Get Updates
Get notified of breaking news, exclusive insights, and must-see stories!

ಭಾರತದ ಕನಸಿಗೆ ಗಿಲ್‌ಕ್ರಿಸ್ಟ್‌ ಕೊಡಲಿ, 2ನೇ ಪಾಳಿ- ಭಾರತ 58/2

ಮುಂಬಯಿ : ಭಾರತ ಇನ್ನೇನು ಹಿಡಿತ ಸಾಧಿಸಿತು ಅನ್ನುವಷ್ಟರಲ್ಲಿ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿದ ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್‌ ತಮ್ಮ ತಂಡಕ್ಕೆ 173 ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ತಂದಿತ್ತರು. ಎರಡನೇ ಇನ್ನಿಂಗ್ಸನ್ನು ಅಳುಕಿನಿಂದಲೇ ಆಟ ಪ್ರಾರಂಭಿಸಿರುವ ಭಾರತ ಮೊದಲ ಟೆಸ್ಟ್‌ನ 2ನೇ ದಿನದಾಟ ಮುಗಿದಾಗ 2 ವಿಕೆಟ್‌ ನಷ್ಟಕ್ಕೆ 58 ರನ್‌ ಗಳಿಸಿತ್ತು. 6 ರನ್‌ ಗಳಿಸಿರುವ ದ್ರಾವಿಡ್‌ ಹಾಗೂ ಇನ್ನೂ ಖಾತೆ ತೆರೆಯದ ಸಚಿನ್‌ ನಲುಗಿರುವ ಭಾರತದ ಪಾಳಯಕ್ಕೆ ಜೀವತುಂಬುವರೇ, ನೋಡಬೇಕು.

ಮುಂಜಾನೆ ಎರಡು ಸತತ ಎಸೆತಗಳಲ್ಲಿ ಜಸ್ಟಿನ್‌ ಲ್ಯಾಂಗರ್‌(10) ಹಾಗೂ ಮಾರ್ಕ್‌ ವಾ (0) ರನ್ನು ಪೆವಿಲಿಯನ್‌ಗೆ ಕಳಿಸಿದ ಹರ್ಭಜನ್‌ ಸಿಂಗ್‌ ನಂತರ ಪಾಂಟಿಂಗ್‌(0) ವಿಕೆಟ್ಟನ್ನೂ ಕಿತ್ತರು. ಈ ಮಧ್ಯೆ ಸಾಂಘ್ವಿ ಮೋಡಿಗೆ ಸ್ಟೀವ್‌ ವಾ (17) ಬಲಿಯಾದರು. ಆಗ ಕಾಂಗರೂಗಳ ಸ್ಕೋರು 99ಕ್ಕೆ 5.

