ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಪ್ರತ್ಯೇಕ ದರೋಡೆಗಳಲ್ಲಿ ಚಿನ್ನಾಭರಣ, 3 ಲಕ್ಷ ರು. ಲೂಟಿ

By Staff
|
Google Oneindia Kannada News

ಬೆಂಗಳೂರು : ಸಿಎಂಎಚ್‌ ರಸ್ತೆಯ ಮೀನಾ ಚಿನ್ನಾಭರಣ ಅಂಗಡಿಯಲ್ಲಿ ಸೋಮವಾರ ರಾತ್ರಿ 8.15ರ ಸುಮಾರಿಗೆ ಗ್ರಾಹಕರಂತೆ ನಟಿಸಿದ ದರೋಡೆಕೋರರು ಅಂಗಡಿ ಮಾಲೀಕರ ಪತ್ನಿ ಹಾಗೂ ಪುತ್ರಿಯ ಮೇಲೆ ಹಲ್ಲೆ ನಡೆಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಐವರು ದರೋಡೆಕೋರರು ಅಂಗಡಿ ಹೊಕ್ಕರು. ಅವರ ಪೈಕಿ ಒಬ್ಬ ಅಂಗಡಿ ಮಾಲೀಕರ ಪತ್ನಿ ಮೀನಾ ಹಾಗೂ ಪುತ್ರಿ ಆಶಾ ಮೇಲೆ ಹಲ್ಲೆ ನಡೆಸಿದರು. ಉಳಿದ ನಾಲ್ವರು ಷೋಕೇಸ್‌ ಒಡೆದು, ಆಭರಣಗಳನ್ನು ತಮ್ಮ ಜೇಬು ಹಾಗೂ ಚೀಲಗಳಿಗೆ ತುಂಬಿಕೊಂಡರು. ಸದ್ದುಗದ್ದಲ ಕೇಳಿ ಜನ ಸೇರಿದರಾದರೂ, ದರೋಡೆಕೋರರು ತಮ್ಮ ಬಳಿ ಇದ್ದ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದರು. ನಾಡಬಾಂಬ್‌ ಸ್ಫೋಟಿಸಿ ಜನರನ್ನು ಚದುರಿಸಿದರು.

ಗಸ್ತಿನಲ್ಲಿದ್ದ ಇಂದಿರಾನಗರದ ಪೊಲೀಸರು ಪರಾರಿಯಾಗುತ್ತಿದ್ದ ದರೋಡೆಕೋರರ ಬೆನ್ನಟ್ಟಿದರು. ಆಗಲೂ ದರೋಡೆಕೋರರು ನಾಡಬಾಂಬ್‌ ಸಿಡಿಸಿದರು. ಈ ಒತ್ತಡದ ನಡುವೆಯೂ ಪೊಲೀಸರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಇಬ್ಬರಲ್ಲಿ ಇದ್ದ ಚಿನ್ನಾಭರಣಗಳನ್ನೂ ವಶಪಡಿಸಿಕೊಂಡಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದು, ಅವರು ಒಯ್ದಿರುವ ಚಿನ್ನಾಭರಣದ ಮೌಲ್ಯ ಎಷ್ಟೆಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ.

ಇನ್ನೊಂದು ದರೋಡೆ, 3 ಲಕ್ಷ ರು. ಕಳವು : ಔಷಧಿ ಕಂಪನಿಯ ಉದ್ಯೋಗಿ ರಮೇಶ್‌ ಕುಮಾರ್‌ ಎಂಬುವರನ್ನು ಇರಿದು, ಅವರಿಂದ 3 ಲಕ್ಷ ರುಪಾಯಿಯನ್ನು ಸೋಮವಾರ ಹಾಡು ಹಗಲೇ ದೋಚಿರುವ ಘಟನೆ ಸೆಂಟ್ರಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌.ವಿ.ರಸ್ತೆಯಲ್ಲಿನ ಕೆನರಾ ಬ್ಯಾಂಕಿಗೆ ಹಣ ಸಂದಾಯ ಮಾಡಲೆಂದು ಪಾರ್ಶವ ಔಷಧಿ ಕಂಪನಿ ಉದ್ಯೋಗಿ ರಮೇಶ್‌ ಕುಮಾರ್‌ ಸೋಮವಾರ ಮಧ್ಯಾಹ್ನ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಿಂದಿನಿಂದ ಬಂದ ದುಷ್ಕರ್ಮಿಗಳು, ಭುಜಕ್ಕೆ ಚಾಕು ಇಟ್ಟು ಹೆದರಿಸಿ, ಹಣ ದೋಚಿದ್ದಾರೆ. ಹಣ ಕಸಿಯುತ್ತಿರುವುದನ್ನು ಕಣ್ಣಾರೆ ಕಂಡ ಜನ ನಾಲ್ವರು ದುಷ್ಕರ್ಮಿಗಳನ್ನು ಬೆನ್ನಟ್ಟಿ ಅವರ ಪೈಕಿ ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಣದ ಚೀಲ ಇಟ್ಟುಕೊಂಡಿದ್ದವನೂ ಸೇರಿದಂತೆ ಉಳಿದ ಮೂವರು ಪರಾರಿಯಾಗಿದ್ದಾರೆ.

ರಮೇಶ್‌ ಅವರ ತೊಡೆಗೆ ಸ್ವಲ್ಪ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಂಟ್ರಲ್‌ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X