ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಣಿ, ಪ್ರತಿ ಧರಣಿ - ವಿಧಾನಸಭೆಯ ಅಗ್ಗಳಿಕೆಗೆ ಮತ್ತೊಂದು ಗರಿ

By Staff
|
Google Oneindia Kannada News

ಬೆಂಗಳೂರು : ನೋಟಿಸ್‌ ಕೊಡದೆ ಏಕಾಏಕಿ ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಧರಣಿ ಕೂತ ಕಾಂಗ್ರೆಸ್‌ ಸದಸ್ಯರು, ರಾಜ್ಯಸರ್ಕಾರವನ್ನು ದೂಷಿಸುತ್ತ ಪ್ರತಿ ಧರಣಿ ಕೂತ ಬಿಜೆಪಿ ಸದಸ್ಯರು - ಈ ಧರಣಿ, ಪ್ರತಿಧರಣಿಗಳ ನಡುವೆ ವಿಧಾನಸಭೆ ನಲುಗಿದ್ದು ಬುಧವಾರ ವಿಧಾನಮಂಡಲದ ವಿಶೇಷ.

ವಿಧಾನಸಭೆ ಶುರುವಾದದ್ದೇ ಅರ್ಧ ಗಂಟೆ ತಡವಾಗಿ. ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷಗಳ ನಾಯಕ ಜಗದೀಶ್‌ ಶೆಟ್ಟರ್‌ ಎದ್ದು ನಿಂತದ್ದೇ ತಡ, ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಅವಧಿ ವಿಸ್ತರಿಸುವಂತೆ ಕೂಗುತ್ತ ಕಾಂಗ್ರೆಸ್ಸಿನ ಡಿ.ಆರ್‌. ಪಾಟೀಲ್‌, ಯಾವಗಲ್‌, ಕೋಳಿವಾಡ, ಆತ್ಮಾನಂದ, ರಮೇಶ್‌ ಕುಡಚಿ ಮುಂತಾದ 10 ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಕೂತರು. ಆಡಳಿತ ಪಕ್ಷದವರ ನಡವಳಿಕೆಯನ್ನು ಬಿಜೆಪಿ ಸದಸ್ಯರು ಬಲವಾಗಿ ಪ್ರತಿಭಟಿಸಿದರು. ರಾಜ್ಯದ ರೈತ ವಿರೋಧಿ ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್‌ ಬೆಲೆ ಏರಿಸುವ ಮೂಲಕ ಸರ್ಕಾರ ರೈತರಿಗೆ ಮಾರಣಾಂತಿಕ ಪೆಟ್ಟು ನೀಡಿದೆ ಎಂದು ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು.

ಘೋಷಣೆ, ಧಿಕ್ಕಾರಗಳ ಪ್ರತಿಧ್ವನಿ : ಇದೇ ಸಂದರ್ಭದಲ್ಲಿ ಕೃಷಿಯಿಂದ ಪಕ್ಷಾಂತರವಾದ ಕಾಂಗ್ರೆಸ್ಸಿಗರು, ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 1993- 94 ರಲ್ಲಿ ಅಂದಿನ ಮುಖ್ಯಮಂತ್ರಿ ಮೊಯಿಲಿ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸಿದ್ದನ್ನು ಬಿಟ್ಟರೆ, ಆಡಳಿತ ಪಕ್ಷದವರೇ ಧರಣಿ ಕೂತ ಮತ್ತೊಂದು ಪ್ರಸಂಗ ವಿಧಾನಮಂಡಲದ ಇತಿಹಾಸದಲ್ಲಿ ನಡೆದಿಲ್ಲ .

ಸದನದಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಾಗ ಸಭಾಧ್ಯಕ್ಷ ಎಂ.ವಿ. ವೆಂಕಟಪ್ಪನವರು ಸದನವನ್ನು ಅರ್ಧ ಗಂಟೆ ಮುಂದೂಡಿದರು. ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಕೂಡಿದಾಗಲೂ ಆರೋಪ ಪ್ರತ್ಯಾರೋಪಗಳು ನಿಲ್ಲಲಿಲ್ಲ . ಇಷ್ಟೆಲ್ಲ ನಡೆಯುತ್ತಿದ್ದಾಗ ಜನತಾದಳದ ಉಭಯ ಬಣಗಳ ಸದಸ್ಯರು ಮೌನವಾಗಿ ಕಲಹ ಸಾಕ್ಷಿಗಳಾದರು.

ಹುಚ್ಚು ನಾಯಿಗಳು : ಹುಚ್ಚು ನಾಯಿಗಳಂತೆ ನುಗ್ಗಿ ವಿಧಾನ ಸಭೆಯಲ್ಲಿ ಏಕಾಏಕಿ ಧರಣಿ ನಡೆಸಿದ ಕಾಂಗ್ರೆಸ್‌ ಸದಸ್ಯರ ಪ್ರವೃತ್ತಿಯನ್ನು ಸಂಯುಕ್ತ ಜನತಾದಳದ ಶಾಸಕರಾದ ಸಿ. ಭೈರೇಗೌಡ ಹಾಗೂ ಪಿಜಿಆರ್‌ ಸಿಂಧ್ಯಾ ಕಟುವಾಗಿ ಖಂಡಿಸಿದ್ದಾರೆ. ವಿಧಾನಸಭೆಯನ್ನು ಕಾಂಗ್ರೆಸ್ಸಿಗರು ದನಗಳ ದೊಡ್ಡಿ ಎಂದು ತಿಳಿದುಕೊಂಡಿರುವಂತಿದೆ ಎಂದು ಸಿಂಧ್ಯಾ ಮೂದಲಿಸಿದರು.

ಇದೊಂದು ಅವಮಾನಕಾರಿ, ನಾಚಿಕೆಗೇಡಿನ ಸಂಗತಿ. ವಿಧಾನಸಭೆಯ ಇತಿಹಾಸದಲ್ಲಿ ಕಾಂಗ್ರೆಸ್‌ ಸದಸ್ಯರು ಈ ರೀತಿ ಧರಣಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಸದನಕ್ಕೆ ಅಗೌರವ ತರುವಂತೆ ನಡೆದುಕೊಂಡಿರುವ ಕಾಂಗ್ರೆಸ್‌ ಸದಸ್ಯರು ಕೂಡಲೇ ಸದನದ ಕ್ಷಮೆ ಯಾಚಿಸಬೇಕು ಎಂದು ಸಂಯುಕ್ತ ದಳದ ಮುಖಂಡರು ಆಗ್ರಹಿಸಿದರು.

ಕ್ಷಮಾಯಾಚನೆ ಅಗತ್ಯವಿಲ್ಲ : ಅನಿರೀಕ್ಷಿತ ಧರಣಿ ನಡೆಸಿದ ಕಾರಣಕ್ಕಾಗಿ ಕಾಂಗ್ರೆಸ್‌ ಸದಸ್ಯರು ಸದನದ ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಸಚಿವ ಡಿ.ಬಿ. ಚಂದ್ರೇಗೌಡ ಹೇಳಿದ್ದಾರೆ. ಹಸಿವಾದವನು ಪ್ರತಿಭಟನೆ ಸಲ್ಲಿಸುವುದು ಸಹಜ. ಅಂತೆಯೇ ಅನ್ಯಾಯವನ್ನು ಪ್ರತಿಭಟಿಸಲು ಕಾಂಗ್ರೆಸ್‌ ಸದಸ್ಯರು ಧರಣಿಯ ಮಾರ್ಗ ಹಿಡಿದಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X