ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಚಿಂಗ್‌ ದಿ ಕ್ರಿಕೆಟ್‌ ಕೋಚಸ್‌ : ತ್ರಿದಿನಗಳ ಸಂಕಿರಣ ಪ್ರಾರಂಭ

By Staff
|
Google Oneindia Kannada News

ಬೆಂಗಳೂರು : ರೋಡ್ನಿ ಮಾರ್ಷ್‌, ಇಎಎಸ್‌ ಪ್ರಸನ್ನ, ಆಸ್ಟ್ರೇಲಿಯಾದ ವಿಕೆಟ್‌ ಕೀಪರ್‌ ವೇಯ್ನೆ ಫಿಲಿಪ್‌, ಜಾನ್‌ ರೈಟ್‌, ಬ್ರಿಯಾನ್‌ ಟ್ಯಾಬರ್‌, ಬಿಶನ್‌ ಸಿಂಗ್‌ ಬೇಡಿ, ಟಿ.ಎ.ಶೇಖರ್‌, ಕ್ರೀಡಾ ದೈಹಿಕ ತಜ್ಞರಾದ ಸ್ಯಾಂಡಿ ಗಾರ್ಡನ್‌ ಹಾಗೂ ಆ್ಯಂಡ್ರೂ ಲೀಪಸ್‌ ಮೊದಲಾದ ದಿಗ್ಗಜರು ಕ್ರಿಕೆಟ್‌ನಲ್ಲಿ ತರಬೇತಿ ನೀಡುವುದು ಹೇಗೆ ಎಂಬುದನ್ನು ಕಲಿಸುವ ತ್ರಿದಿನಗಳ ಸಂಕಿರಣ ಸೋಮವಾರ ಪ್ರಾರಂಭವಾಯಿತು.

ಭಾರತ ಕ್ರಿಕೆಟ್‌ ಮಂಡಳಿಯ ಈ ಹೊಸ ಕಾರ್ಯಕ್ರಮ, 3 ದಿನಗಳ ಕಾಲದ ವಿಚಾರ ಸಂಕಿರಣವನ್ನು ಬಿಸಿಸಿಐನ ಮಾಜಿ ಅಧ್ಯಕ್ಷ ರಾಜ್‌ಸಿಂಗ್‌ ಡುಂಗಾರ್‌ಪುರ್‌ ಸೋಮವಾರ ಉದ್ಘಾಟಿಸಿದರು. ಮ್ಯಾಚ್‌ಫಿಕ್ಸಿಂಗ್‌ನ ಕಪ್ಪು ಮೋಡ ಕವಿದಿರುವ ಇವತ್ತಿನ ಪರಿಸ್ಥಿತಿಯಲ್ಲಿ ಕ್ರಿಕೆಟ್ಟಿನಲ್ಲಿ ಗುಣಮಟ್ಟದ ಆಟ ರೂಪಿಸುವುದು ಒಂದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಇಟ್ಟಿರುವ ಈ ಹೆಜ್ಜೆ ಖಂಡಿತವಾಗಿಯೂ ಶ್ಲಾಘನೀಯ. ತರಬೇತುದಾರರು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಕಲಿಯಲು ಈ ಸಂಕಿರಣ ನೆರವಾಗಲಿದೆ ಎಂದು ಡುಂಗಾರ್‌ಪುರ್‌ ಹೇಳಿದರು.

ಟೆಸ್ಟ್‌ ಕ್ರಿಕೆಟ್‌ನ ಮಾಜಿ ತಾರೆಗಳೂ ಸೇರಿದಂತೆ ಸುಮಾರು 70 ಕ್ರಿಕೆಟ್‌ ತರಪೇತುದಾರರು ಸಂಕಿರಣದ ಲಾಭ ಪಡೆಯಲಿದ್ದಾರೆ. ಸಂಕಿರಣ ಒಂದು ಸರ್ಟಿಫಿಕೇಟ್‌ ಕೋರ್ಸನ್ನೂ ಒಳಗೊಂಡಿರುತ್ತದೆ. ವಿವಿಧ ದೇಶಗಳ ಕ್ರಿಕೆಟ್‌ ದೊರೆಗಳು ತಮಗೆ ತಿಳಿದಿರುವ ಅಂಶಗಳನ್ನು ತಿಳಿಹೇಳುವುದರಿಂದ ತರಪೇತುದಾರರಿಗೆ ಕ್ರಿಕೆಟ್ಟಿನ ಇಂಚಿಂಚೂ ಹೆಚ್ಚು ಮನದಟ್ಟಾಗುತ್ತದೆ. ಅವರು ಇಲ್ಲಿ ಹೀರಿಕೊಳ್ಳುವ ಅಂಶಗಳನ್ನು ಯುವ ಕ್ರಿಕೆಟಿಗರಲ್ಲಿ ತುಂಬಲು ಸಂಕಿರಣ ಉತ್ತಮ ಪ್ರಯತ್ನವಾಗಬಲ್ಲುದು ಎರ್ಬುದು ಡುಂಗಾರ್‌ಪುರ್‌ ವಿಶ್ವಾಸ.

