ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿಯುತ್ತಿದ್ದ ಭಾರತದ ಆಟವನ್ನು 4ನೇ ದಿನಕ್ಕೆ ಒಯ್ದ ಲಕ್ಷ್ಮಣ್‌

By Staff
|
Google Oneindia Kannada News

ಕೋಲ್ಕತ : ಆಸ್ಟ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೂರನೇ ದಿನವಿಡೀ ಮೆರೆದ ವಿವಿಎಸ್‌ ಲಕ್ಷ್ಮಣ್‌ ಆಟದ ನೆರವಿನಿಂದ ಇನ್ನಿಂಗ್ಸ್‌ ಸೋಲಿನ ಭೀತಿಯಿಂದ ಭಾರತ ಹೆಚ್ಚೂ ಕಡಿಮೆ ಹೊರ ಬಂದಿದೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ ಮೊತ್ತವನ್ನು ಸರಿ ಗಟ್ಟಲು ಭಾರತಕ್ಕೆ ಇನ್ನು ಕೇವಲ 20 ರನ್‌ ಸಾಕು. ದಿನದಾಟ ಮುಗಿದಾಗ 109 ರನ್‌ ಗಳಿಸಿದ್ದ ಲಕ್ಷ್ಮಣ್‌ ಹಾಗೂ 7 ರನ್‌ ಗಳಿಸಿದ್ದ ದ್ರಾವಿಡ್‌ ಔಟಾಗದೆ ಉಳಿದರು. ಭಾರತದ 2ನೇ ಇನ್ನಿಂಗ್ಸ್‌ ಮೊತ್ತ 4 ವಿಕೆಟ್‌ ನಷ್ಟಕ್ಕೆ 254.

ಸೋಮವಾರದ 128/8, ಮೊದಲ ಇನ್ನಿಂಗ್ಸ್‌ ಆಟವನ್ನು ಮುಂದುವರೆಸಿದ ಭಾರತ 3ನೇ ದಿನವೇ ಶರಣಾಗತಿಯಾಗದಂತೆ ಕಾಪಾಡಿದ್ದು ಲಕ್ಷ್ಮಣ್‌. ಕೊನೆ ವಿಕೆಟ್‌ಗೆ ವೆಂಕಟೇಶ್‌ ಪ್ರಸಾದ್‌ ಜೊತೆ ಸಮಯಪ್ರಜ್ಞೆ ಮೆರೆದ ಲಕ್ಷ್ಮಣ್‌, ತಂಡದ ಮೊತ್ತವನ್ನು 171ಕ್ಕೆ ಒಯ್ದಾಗ ಅಂಪೈರ್‌ ವಿಲ್ಲಿ ಕೊಟ್ಟ ಕೆಟ್ಟ ತೀರ್ಪಿಗೆ ಬಲಿಯಾದರು (ಮೊಣ ಕೈಗೆ ಬಿದ್ದ ಚೆಂಡಿನ್ನು ಗ್ಲೌಸಿಗೆ ತಗುಲಿದೆ ಎಂಬ ತಪ್ಪು ತೀರ್ಮಾನ). ಅವರ ವೈಯಕ್ತಿಕ ಸ್ಕೋರು 59 (12 ಬೌಂಡರಿ).

