ಕರಾವಳಿ : ಮಂಜುಗಡ್ಡೆ ತಯಾರಿಕಾ ಘಟಕಗಳ ಮುಷ್ಕರ ವಾಪಸ್ಸು
ಬೆಂಗಳೂರು/ಮಂಗಳೂರು : ಮಂಜುಗಡ್ಡೆ ಕಾರ್ಖಾನೆಗಳು ಬಳಸುವ ವಿದ್ಯುತ್‌ಗೆ ರಿಯಾಯಿತಿಯನ್ನು ನೀಡಲು ವ್ಯಕ್ತಿ ಶಃ ಒಪ್ಪಿರುವ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಕಾಶಪ್ಪನವರ್ ಅವರ ಭರವಸೆಯನ್ನು ನಂಬಿ ಕರಾವಳಿ ಪ್ರದೇಶದ ಮಂಜುಗಡ್ಡೆ ತಯಾರಿಕಾ ಘಟಕಗಳು ಎರಡು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ವಾಪಸ್ಸು ಪಡೆದಿವೆ ಎಂದು ಕರ್ನಾಟಕ ಕರಾವಳಿ ಮಂಜುಗಡ್ಡೆ ಹಾಗೂ ಶೈತ್ಯಾಗಾರ ಮಾಲೀಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ ಕರಾವಳಿ ಪ್ರದೇಶದ ಮೂರು ಜಿಲ್ಲೆಗಳ ಶಾಸಕರು ಸಭೆ ಸೇರಿ ಪ್ರಕರಣದ ಸಾಧಕ ಭಾದಕಗಳನ್ನು ಚರ್ಚಿಸಿದರು. ವಿದ್ಯುತ್ ದರ ಏರಿಕೆಯಿಂದಾಗಿ ಮತ್ಸ್ಯೋದ್ಯಮ ಹಾಗೂ ಮಂಜುಗಡ್ಡೆ ಉದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿದೆ. ಆದ್ದರಿಂದ ತೋಟಗಾರಿಕೆಗೆ ನೀಡುವ ವಿದ್ಯುತ್ ಸಬ್ಸಿಡಿಯನ್ನು ಮತ್ಸೋದ್ಯಮಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ಸಚಿವರಾದ ರಮಾನಾಥ ರೈ ಹಾಗೂ ವೀರ ಕುಮಾರ್ ಪಾಟೀಲ್ ಭಾಗವಹಿಸಿದ್ದರು.
ಮಂಜುಗಡ್ಡೆ ಕಾರ್ಖಾನೆಗಳು ಬಳಸುವ ಪ್ರತಿ ಯೂನಿಟ್ ವಿದ್ಯುತ್ತಿಗೆ ಒಂದು ರುಪಾಯಿ ರಿಯಾಯಿತಿ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಸಭೆಯ ನಂತರ ಸಚಿವ ಕಾಶಪ್ಪನವರ್ ಸುದ್ದಿಗಾರರಿಗೆ ತಿಳಿಸಿದರು. ಸಬ್ಸಿಡಿ ಪ್ರಸ್ತಾವನೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಂದಾಜು 3 ಕೋಟಿ ರುಪಾಯಿ ನಷ್ಟವಾಗುವುದೆಂದು ಅವರು ತಿಳಿಸಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚ-ಯ
ಮುಖಪುಟ / ಇವತ್ತು... ಈ ಹೊತ್ತು...