ಅಡಿಕೆ ಬೆಲೆ ಏರಿಳಿತ : ಅಧ್ಯಯನಕ್ಕೆ ಮಂಡಳಿ ರಚನೆ - ಸಚಿವ
ಮಂಗಳೂರು : ರೈತರ ಅಡಮಾನ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವ ಅಧಿಕಾರ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಇಲ್ಲ. ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರವೂ ಇಲ್ಲ. ಆದರೆ, ಅದಕ್ಕೆ ಸಬ್ಸಿಡಿ ನೀಡುವ ಬಗ್ಗೆ ರಾಜ್ಯ ಸರಕಾರ ಯೋಚಿಸುವುದು ಎಂದು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಆರ್.ಬಿ. ತಿಮ್ಮಾಪೂರ್ ಹೇಳಿದ್ದಾರೆ.
ಮಂಗಳೂರಿನ ನೂತನ ಎ.ಪಿ.ಎಂ.ಸಿ. ಯಾರ್ಡ್‌ನಲ್ಲಿ ಅಡಿಕೆ ಬೆಳೆಗಾರರು ಮತ್ತು ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿಷಯ ತಿಳಿಸಿದರು. ಅಡಿಕೆ ಮಾರುಕಟ್ಟೆಯ ಏರಿಳಿತಕ್ಕೆ ಸಂಬಂಧಿಸಿದಂತೆ ಸಮಗ್ರ ಮಾರುಕಟ್ಟೆ ಅಧ್ಯಯನಕ್ಕೆ ಮಂಡಳಿಯನ್ನು ರಚಿಸಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದರು.
ಅಡಿಕೆ ಮೇಲೆ ವಿವಿಧ ಹಂತಗಳ ತೆರಿಗೆಯನ್ನು ಕೈಬಿಟ್ಟು, ಬೇರೆ ರೂಪದಲ್ಲಿ ತೆರಿಗೆ ಸಂಗ್ರಹಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಈ ಬಗ್ಗೆ ವಿಧಾನ ಮಂಡಳದ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದೂ ಸಚಿವರು ಹೇಳಿದರು. ಅಡಿಕೆ ಮೇಲಿನ ಮಾರುಕಟ್ಟೆ ತೆರಿಗೆಯೂ ಸೇರಿದಂತೆ ಒಟ್ಟು ಶೇಕಡಾ 6ರಷ್ಟು ತೆರಿಗೆಯನ್ನು ಕೈಬಿಡಬೇಕೆಂಬ ಅಡಿಕೆ ಬೆಳೆಗಾರರ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.
ಪ್ರಸ್ತುತ ಮಂಗಳೂರು ಬಂದರು ಪ್ರದೇಶದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಇನ್ನೊಂದು ತಿಂಗಳೊಳಗೆ ಬೈಕಂಪಾಡಿಯ ನೂತನ ಮಾರುಕಟ್ಟೆ ಯಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದೂ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಶಾಸಕರಾದ ಪ್ರಭಾಕರ ಬಂಗೇರ, ವಿಜಯಕುಮಾರ್ ಶೆಟ್ಟಿ, ಡಿ.ವಿ. ಸದಾನಂದಗೌಡ, ಯೋಗೀಶ್ ಭಟ್, ಜಿಲ್ಲಾ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಎಂ.ಬಿ. ಸದಾಶಿವ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
(ಮಂಗಳೂರು ಪ್ರತಿನಿಧಿಯಿಂದ)