ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸು ಬಂತು ಬಸ್ಸು ಮಂಗಳೂರು ಬಸ್ಸು

By Staff
|
Google Oneindia Kannada News

ರಾಜು ಮಹತಿ

ಮಂಗಳೂರು ಉಡುಪಿಯ ಕಡೆಗಿನ ರಸ್ತೆಗಳಲ್ಲಿ ಭರ್ರೋ ಎಂದು ಓಡಾಡುವುದು ಬಣ್ಣ ಬಣ್ಣದ, ಚಿತ್ತಾರದ ಖಾಸಗಿ ಬಸ್ಸುಗಳು. ಪ್ರತಿ ದಿನ ಬೈದುಕೊಂಡೇ ಜನ ಈ ಬಸ್ಸುಗಳಿಗೆ ಹತ್ತುತ್ತಾರೆ. ಮುಂದಿನ ಬಸ್ಸನ್ನು ಓವರ್‌ ಟೇಕ್‌ ಮಾಡಿದರೆ ಖುಷಿ ಪಡುತ್ತಾರೆ. ಓವರ್‌ ಟೇಕ್‌ ಮಾಡುವಾಗ ಮುಂದಿನ ವಾಹನಕ್ಕೆ ಗುದ್ದಿ ಆ್ಯಕ್ಸಿಡೆಂಟ್‌ ಆದರೆ ಅದೇ ಡ್ರೆೃವರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಾರೆ.

ಬೈಂದೂರಿನಿಂದ ಸುಳ್ಯದವರೆಗೆ ಕೆಲವು ರಾಷ್ಟ್ರೀಕೃತ ಮಾರ್ಗಗಳನ್ನು ಬಿಟ್ಟರೆ ಅವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಯಾಣಿಕರು ಖಾಸಗಿ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ವಾರ್ಷಿಕ ಐದು ಸಾವಿರ ಕೋಟಿ ರೂಪಾಯಿಗಳ ವಹಿವಾಟನ್ನು ಈ ಉದ್ಯಮ ನಡೆಸುತ್ತಿದೆ. ಅವಳಿ ಜಿಲ್ಲೆಗಳಲ್ಲಿ ಸಿಟಿ ಬಸ್‌ ಸರ್ವಿಸು, ಎಕ್ಸ್‌ ಪ್ರೆಸ್‌ಗಳೆಂದು ಒಟ್ಟು 3,500 ಖಾಸಗಿ ಬಸ್ಸುಗಳಿವೆ. ಸರಕಾರಕ್ಕೆ ಇಲ್ಲಿನ ಖಾಸಗಿ ಸಾರಿಗೆ ವ್ಯವಸ್ಥೆಯಿಂದ ವಾರ್ಷಿಕ 400 ಕೋಟಿ ರೂಪಾಯಿ ರಸ್ತೆ ತೆರಿಗೆ ಪಾವತಿಯಾಗುತ್ತದೆ.

ಈ ಬಸ್‌ಗಳು ಧೂಳು ಮೆತ್ತಿಕೊಂಡು, ಏಣಿ, ಛಾವಣಿಯ ಬೇಧವಿಲ್ಲದೆ ಜನರನ್ನು ಹೊತ್ತು , ಹಳ್ಳಿ ಹಳ್ಳಿಯ ರಸ್ತೆಗಳಲ್ಲಿ ಸಂಚರಿಸುತ್ತವೆ. ಇವಕ್ಕೆ ಡಾಮರಿನ ಹಂಗಿಲ್ಲ. ಹಳ್ಳಿಯಿಂದ ನಗರಕ್ಕೆ ಮಂಗಳೂರು ಮಲ್ಲಿಗೆ ಹೊತ್ತೊಯ್ಯುವ, ಹಾಲು ಸಾಗಿಸುವ ಬಸ್‌ಗಳು ಖಾಯಂ ಪ್ರಯಾಣಿಕರ ಬೆಳಗು ಬೈಗಿನ ಸಂಗಾತಿಗಳು. ‘ನಮ್ಮ ಉದ್ಯಮ 15 ಸಾವಿರ ಮಂದಿಗೆ ನೇರ ಉದ್ಯೋಗ ನೀಡಿದೆ. ಖಾಸಗಿ ಸಾರಿಗೆ ವ್ಯವಸ್ಥೆ ಇಡೀ ದೇಶಕ್ಕೇ ಮಾದರಿಯಾಗಿದೆ‘ ಎಂದು ದ.ಕ. ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ನಾರಾಯಣ್‌ ಹೇಳುತ್ತಾರೆ.

ಪೀಕ್‌ ಅವರ್ಸ್‌ನಲ್ಲಿ ನಿಮಿಷಕ್ಕೊಂದು ಬಸ್‌ !

ಮುಕ್ತ ಪರ್ಮಿಟ್‌ ನೀಡಿಕೆ ವ್ಯವಸ್ಥೆ ಜಾರಿಗೆ ಬಂದ ನಂತರ ಖಾಸಗಿ ಸಾರಿಗೆ ವ್ಯವಸ್ಥೆಯಲ್ಲಿ ತೀವ್ರ ಪೈಪೋಟಿ ಆರಂಭವಾಯಿತು. ಇದರ ಪರಿಣಾಮವಾಗಿ ಮಂಗಳೂರು ಉಡುಪಿ ನಡುವೆ ಬೆಳಿಗ್ಗೆ ಮತ್ತು ಸಂಜೆಯ ಪೀಕ್‌ ಅವರ್ಸ್‌ನಲ್ಲಿ ನಿಮಿಷಕ್ಕೊಂದು ಬಸ್ಸು ಓಡುತ್ತದೆ. ಮುಂದಿನ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಹಿಂದಿನ ಬಸ್ಸಿನ ವೇಗ ಅನೇಕ ಜೀವಹರಣಗಳಿಗೂ ಕಾರಣವಾಗಿದೆ.

ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸ್‌ ಪ್ರೆಸ್‌ ಬಸ್‌ಗಳು ರಸ್ತೆ ನಿಯಮಗಳನ್ನು ಪಾಲಿಸುವುದು ಕಡಿಮೆ. ಇವರ ಓವರ್‌ ಟೇಕ್‌ ಭರದಲ್ಲಿ ಸಣ್ಣ ವಾಹನಗಳು ಟಾರ್‌ ರಸ್ತೆಯಿಂದ ಕೆಳಗಿಳಿಯುವುದು ಅನಿವಾರ್ಯ. ಕರ್ಕಶ ಹಾರ್ನ್‌ನೊಂದಿಗೆ ಹಾಡು ಹಗಲೇ ಹೆಡ್‌ಲೈಟ್‌ ಉರಿಸಿ ಓವರ್‌ಟೇಕ್‌ ಮಾಡುವ ಚಾಲಕರನ್ನು ರಾಷ್ಟ್ರೀಯ ಹೆದ್ದಾರಿಯ ಯಮದೂತರು ಎಂದೇ ನಾಗರಿಕರು ಕರೆಯುತ್ತಾರೆ.

ಕಲೆಕ್ಷನ್‌ ಕಡಿಮೆಯಾದರೆ ಕೆಲಸದಿಂದ ತೆಗೆಯುತ್ತಾರೆ...

‘ಬಸ್‌ ಮಾಲಕರು ಕಲೆಕ್ಷನ್‌ಗಾಗಿ ಒತ್ತಾಯಿಸುತ್ತಾರೆ. ಕಡಿಮೆ ಕಲೆಕ್ಷನ್‌ ಬಂದರೆ ನಾಳೆಯಿಂದ ನಮಗೆ ಉದ್ಯೋಗ ಇಲ್ಲ. ವೇಗವಾಗಿ ಬಸ್‌ ಓಡಿಸದೇ ಇದ್ದರೆ ‘ಪಜೆ’ (ಚಾಪೆ) ಎಂದು ಜನ ನಮ್ಮನ್ನು ಜರೆಯುತ್ತಾರೆ’ ಎಂದು ಬಸ್‌ ಚಾಲಕರು ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಅತಿ ವೇಗದ ಚಾಲನೆ ಅನಿವಾರ್ಯ.

ಈ ಪರಿಸ್ಥಿತಿಗೆ ಸರಕಾರವೇ ಕಾರಣ. ಮುಕ್ತ ಪರ್ಮಿಟ್‌ನಿಂದ ಹೆಚ್ಚು ಬಸ್‌ಗಳು ಬಂದು, ಅನಾರೋಗ್ಯಕರ ಪೈಪೋಟಿ ಬೆಳೆದಿದೆ. ಈಗ ಈ ಉದ್ಯಮದಲ್ಲಿ ಹಿಂದಿನಷ್ಟು ಲಾಭ ಇಲ್ಲ . ಹಿಂದೆ ಇದ್ದ ಅನೇಕ ರಸ್ತೆ ಸಾರಿಗೆ ಕಂಪೆನಿಗಳು ಮುಚ್ಚಿವೆ. ಇಂದು ಲೋಕಲ್‌ ಬಸ್‌ಗೆ 12 ಲಕ್ಷ, ಏರ್‌ ಬಸ್‌ಗೆ 18 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ದ.ಕ. ಮತ್ತು ಉಡುಪಿಯಿಂದ 100 ಖಾಸಗಿ ಬಸ್‌ಗಳು ಬೆಂಗಳೂರಿನಿಂದ ಮಂಗಳೂರು ಮತ್ತು ಉಡುಪಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ.

ಎಕ್ಸ್‌ ಪ್ರೆಸ್‌ ಮತ್ತು ಸರ್ವೀಸು ಬಸ್‌ಗಳಿಗೆ ಟಿಕೇಟ್‌ ನೀಡಲು ಏಜೆಂಟರಿರುತ್ತಾರೆ. ಬಸ್‌ ಹೊರಡುವಲ್ಲಿ ಬಸ್‌ ಏರುವ ಏಜೆಂಟರು ಪ್ರಯಾಣಿಕರಿಗೆ ಟಿಕೇಟ್‌ ನೀಡಿ ನಡುದಾರಿಯಲ್ಲಿ ಇಳಿದು ಹೋಗುತ್ತಾರೆ. ಅತಿ ವೇಗ, ಚಿಲ್ಲರೆ ಸಮಸ್ಯೆಗಳಿಗೆ ತಂಗುದಾಣದ ಹಂಗಿಲ್ಲದೆ ಕೈ ಅಡ್ಡ ಬಂದಲ್ಲೆಲ್ಲಾ ಬಸ್‌ ನಿಲುಗಡೆಯ ಕಿರಿಕಿರಿಯ ನಡುವೆ ಸ್ವಚ್ಛತೆ ಮತ್ತು ಸಮಯ ಪಾಲನೆಗೆ ಇಲ್ಲಿನ ಖಾಸಗಿ ಬಸ್ಸು ಸಾರಿಗೆ ವ್ಯವಸ್ಥೆ ಒಂದು ಮಾದರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X