ಕಾಂಗರೂಗಳು ಫಾಲೋಆನ್‌ ಹೇರಿದ ಕಾರಣ ಎರಡನೇ ಇನ್ನಿಂಗ್ಸನ್ನು ಪ್ರಾರಂಭಿಸಿದ ಭಾರತದ ಆರಂಭಿಕ ಜೋಡಿ ಶಿವಸುಂದರ್‌ ದಾಸ್‌ (39) ಹಾಗೂ ಶಡಗೋಪನ್‌ ರಮೇಶ್‌ (30) ಆತ್ಮವಿಶ್ವಾಸದ ಆಟ ಪ್ರದರ್ಶಿಸಿದರಾದರೂ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಉತ್ತಮವಾಗಿ ಆಡುತ್ತಿದ್ದ ರಮೇಶ್‌ ತಮ್ಮ ಫುಟ್‌ವರ್ಕಿಲ್ಲದ ಚಾಳಿಗೆ ಮತ್ತೆ ಬಲಿಯಾಗಿ, ವಾರ್ನ್‌ಗೆ ವಿಕೆಟ್‌ ಒಪ್ಪಿಸಿದರೆ, ನತದೃಷ್ಟ ದಾಸ್‌ ಬ್ಯಾಕ್‌ಫೂಟ್‌ ಆಡಲು ಹೋಗಿ ಕಾಲು ವಿಕೆಟ್‌ಗೆ ಬಡಿದು, ಹಿಟ್‌ ವಿಕೆಟ್‌ ಮಾಡಿಕೊಂಡರು.

ಎರಡನೇ ಇನ್ನಿಂಗ್ಸ್‌ನಲ್ಲಿ ಬಡ್ತಿ ಪಡೆದು ಮೂರನೆಯವರಾಗಿ ಕಣಕ್ಕೆ ಇಳಿದ ಲಕ್ಷ್ಮಣ್‌ ತಮ್ಮ ಮೊದಲ ಇನ್ನಿಂಗ್ಸ್‌ ಫಾರ್ಮನ್ನು ಮುಂದುವರೆಸಿದರು. ಈ ನಡುವೆ ಸಚಿನ್‌ (10) ಗಿಲೆಸ್ಪಿ ಎಸೆದ ಔಟ್‌ಸ್ವಿಂಗರ್‌ಗೆ ಮುತ್ತು ಕೊಡಲು ಹೋಗಿ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್‌ ಕೊಟ್ಟರು. ಅಳುಕು ಮೋರೆ ಹೊತ್ತ ನಾಯಕ ಗಂಗೂಲಿ (48) ತಡಕಾಡಿದರಾದರೂ ತಮ್ಮ ಆಟಕ್ಕೆ ಕುದುರಿಕೊಂಡು, ವಾರ್ನ್‌ ವಿರುದ್ಧ ಆತ್ಮವಿಶ್ವಾಸ ಮೆರೆದರು. ಆದರೆ ಮೆಗ್‌ಗ್ರಾತ್‌ ಮೋಡಿಗೆ ಉತ್ತರ ಕೊಡಲಾರದೆ, ಕಾಟ್‌ ಬಿಹೈಂಡ್‌ ಆದರು.

ಮೋಡಿಗಾರ ಮೆಕ್‌ಗ್ರಾತ್‌ ಹಾಗೂ ಲೆಗ್ಗಿ ಕಿಂಗ್‌ ಶೇನ್‌ ವಾರ್ನ್‌ಗೆ ದಿನದುದ್ದಕ್ಕೂ ದಿಟ್ಟ ಉತ್ತರ ಕೊಟ್ಟ ಏಕಮಾತ್ರ ಆಟಗಾರ ಲಕ್ಷ್ಮಣ್‌, ಮೊದಲ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಬಾರಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಹೊಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಗಂಗೂಲಿ ವಿಕೆಟ್‌ ಪಡೆದು ಮೆಕ್‌ಗ್ರಾತ್‌ ಆಸ್ಟ್ರೇಲಿಯಾ ಪರ ಯಶಸ್ವಿ ಪ್ರದರ್ಶನ ಕೊಟ್ಟಿದ್ದಾರೆ. ಭಾರತದ ಹೋರಾಟದ ಆಟ ನಾಲ್ಕನೇ ದಿನ ಎಷ್ಟರ ಮಟ್ಟಿಗೆ ಮುಂದುವರೆಯಲಿದೆ ಎಂಬುದನ್ನು ಕಾದು ನೋಡಬೇಕು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X