Get Updates
Get notified of breaking news, exclusive insights, and must-see stories!

ಕೃತಕ ಮಂಡಿ ಜೋಡಣೆ: ಬೆಂಗಳೂರು ವೈದ್ಯರ ಸಾಧನೆ

ಬೆಂಗಳೂರು : ನಿಮಗೆ ಮಂಡಿ ನೋವೆ? ಕೃತಕ ಮಂಡಿಯ ಜೋಡಣೆ ಆಗಲೇಬೇಕೆ? ಅದಕ್ಕಾಗಿ ನೀವು ಮುಂಬಯಿಯ ಲೇಕ್‌ವ್ಯೂ ಆಸ್ಪತ್ರೆಗೆ ಹೋಗುವ ಕಷ್ಟವೂ ಇಲ್ಲ. ಅಮೆರಿಕಾದಿಂದ ಡಾ. ಚಿತ್ತರಂಜನ್‌ ರಣಾವತ್‌ (ಪ್ರಧಾನಿ ವಾಜಪೇಯಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು) ಅವರನ್ನು ಕರೆಸುವ ಅಗತ್ಯವೂ ಇಲ್ಲ. ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ಹೋದರೇ ಸಾಕು.

ಏನು, ಡಾ. ರಣಾವತ್‌ ಅವರು ಮಾಡಿದಂತಹ ಅತ್ಯಾಧುನಿಕ ಕೃತಕ ಮಂಡಿ ಜೋಡಣೆ ಶಸ್ತ್ರಚಿಕಿತ್ಸೆ ಅದೂ ಸರಕಾರಿ ಆಸ್ಪತ್ರೆಯ ವೈದ್ಯರಿಂದ ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಬೌರಿಂಗ್‌ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದಾರೆ. ಯಶಸ್ವಿಯೂ ಆಗಿದ್ದಾರೆ. ಈ ವಿಷಯವನ್ನು ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ಚಂದ್ರಮ್ಮ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ತೀವ್ರ ಮಂಡಿ ನೋವಿನಿಂದ ನರಳುತ್ತಿದ್ದ 45 ವರ್ಷದ ಮಹಿಳೆಯಾಬ್ಬರಿಗೆ ಕೃತಕ ಮಂಡಿ ಜೋಡಿಸಿದ್ದಾರೆ. ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸರಳವಾಗಿ ಮಾಡಿ ಮಹತ್ಸಾಧನೆ ಮೆರೆದಿದ್ದಾರೆ. ಕೇವಲ ರಾಜ ಮಹಾರಾಜರು, ಮಂತ್ರಿ ಮಹೋದಯರು, ಶ್ರೀಮಂತರಿಗೆ ಮಾತ್ರ ಇಂತಹ ಅತ್ಯಾಧುನಿಕ ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯ ಎಂದು ನೋವು ಅನುಭವಿಸುತ್ತಾ, ಸಿಕ್ಕ ಸಿಕ್ಕ ಮುಲಾಮು, ಎಣ್ಣೆ ತಿಕ್ಕಿಕೊಳ್ಳುತ್ತಿದ್ದವರು ಇನ್ನು ಧೈರ್ಯವಾಗಿ ಬೌರಿಂಗ್‌ ಆಸ್ಪತ್ರೆಗೆ ಹೋಗಬಹುದು.

ಮಾಗಡಿ ತಾಲೂಕಿನ ಸೋಲೂರಿನ ಸುಮಂಗಲಾ ಅವರು ಕಳೆದ 20 ವರ್ಷದಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು. ಬಲ ಮಂಡಿಯಲ್ಲಿ ಅವರಿಗೆ ತೀವ್ರವಾದ ನೋವು ಕಾಣಿಸಿಕೊಂಡಿತ್ತು. ಮೂಳೆ ರೋಗ ತಜ್ಞರಾದ ಡಾ. ಎನ್‌. ರಮೇಶ್‌ ಈಗ ಸುಮಂಗಲಾ ಅವರ ಮಂಡಿ ನೋವಿಗೆ ಮಂಗಳ ಹಾಡಿದ್ದಾರೆ. ಕೃತಕ ಮಂಡಿಯನ್ನು ಜೋಡಿಸಿದ್ದಾರೆ.