ಸಂಕಿರಣದ ದಿನವಹಿ ಕಾರ್ಯಕ್ರಮ ಪಟ್ಟಿ

ಫೆ.19, ಸೋಮವಾರ - ಜಾನ್‌ ರೈಟ್‌ ಮತ್ತು ಸ್ಯಾಂಡಿ ಗಾರ್ಡನ್‌ ಅವರಿಂದ ಉಪನ್ಯಾಸ. ವಿಷಯ : ಪ್ರತಿಭೆ ಮತ್ತು ಭಾವನಾತ್ಮಕ ಬೌದ್ಧಿಕತೆ ಅಭಿವೃದ್ಧಿ. ದೈಹಿಕ ತಜ್ಞ ಲೀಪ ಸ್‌ ಫಿಟ್‌ನೆಸ್‌ ಬಗೆಗೆ ಒಂದಿಷ್ಟು ಮಾಹಿತಿ ಕೊಡುವರು. ಎ.ಎಸ್‌.ರಾಣಾ ಸಂಧಿ- ಕೀಲುಗಳ ಸಡಿಲಿಕೆಯೆಂತು ಎಂದು ವಿವರಿಸುವರು.

ಫೆ. 20, ಮಂಗಳವಾರ- ಸ್ಪಿನ್‌ ಹುಲಿಗಳಾದ ಪ್ರಸನ್ನ ಮತ್ತು ಬೇಡಿ ಸ್ಪಿನ್‌ ಬೌಲಿಂಗ್‌ನ ಮಗ್ಗಲುಗಳನ್ನು ತಿಳಿಹೇಳುವರು. ಮೂವರು ಸ್ಪಿನ್ನರ್‌ಗಳಿಂದ ಸ್ಪಿನ್‌ ಬೌಲಿಂಗ್‌ ತಂತ್ರಗಳನ್ನೂ ಪ್ರಾಯೋಗಿಕವಾಗಿ ತೋರಿಸಿ ಕೊಡುವರು. ಆಸ್ಟ್ರೇಲಿಯಾದ ಮೋಡಿಗಾರ ಶೇನ್‌ ವಾರ್ನ್‌ ಬೌಲಿಂಗ್‌ನ ವಿಡಿಯೋ ಪ್ರದರ್ಶನ. ಆತನ ಬೌಲಿಂಗ್‌ನಲ್ಲಿನ ಲೋಪಗಳನ್ನು ಬೇಡಿ ಹಾಗೂ ಪ್ರಸನ್ನ ಹೆಕ್ಕಿ ತೋರುವರು. ಓಡುವುದು ಹೇಗೆ ಮತ್ತು ಬ್ಯಾಟ್ಸ್‌ಮನ್‌ ಮಾಡಬೇಕಾದ ವ್ಯಾಯಾಮಗಳಾವುವು ಎಂಬುದನ್ನು ವಿವರಿಸಲಿದ್ದಾರೆ ಫಿಲಿಪ್ಸ್‌.

ಫೆ.21, ಬುಧವಾರ- ಸಂಕಿರಣದ ಅಂತಿಮ ದಿನ. ವೇಯ್ನೆ ಫಿಲಿಪ್ಸ್‌, ರೋಡ್ನಿ ಮಾರ್ಷ್‌ ಹಾಗೂ ಸ್ಯಾಂಡಿ ಗಾರ್ಡನ್‌ ಬ್ಯಾಟಿಂಗ್‌ ತಂತ್ರಗಳನ್ನು ಹೇಳಿಕೊಡಲಿದ್ದಾರೆ. ಲೋಪಗಳನ್ನು ಪತ್ತೆ ಮಾಡಿ, ಅದರ ನಿವಾರಣೆ ಎಂತು ಎಂಬುದನ್ನೂ ವಿವರಿಸುವರು. ತದನಂತರ ಟಿ.ಎ.ಶೇಖರ್‌ ಹಾಗೂ ವಿಕೆಟ್‌ ಕೀಪರ್‌ ರೋಡ್ನಿ ಮಾರ್ಷ್‌ ವೇಗದ ಬೌಲಿಂಗ್‌ ದಾಳಿ ಮತ್ತು ರಕ್ಷಣಾ ತಂತ್ರಗಳ ಬಗೆಗೆ ಪ್ರಾಯೋಗಿಕ ಪಾಠ ಮಾಡುವರು. ನಾಯಕನ ಹೆಗಲ ಮೇಲೆ ಎಷ್ಟು ಹೊರೆ ಹೊರಿಸಬೇಕೆಂಬುದೂ ತರಪೇತಿಯ ಅಂಶ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕದಂಥ ಗೆಲ್ಲುವ ಕುದುರೆಗಳಿಗಿಂತ ಭಾರತವೇಕೆ ಹಿಂದುಳಿದಿದೆ ಎಂಬ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಂಡಳಿಯ ಉತ್ತಮ ಹೆಜ್ಜೆ. ಮಂಕು ಕವಿದಿರುವ ಕ್ರಿಕೆಟ್ಟಿನ ಭವಿತವ್ಯ ಉತ್ತಮವಾಗಲಿ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X