ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ : ಹೆದ್ದಾರಿಯಲ್ಲಿ 10 ಕಿಮೀಗೊಂದು ತುರ್ತು ಚಿಕಿತ್ಸಾ ಕೇಂದ್ರ

By Staff
|
Google Oneindia Kannada News

ಉಡುಪಿ : ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಗಾಯಾಳುಗಳಿಗೆ ತುರ್ತು ಚಿಕಿತ್ಸೆಯನ್ನು ಒದಗಿಸುವ ದೃಷ್ಟಿಯಿಂದ ಪ್ರತಿ 10 ಕಿಲೋಮೀಟರ್‌ಗೊಂದು ದುರಂತ ನಿರ್ವಹಣಾ ಕೇಂದ್ರಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸುವ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಗೌರವ್‌ ಗುಪ್ತಾ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್‌, ಉಡುಪಿ ಪಟ್ಟಣ ಮುನಿಸಿಪಾಲಿಟಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಸಪ್ತಾಹವನ್ನು ಸೋಮವಾರ ಉದ್ಘಾಟಿಸಿ ಗೌರವ್‌ ಗುಪ್ತಾ ಮಾತನಾಡುತ್ತಿದ್ದರು. ಸರ್ಕಾರವು ಇಂತಹ ಬೃಹತ್‌ ಯೋಜನೆಗೆ ಹಣ ಒದಗಿಸಲು ಸಾಧ್ಯವಿಲ್ಲ . ಆದ್ದರಿಂದ ಯೋಜನೆಯಲ್ಲಿ ವಿವಿಧ ಸ್ವಯಂ ಸೇವಾ ಸಂಘಟನೆಗಳನ್ನು ಹಾಗೂ ವಿಮಾ ಏಜನ್ಸಿಗಳನ್ನು ಸೇರಿಸಿಕೊಳ್ಳಲು ಯೋಚಿಸಲಾಗುತ್ತಿದೆ ಎಂದರು.

ಇತ್ತೀಚೆಗೆ ಇತರೆ ರಸ್ತೆ ಅಪಘಾತಗಳ ಸಂಖ್ಯೆಗಳಿಗಿಂತ ಹೆದ್ದಾರಿ ಅಪಘಾತಗಳು ಹೆಚ್ಚುತ್ತಿವೆ. ಹೆದ್ದಾರಿಗಳಲ್ಲಿನ ವಾಹನ ಸಂಚಾರ ನಿಯಂತ್ರಣ, ರಸ್ತೆ ನಿಯಮಗಳ ಉಲ್ಲಂಘನೆ, ಕುಡಿದು ವಾಹನ ಓಡಿಸುವವರನ್ನು ತಡೆಗಟ್ಟುವುದು, ಮುಂತಾದ ಕಾರ್ಯಗಳಿಗಾಗಿ ಹೆದ್ದಾರಿಯಲ್ಲಿ ಪೊಲೀಸ್‌ ಪೆಟ್ರೋಲ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಕಳುಹಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎರಡು ನಿಮಿಷಕ್ಕೊಂದು ಸಾವು : ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್‌ ಅಧೀಕ್ಷಕ ಅಮೃತ್‌ ಪಾಲ್‌ ಅವರು, ಪ್ರತಿ ಎರಡು ನಿಮಿಷಕ್ಕೊಂದು ಜೀವ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತಿವರ್ಷ 6 ಸಾವಿರ ಜನರು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದಾರೆ ಎಂದರು.

ಬಹಳಷ್ಟು ಅಪಘಾತಗಳಲ್ಲಿ ಚಾಲಕ ಮದ್ಯಪಾನ ಸೇವಿಸಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ, ಚಾಲಕರಿಗೆ ತಿಳಿವಳಿಕೆ ನೀಡುವ ಹೊತ್ತಗೆ, ಮಾಹಿತಿ ಪತ್ರಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಿಸಿದೆ ಎಂದು ಅಮೃತ್‌ಪಾಲ್‌ ಹೇಳಿದರು. ಇದೇ ಸಂದರ್ಭದಲ್ಲಿ ರಸ್ತೆ ಅಪಘಾತ ಬಗೆಗಿನ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲೆಯ ಫೋಟೋ ಜರ್ನಲಿಸ್ಟ್‌ಗಳು ಏರ್ಪಡಿಸಿದ್ದರು. ಇದಕ್ಕೂ ಮುನ್ನ ಸುಮಾರು 50 ಶಾಲಾ ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೊಲೀಸರು, ಸ್ಕೌಟ್‌ ದಳದವರು ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಬೃಹತ್‌ ರ್ಯಾಲಿ ನಡೆಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X