Get Updates
Get notified of breaking news, exclusive insights, and must-see stories!

ಜಾಗರಣೆ ಒಗ್ಗರಣೆಯ ಚಿಟಿಚಿಟಿ

ಎಲ್ಲೆಲ್ಲೂ ಶಿವನ ದೇವಸ್ಥಾನದ ಭಜನೆಗೆ ಹೋಗುವ, ಫ್ಲಡ್‌ಲೈಟ್‌ ಕ್ರಿಕೆಟ್ಟಾಡುವ, ಭಜನೆ- ಅರ್ಥಾತ್‌ ಇಸ್ಪೀಟಾಡುವ ನಾಳಿನ ಶಿವರಾತ್ರಿ ಜಾಗರಣೆಯ ಒಗ್ಗರಣೆಯ ಚಿಟಿಚಿಟಿ. ಬೆಂಗಳೂರಿನ ಮಲ್ಲೇಶ್ವರ, ಜಯನಗರ, ಕಲಾಸಿಪಾಳ್ಯದ ಹೂಹಣ್ಣು ದುಖಾನುಗಳು ಮೈತುಂಬಿಕೊಂಡಿದ್ದು ಹಬ್ಬದ ಮಘಮಘ. ಇದರ ನಡುವೆ ನಿಂತು ತಿಂಗಳ ಕೊನೆಯೆಂಬ ‘ಉಸ್‌’ ಮಂತ್ರದೊಂದಿಗೇ ಚೌಕಾಶಿ ಮಾಡುವ ಜನರ ಗಿಜಿಗಿಜಿ.

ಶಿವರಾತ್ರಿ ಬಂತೋ ಸೆಕೆ ತಂತೋ ಅನ್ನೋದನ್ನ ಸುಳ್ಳಾಗಿಸಿರುವ ಸೂರ್ಯದೇವ ಉರಿಯತೊಡಗಿ ಪಕ್ಷವೇ ಕಳೆದಿದೆ. ದೇವಸ್ಥಾನದ ಐನೋರುಗಳಿಗೆ ಬೆಮರಿನ ಕಮಟಿನಲ್ಲೂ ಮಂಗಳವಾರ ಕಣ್ತುಂಬ ನಿದ್ರೆ. ಬುಧವಾರದ ಜಾಗರಣೆಗೆ ಮುನ್ನಾ ತಯಾರಿ. ಆಚೆ ಮನೆ ಸುಬ್ಬಮ್ಮ ಗ್ಯಾಸ್‌ಟ್ರಿಕ್ಕಿನ ತೊಂದರೆಯಿಂದ ಉಪವಾಸ ವ್ರತಕ್ಕೆ ಭಂಗ ಬಾರದೆಂದು ಕುರುಕಲು ಕರಿಯುತ್ತಿದ್ದರೆ, ಹಾಸ್ಯ ಸಾಹಿತಿಗಳು ರಾತ್ರಿಯಿಡೀ ಶಿವನಿಗೆ ನಗೆ ನೈವೇದ್ಯ ಮಾಡಲು ಹೋಂವರ್ಕ್‌ ಮಾಡಿಕೊಳ್ಳುತ್ತಿದ್ದಾರೆ.

ಮೈಲುದ್ದದ ಕ್ಯೂನಿಂದ ತಪ್ಪಿಸಿಕೊಳ್ಳಲು ಅರ್ಚಕರನ್ನು ರಿಸರ್ವ್‌ ಮಾಡಿಕೊಳ್ಳುವ ಮಂದಿಯ ಭರಾಟೆ ಭಲೇ ಜೋರು. ಹಣ್ಣು ಹಂಪಲು, ಶಿವಸ್ತೋತ್ರದ ರಿಹರ್ಸಲ್ಲು, ಹಾಡುಹಸೆಯ ತಾಲೀಮು ಹತ್ತಿ ಹೊಸೆಯುವ ಕೆಲಸದ ನಡುವೆಯೇ ತೇಲುತ್ತಿದೆ. ಹವೆಯ ತುಂಬೆಲ್ಲಾ ಹಬ್ಬದ ಗಾಳಿ.

ಆರ್ದ್ರವಿಲ್ಲದ ಗಾಳಿ ಸೂರ್ಯನ ಶಾಖೆಗೆ ಹೆದರಿ ಮರಗಳ ಗರ್ಭ ಸೇರಿದೆ. ಗಾಳಿಯ ಆತಂಕ ಅರಿತ ಮೋಡವೊಂದು ಆಗೊಮ್ಮೆ ಈಗೊಮ್ಮೆ ರವಿತೇಜಕ್ಕೆ ಭಂಗ ತಂದು ಗಾಳಿ ಉಸಿರಾಡುವಂತೆ ಮಾಡಿತು. ಆದರೆ ದೀರ್ಘ ನಿದ್ರೆಯಲ್ಲಿರುವ ಮಳೆರಾಯ ಎಚ್ಚರಾಗುವ ಯಾವ ಲಕ್ಷಣಗಳೂ ಇಲ್ಲ. ಬೇಸಿಗೆಯಿಂದ ಕೊಂಚ ಮಟ್ಟಿಗೆ ವಿನಾಯಿತಿ ಪಡೆದಿರುವ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ಅತಿ ಕಡಿಮೆ ತಾಪಮಾನ 16.5 ಡಿಗ್ರಿ ಸೆಲ್ಷಿಯಸ್‌ ಉರಿಯಿತ್ತು. ಆಗಾಗ ಓಡಾಡುವ ಮೋಡ ನಿಂತು ಮಳೆ ಸುರಿಸೋದು ಸುಳ್ಳು ಅನ್ನುತ್ತಿದೆ ಹವಾಮಾನ ಇಲಾಖೆ.

ಶಿವನಿಗೆ ಚೆಂದದ ಹಾರ ಹೊಂಚುವ, ಬಾಣಲೆ ಮುಂದೆ ಗರಿಗರಿ ತಿಂಡಿ ಕರಿಯುವ ಮಂದಿಗೆ ಉಡುಗೆ ಮೈಗಂಟಿರುವ ಬಗ್ಗೆ ಕೊಂಚವೂ ಅಸಹ್ಯವಿಲ್ಲ. ಅದರ ಅರಿವೆಯೂ ಅವರಿಗಿಲ್ಲ. ಮನದ ತುಂಬೆಲ್ಲಾ ಇರುವುದೊಂದೇ, ಶಿವರಾತ್ರಿಯ ಅಲೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+