್ಸವ ಏರ್ಪಡಿಸಲಾಗಿತ್ತು. ಸಾವಿರಾರು ಜನ ಸೇರಿದ್ದರು. ಭಕ್ತರು ಶ್ರದ್ಧಾಭಕ್ತಿಯಿಂದ ರಥ ಎಳೆಯುತ್ತಿದ್ದಾಗ ಮುಂಭಾಗದಲ್ಲಿದ್ದ ದೇವೇಗೌಡರು ಜಾರಿಬಿದ್ದು ರಥ ಚಕ್ರಕ್ಕೆ ಸಿಲುಕಿದರು.

ಕೂಡಲೇ ರಥವನ್ನು ಮುಂದಕ್ಕೆ ಎಳೆಯುವುದನ್ನು ನಿಲ್ಲಿಸಲಾಯಿತಾದರೂ ವೃದ್ಧರು ಬದುಕುಳಿಯಲಿಲ್ಲ. ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಗೌಡ ಅವರು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಥ ದುರಂತಗಳು : ನಂಜನಗೂಡಿನ ರಥಚಕ್ರಕ್ಕೆ ಸಿಲುಕಿ ಒಬ್ಬ ಭಕ್ತ ಮೃತಪಟ್ಟು, ಮತ್ತೊಬ್ಬರ ಕಾಲು ತುಂಡಾದ ಘಟನೆ ನಡೆದು ವರ್ಷಗಳೇ ಉಳಿದರೂ ಜನಮಾನಸದಿಂದ ಇನ್ನೂ ಮರೆಯಾಗುತ್ತಿಲ್ಲ. ಹೋದವರ್ಷ ಏಪ್ರಿಲ್‌ 20ರಂದು ಗೋಕಾಕ ಬಳಿಯ ಮರಡಿಮಠದಲ್ಲಿ ನಡೆದ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಜಾತ್ರಾ ಕಮಿಟಿ ಸದಸ್ಯರೇ ರಥ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರು.

ಮತ್ತೆ ಮೇ ತಿಂಗಳಿನಲ್ಲಿ ಬೆಳಗಾವಿ ತಾಲೂಕಿನ ಮಂಡೋಳಿಯಲ್ಲಿ ನಡೆದ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವೃದ್ಧರೋಬ್ಬರು ಅಸುನೀಗಿದ್ದರು. ಈ ಎಲ್ಲ ದುರ್ಘಟನೆಗಳ ಸಾಲಿನಲ್ಲಿ ಚಿಕ್ಕಮಗಳೂರು ಮುಳ್ಳಯ್ಯನಗಿರಿ ಶ್ರೇಣಿಯ ಸೀತಾಳಯ್ಯನ ಗಿರಿ ಮಠದ ರಥೋತ್ಸವವೂ ಸೇರಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X