ನಂತರ ಒಂದೆಡೆ ಗಟ್ಟಿಯಾಗಿ ನಿಂತಿದ್ದ ಹೇಡನ್‌ ಜೊತೆಗೂಡಿದ ಗಿಲ್‌ಕ್ರಿಸ್ಟ್‌ ಭಾರತಕ್ಕೆ ದೊಡ್ಡ ಸವಾಲಾದರು. ಎಲ್ಲಾ ಬೌಲರ್‌ಗಳನ್ನೂ ಚಚ್ಚಿದ ಅವರು ಕೇವಲ 112 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್‌ ಇದ್ದ 122 ರನ್‌ ದೋಚಿದರು. ಅಂತಿಮವಾಗಿ ಹರ್ಭಜನ್‌ ಸಿಂಗ್‌ ಎಸೆತದ ಗತಿ ಗುರ್ತಿಸದೆ ಹೊರ ಬಂದು, ಸ್ಟಂಪ್‌ ಆದರು. ಇದಕ್ಕೂ ಮುನ್ನ ಹೇಡನ್‌ 17 ಬೌಂಡರಿ 1 ಸಿಕ್ಸರ್‌ ಇದ್ದ 119 ರನ್‌ ಗಳಿಸಿದ್ದಷ್ಟೇ ಅಲ್ಲದೆ, ಗಿಲ್‌ಕ್ರಿಸ್ಟ್‌ ಜೊತೆ 197ರನ್‌ ಕಲೆ ಹಾಕಿದರು. ಬಾಲಂಗೋಚಿಯ ಭರವಸೆಯ ಆಟಗಾರ ಶೇನ್‌ ವಾರ್ನ್‌ 3 ಸಿಕ್ಸರ್‌ ಹಾಗೂ ಎರಡು ಬೌಂಡರಿಯಿದ್ದ 39(37 ಎಸೆತ) ರನ್‌ ಚಚ್ಚಿ, ಆಸ್ಟ್ರೇಲಿಯಾದ ಉತ್ತಮ ಸ್ಕೋರಿಗೆ ಕಾಣಿಕೆ ಸಲ್ಲಿಸಿದರು. ಅಂತಿಮವಾಗಿ 349 ರನ್‌ಗಳಿಗೆ ಆಸ್ಟ್ಟ್ರೇಲಿಯಾ ತಂಡ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ 4 ವಿಕೆಟ್‌ ಪಡೆದ ಹರ್ಭಜನ್‌ ಯಶಸ್ವಿ ಬೌಲರ್‌ ಎನಿಸಿದರು. ಶ್ರೀನಾಥ್‌, ಅಗರ್ಕರ್‌ ಮತ್ತು ಸಾಂಘ್ವಿ ತಲಾ 2 ವಿಕೆಟ್‌ ಕಿತ್ತರು. 10.1 ಓವರ್‌ಗಳಲ್ಲಿ 67 ರನ್‌ ಹೊಡೆಸಿಕೊಂಡ ಸಾಂಘ್ವಿ ಹಿಂದಿನ 3 ದಿನಗಳ ಪಂದ್ಯದಲ್ಲಿ ಮಾಡಿದ್ದ ಮೋಡಿ ಈ ಪಂದ್ಯದಲ್ಲಿ ಅಸಾಧ್ಯವಾಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಅತಿ ಎಚ್ಚರಿಕೆಯಿಂದ ಆಡತೊಡಗಿದ ಭಾರತದ ಆರಂಭಿಕ ಜೋಡಿ ರಮೇಶ್‌- ದಾಸ್‌ 33 ರನ್‌ ಜೋಡಿಸುವಷ್ಟರಲ್ಲಿ , ದಾಸ್‌(7) ಗಿಲ್ಲೆಸ್ಪಿ ಔಟ್‌ಸ್ವಿಂಗರ್‌ಗೆ ಬಲಿಯಾದರು. ಉತ್ತಮ ಆಟವಾಡಿದ ರಮೇಶ್‌ (6 ಬೌಂಡರಿಗಳಿದ್ದ 44) ದಿನದಾಟ ಮುಗಿಯುವ ಕೆಲ ನಿಮಿಷಗಳ ಮುಂಚೆ ಮೆಕ್‌ಗ್ರಾತ್‌ ಮ್ಯಾಜಿಕ್‌ಗೆ ಉತ್ತರ ಕೊಡದಾದರು. ಈ ಮಧ್ಯೆ ನೈಟ್‌ ವಾಚ್‌ಮನ್‌ ಆಗಿ ಬಂದ ನಯನ್‌ ಮೊಂಗಿಯಾ ಗಿಲ್ಲೆಸ್ಪಿ ಬೌಲಿಂಗ್‌ನಲ್ಲಿ ಬೆರಳಿಗೆ ಪೆಟ್ಟು ತಿಂದು ಗಾಯಾಳಾಗಿ ಪೆವಿಲಿಯನ್‌ಗೆ ವಾಪಸ್ಸಾದರು. ಇನ್ನೂ ಖಾತೆ ತೆರೆಯದ ಸಚಿನ್‌ ಹಾಗೂ 6 ರನ್‌ ಗಳಿಸಿರುವ ದ್ರಾವಿಡ್‌ ಗುರುವಾರ 3ನೇ ದಿನದಾಟ ಪ್ರಾರಂಭಿಸಲಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+