ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರ್‌ ಬಿಟ್ಟುಹೋದ ದಂಡನಾಯಕ ಪಟ್ಟಕ್ಕೆ ಡಾ.ಕೆ. ಶ್ರೀನಿವಾಸನ್‌

By Staff
|
Google Oneindia Kannada News

ಬೆಂಗಳೂರು : ಗೃಹ ರಕ್ಷಕ ದಳ ಹಾಗೂ ಅಗ್ನಿ ಶಾಮಕ ದಳದ ಮುಖ್ಯಸ್ಥ ಡಾ.ಕೆ. ಶ್ರೀನಿವಾಸನ್‌ ಅವರನ್ನು ರಾಜ್ಯದ 15 ನೇ ಪೊಲೀಸ್‌ ಮಹಾ ನಿರ್ದೇಶಕರನ್ನಾಗಿ ನೇಮಿಸಿ ಬುಧವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈವರೆಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಸಿ. ದಿನಕರ್‌ ಬುಧವಾರ (ಫೆ.28) ವಷ್ಟೇ ನಿವೃತ್ತರಾಗಿದ್ದರು.

ಶ್ರೀನಿವಾಸನ್‌ ಅವರ ನೇಮಕದೊಂದಿಗೆ ಅಪಾರ ಕುತೂಹಲ ಕೆರಳಿಸಿದ್ದ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ತೆರೆ ಬಿದ್ದಿದೆ. ಡಿಜಿಪಿ ಎಲ್‌. ರೇವಣ ಸಿದ್ದಯ್ಯ ಹಾಗೂ ಸಿಓಡಿಯ ಡಿಜಿಪಿ ವಿ.ವಿ. ಭಾಸ್ಕರ್‌ ಶ್ರೀನಿವಾಸನ್‌ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದರು.

1964 ರ ಜೂನ್‌ ತಿಂಗಳಲ್ಲಿ ಭಾರತೀಯ ಪೊಲೀಸ್‌ ಸೇವೆ ಸೇರಿದ ಶ್ರೀನಿವಾಸನ್‌ ಅವರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಹುದ್ದೆಗೆ ನೇಮಿಸಲಾಗಿದೆ. ಅವರಿಗೆ ಇನ್ನು ಕೇವಲ 5 ತಿಂಗಳ ಸೇವೆ ಮಾತ್ರ ಉಳಿದಿದೆ.

ನಾಲ್ಕು ದಶಕಗಳ ಅನುಭವ : ಶ್ರೀನಿವಾಸನ್‌ ಅವರು ಪೊಲೀಸ್‌ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಎಸ್ಪಿಯಾಗಿ, ಮೈಸೂರಿನ ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯರಾಗಿ, ಸಿಐಡಿ ಇಲಾಖೆಯ ಡಿಜಿಪಿಯಾಗಿ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶರಾಗಿ, ಕೆಎಸ್‌ಆರ್‌ಪಿ ಎಡಿಜಿಪಿಯಾಗಿ, ಬಂದೀಖಾನೆ ಐಜಿಯಾಗಿ ಹಾಗೂ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಎಂಟು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಚಿವಾಲಯದಲ್ಲೂ ಎರವಲು ಸೇವೆ ಸಲ್ಲಿಸಿದ್ದರು.

ಪಂಚಭಾಷಾ ಕೋವಿದ : ಕೇವಲ ಪೊಲೀಸ್‌ ಕರ್ತವ್ಯದಲ್ಲೇ ಮುಳುಗಿ ಹೋಗದ ಶ್ರೀನಿವಾಸನ್‌ ಸುತ್ತಮುತ್ತಲಿನ ಅನುಭವಗಳಿಗೆ ಸ್ಪಂದಿಸುವ ಅಧ್ಯಯನಶೀಲರೂ ಹೌದು. 1989 ರಲ್ಲಿ ಅವರು ಸಿದ್ಧಪಡಿಸಿದ ರಾಜ್ಯ ಪೊಲೀಸ್‌ ಸಿಬ್ಬಂದಿಯ ಸಾಮರ್ಥ್ಯ ಮತ್ತು ಹುದ್ದೆಯ ನಡಾವಳಿಗಳ ಬಗ್ಗೆ ಒಂದು ಅಧ್ಯಯನ ಮಹಾ ಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್‌ಡಿ ಪದವಿ ನೀಡಿದೆ. ಶ್ರೀನಿವಾಸನ್‌ ಪಂಚಭಾಷೆಗಳನ್ನು ಬಲ್ಲವರು. ಕನ್ನಡ, ಇಂಗ್ಲೀಷ್‌, ಹಿಂದಿ, ತೆಲುಗು ಹಾಗೂ ತಮಿಳು ಅವರಿಗೆ ಸಲೀಸು.

ಶ್ರೀನಿವಾಸನ್‌ ಅವರ ಸೇವೆಗೆ ಹಲವಾರು ಸಮ್ಮಾನಗಳೂ ಸಿಕ್ಕಿವೆ. ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ 5 ವರ್ಷ ಸಲ್ಲಿಸಿದ ಸೇವೆಗಾಗಿ ಕಠಿಣ ಸೇವಾ ಪದಕ ಹಾಗೂ 1997 ರಲ್ಲಿ ಗಣರಾಜ್ಯೋತ್ಸವ ಸಂಬಂಧದ ರಾಷ್ಟ್ರಪತಿ ಪದಕ ಸಂದಿದೆ. ಅವರಿಗೆ ಶುಭಾಶಯಗಳು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X