ಡಾ. ಮಂಜುನಾಥ್‌, ಡಾ. ಗೋಪಾಲಕೃಷ್ಣ ಮತ್ತು ಡಾ. ರಾಜಣ್ಣ ಅವರು ಡಾ. ರಮೇಶ್‌ ಅವರಿಗೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನೆರವಾದರು ಎಂದು ಡಾ. ಚಂದ್ರಮ್ಮ ತಿಳಿಸಿದರು. ಈ ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಜನವರಿ 31ರಂದೇ ಮಾಡಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಚಿಕಿತ್ಸೆಯ ಬಳಿಕ ಈಗ ಸುಮಂಗಲಾ ಪೂರ್ಣ ಆರೋಗ್ಯವಾಗಿದ್ದಾರೆ ಎಂದೂ ಅವರಿ ತಿಳಿಸಿದರು. ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸುಮಂಗಲಾ ಅವರೂ ತಮಗೆ ನೋವು ಸಂಪೂರ್ಣ ಕಡಿಮೆ ಆಗಿದೆ ಎಂದು ತಿಳಿಸಿದರು. ಡಾ. ರಮೇಶ್‌ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಬೇಕು ಎಂದರು.

ಕೇವಲ 30 ಸಾವಿರ ರುಪಾಯಿ : ಈ ಚಿಕಿತ್ಸೆಗೆ ತಗುಲಿದ ವೆಚ್ಚ ಎಷ್ಟು ಗೊತ್ತೆ? ಕೇವಲ 30 ಸಾವಿರ ರುಪಾಯಿ. ಪ್ರಧಾನಿ ವಾಜಪೇಯಿ ಅವರಿಗೆ ಡಾ. ರಣಾವತ್‌ ಅವರು ಶಸ್ತ್ರಚಿಕಿತ್ಸೆ ಮಾಡಿದ ಮಾದರಿಯಲ್ಲೇ ಈ ಚಿಕಿತ್ಸೆಯನ್ನೂ ಮಾಡಲಾಗಿದೆ. ಮುಂಬಯಿಯಲ್ಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದರೆ, ಸುಮಂಗಲಾ ಅವರು ಕನಿಷ್ಠ ಒಂದು ಲಕ್ಷದಿಂದ 1.5ಲಕ್ಷ ರುಪಾಯಿ ನೀಡಬೇಕಾಗಿತ್ತು ಎನ್ನುತ್ತಾರೆ ವೈದ್ಯರು.

ಈ ಚಿಕಿತ್ಸೆಯ ಮತ್ತೊಂದು ವಿಶೇಷ ಏನು ಗೊತ್ತೆ? ಸುಮಂಗಲಾ ಅವರಿಗೆ ಜೋಡಿಸಲಾಗಿರುವ ಕೃತಕ ಮಂಡಿ ಕೂಡ ದೇಶೀಯವಾಗಿ ನಿರ್ಮಿತವಾದದ್ದೇ. ಐನಾರ್‌ ಸಂಸ್ಥೆ ಭಾರತದಲ್ಲಿಯೇ ಈ ಕೃತಕ ಮಂಡಿಯನ್ನು ನಿರ್ಮಿಸಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ಜನರೇಟರ್‌ ಸಮಸ್ಯೆ ಇರುವ ಕಾರಣ ಈ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ವಿದ್ಯುತ್‌ ಕಡಿತ ಮಾಡದಂತೆ ವಿದ್ಯುತ್‌ ನಿಗಮಕ್ಕೆ ಮನವಿ ಮಾಡಲಾಗಿತ್ತು ಎಂದೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ. ರಮೇಶ್‌ ಸುದ್ದಿಗಾರರಿಗೆ ತಿಳಿಸಿದರು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+