ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಮೇಲೆ ಹರಿಹಾಯಲು ಸಿದ್ಧವಾಗಿರುವ ವಿಪಕ್ಷಗಳ ಉರಿನಾಲಗೆ

By Oneindia Staff
|
Google Oneindia Kannada News

ಬೆಂಗಳೂರು : ರಾಜ್ಯದ ಬಜೆಟ್‌ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗುತ್ತಿದ್ದು , ವಿವಿಧ ಕಾರಣಗಳಿಗಾಗಿ ಸರ್ಕಾರದ ಮೇಲೆ ಹರಿ ಹಾಯಲು ವಿರೋಧ ಪಕ್ಷಗಳು ಸಜ್ಜಾಗಿರುವುದರಿಂದ ಅಧಿವೇಶನ ಚಕಮಕಿಯಿಂದ ಕೂಡಿರುವುದು ಬಹುತೇಕ ಸ್ಪಷ್ಟವಾಗಿದೆ.

ವಿದ್ಯುತ್‌ ಬೆಲೆ ಏರಿಕೆ, ಕೃಷ್ಯುತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿನ ವಿಫಲತೆ ಹಾಗೂ ರೈತರ ಆತ್ಮಹತ್ಯೆ ಪ್ರಕರಣಗಳು ಸದನದಲ್ಲಿ ಪ್ರಮುಖವಾಗಿ ಧ್ವನಿಸುವ ನಿರೀಕ್ಷೆಯಿದೆ. ಬಂಪರ್‌ ಬೆಳೆ ಬಂದಿದ್ದರೂ ಉತ್ತರ ಕರ್ನಾಟಕದಲ್ಲಿ ವರದಿಯಾಗಿರುವ ಸಾಲು ಸಾಲು ರೈತರ ಆತ್ಮಹತ್ಯೆಗಳಿಗೆ ಕಾರಣವಾದ ಸರ್ಕಾರದ ಬೇಜವಾಬ್ದಾರಿತನವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳಲಿವೆ. ಈ ನಿಟ್ಟಿನಲ್ಲಿ ಭಾರತೀಯ ಜನತಾಪಕ್ಷದ್ದೇ ದೊಡ್ಡ ಗಂಟಲು ಅನ್ನುವುದರಲ್ಲಿ ಅನುಮಾನವೇ ಇಲ್ಲ . ಈ ಇಂಗಿತವನ್ನು ಪಕ್ಷದ ಹಿರಿಯ ಧುರೀಣರು ಅನೇಕ ವೇದಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ದಿನಾಂಕ ಗೊತ್ತಿಲ್ಲ : ಮಾರ್ಚ್‌ 14 ರವರೆಗೂ ಸದನ ನಡೆಯಲಿದೆ. ಆದರೆ, ಈವರೆಗೂ ಬಜೆಟ್‌ ಮಂಡಿಸುವ ನಿರ್ದಿಷ್ಟ ದಿನಾಂಕದ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ . ಅಭಿವೃದ್ಧಿ ಕಾಮಗಾರಿಗಳಿಂದಾಗಿ ಈ ವರ್ಷದ ಬಜೆಟ್‌ ಹೆಚ್ಚು ಕಠಿಣವಾಗಿರುವ ಇಂಗಿತವನ್ನು ಸ್ವತಃ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾಲೇಜುಗಳ ಅನುದಾನವನ್ನು ಶೇ. 15 ರಷ್ಟು ಕಡಿತಗೊಳಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಲು ವಿರೋಧಪಕ್ಷಗಳು ತಯಾರಿ ನಡೆಸಿದ್ದರೂ, ಅಧಿವೇಶನದ ದಿನ ಹತ್ತಿರುವಿರುವಂತೆಯೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಅನುದಾನವನ್ನು ಮುಂದುವರಿಸಲು ಆದರೆ, ಅನಗತ್ಯ ಹುದ್ದೆಗಳನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.

ಮಾಹಿತಿ ತಂತ್ರಜ್ಞಾನವೊಂದೇ ಸರ್ಕಾರದ ಅಸ್ತ್ರ

ಅಧಿವೇಶನದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ಸರ್ಕಾರಕ್ಕೆ ಉಳಿದಿರುವ ಏಕೈಕ ಅಸ್ತ್ರವೆಂದರೆ ಮಾಹಿತಿ ತಂತ್ರಜ್ಞಾನ. ಜಗತ್ತಿನ ವಿವಿಧ ಭಾಗಗಳಿಂದ ರಾಜ್ಯದ ಐಟಿ ಕ್ಷೇತ್ರಕ್ಕೆ ಬಂಡವಾಳವನ್ನು ಆಕರ್ಷಿಸಿರುವ ಅಗ್ಗಳಿಕೆ ಸರ್ಕಾರದ್ದು . ಹೊಸದಾಗಿ ಪ್ರಕಟಿಸಿರುವ ಸಹಸ್ರಮಾನದ ಜೈವಿಕ ತಂತ್ರಜ್ಞಾನ ನೀತಿಯನ್ನೂ ಸರ್ಕಾರ ಗುರಾಣಿಯನ್ನಾಗಿ ಬಳಸಿಕೊಳ್ಳಬಹುದು.

ರಾಜ್ಯಪಾಲರ ಭಾಷಣದೊಂದಿಗೆ ಸೋಮವಾರ (ಫೆ. 26) ಪ್ರಾರಂಭವಾಗುವ ಎರಡೂ ಸದನಗಳು, ಅಗಲಿದ ನಾಯಕರ ಚಿರಸ್ಮರಣೆಯ ನಂತರ ಫೆ. 27 ಕ್ಕೆ ಮುಂದೂಡುತ್ತವೆ ಎಂದು ವಿಧಾನಸೌಧದ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಜೆ.ಹೆಚ್‌. ಪಟೇಲ್‌ ಹಾಗೂ ಮಾಜಿ ಸಚಿವ ಜೀವರಾಜ ಆಳ್ವಾ ಅವರಿಗೆ ಸದನ ಶ್ರದ್ಧಾಂಜಲಿ ಸಲ್ಲಿಸಲಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X