ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕ್‌ ವಾಗೆ ಆಸ್ಟ್ರೇಲಿಯಾ ಭದ್ರತಾ ದೊರೆ ಡಿಕನ್ಸನ್‌ ರಕ್ಷಣೆ

By Staff
|
Google Oneindia Kannada News

*ಪಾರಿತೋಷ್‌ ಪರಾಶರ್‌

ಮುಂಬೈ : ಭಾರತದ ನೆಲದಲ್ಲೂ ಉತ್ತಮವಾಗಿ ಆಡಬಲ್ಲ ಸಾಮರ್ಥ್ಯವುಳ್ಳ, ಮತ್ತೆ ತನ್ನ ಹಿಂದಿನ ಫಾರ್ಮ್‌ ಕಂಡುಕೊಂಡಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಕ್‌ ವಾ ಭಾರತದಲ್ಲಿ ಬಿಗಿ ರಕ್ಷಣೆಯಲ್ಲಿರುತ್ತಾರೆ. ಅವರ ಭದ್ರತೆಗಾಗಿ ಆಸ್ಟ್ರೇಲಿಯಾದ 14 ಮಂದಿಯ ಭದ್ರತಾ ಅಧಿಕಾರಿಗಳು ಬುಧವಾರ ಭಾರತಕ್ಕೆ ಬಂದಿಳಿದಿದ್ದಾರೆ.

ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಆಡಲಿರುವ ಮೂರು ಟೆಸ್ಟ್‌ ಹಾಗೂ 8 ಒಂದು ದಿನದ ಪಂದ್ಯಗಳು ಪೂರೈಸುವವರೆಗೆ ಭದ್ರತಾ ಸಿಬ್ಬಂದಿ ಭಾರತದಲ್ಲೇ ಠಿಕಾಣಿ ಹೂಡಲಿದ್ದಾರೆ. ಪಂದ್ಯವೊಂದರ ಮಾಹಿತಿ ನೀಡಲು ತನ್ನಿಂದ ಮಾರ್ಕ್‌ ವಾ 20 ಸಾವಿರ ಡಾಲರ್‌ ಹಣ ಪಡೆದಿರುವುದಾಗಿ ಭಾರತದ ಬುಕ್ಕಿ ಮಕೇಶ್‌ ಗುಪ್ತಾ ಹೇಳಿರುವ ಹಿನ್ನೆಲೆಯಲ್ಲಿ ವಾ ಅವರಿಗೆ ಜೀವಭಯ ಇಲ್ಲದಿಲ್ಲ. ಈಗಾಗಲೇ ಅವರಿಗೆ ಅನಾಮಧೇಯ ಕರೆಗಳು ಬಂದಿರುವ ಬಗೆಗೂ ಪುಕಾರುಗಳೆದ್ದಿವೆ.

ಡಿಕನ್ಸನ್‌ ಎಂಬ ಕಟ್ಟಾಳು : ಬ್ರಿಸ್ಬೇನಿನ ‘ಬಿಸಿನೆಸ್‌ ಲಾಸ್‌ ಪ್ರಿವೆನ್ಷನ್‌’ ಎಂಬ ಕಂಪನಿ ನಡೆಸುತ್ತಿರುವ ಹೆಸರಾಂತ ಭದ್ರತಾ ಅಧಿಕಾರಿ ಡಿಕನ್ಸನ್‌, ಭದ್ರತಾ ತಂಡದ ನೇತೃತ್ವ ವಹಿಸಿದ್ದಾರೆ. ವಾ ಜೊತೆಯಲ್ಲಿ ಈತ ಇರುವುದು ಅವರಿಗೆ ನೂರಾನೆ ಬಲ ಇದ್ದಂತೆ. ಯಾಕೆಂದರೆ ಡಿಕನ್ಸನ್‌ ದೈಹಿಕವಾಗಷ್ಟೇ ಅಲ್ಲದೆ ಮಾನಸಿಕವಾಗಿಯೂ ಕಟ್ಟಾಳು. ಪ್ರಸಿದ್ಧ ಉದ್ಯಮಿಯಾಬ್ಬರ ಅಪಹರಣವಾಗಿದ್ದ ಮಗಳನ್ನು ಬುದ್ಧಿವಂತಿಕೆಯಿಂದ ಬಿಡಿಸಿಕೊಂಡು ಬಂದಿರುವ ಡಿಕನ್ಸನ್‌ ಹಾಗೂ ತಂಡ ಆಸ್ಟ್ರೇಲಿಯಾದಲ್ಲಿ ಮನೆಮಾತು.

ಹಿಂದೆ 1994ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಸಲೀಂ ಮಲಿಕ್‌ ವಿಚಾರಣೆ ನಡೆಯುತ್ತಿದ್ದ ಸಂದಭದಲ್ಲಿ ಲಾಹೋರ್‌ ಹೈಕೋರ್ಟಿಗೆ ಮಾರ್ಕ್‌ ವಾ ಸಾಕ್ಷ್ಯ ಹೇಳಲು ಹೋಗಿದ್ದಾಗಲೂ ಡಿಕನ್ಸನ್‌ ಅವರ ಜೊತೆಗಿದ್ದರು. ಸುಸಜ್ಜಿತ ಶಸ್ತ್ರಾಸ್ತ್ರ , ಸಮಯ ಪ್ರಜ್ಞೆ, ಅನನ್ಯ ತಂತ್ರಗಳಿಗೆ ಹೆಸರುವಾಸಿಯಾಗಿರುವ ಡಿಕನ್ಸನ್‌ ಅಂಡ್‌ ಟೀಮ್‌ ಭಾರತದಲ್ಲಿರುವಷ್ಟೂ ಕಾಲ ಮೈಯೆಲ್ಲಾ ಕಣ್ಣಾಗಿಸಿಕೊಳ್ಳಲಿದೆ.

ವಾಗೆ ಸದಾ ಡಿಕನ್ಸನ್‌ ಸಾಥ್‌ : ಮ್ಯಾಚ್‌ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಪೊಲೀಸರು, ಸಿಬಿಐ ಮಾರ್ಕ್‌ ವಾ ಅವರನ್ನು ಭೇಟಿಯಾಗುವ ಸಾಧ್ಯತೆ ಇರುವುದರಿಂದ ವಾ ಪೂರ್ಣ ಪ್ರಮಾಣದಲ್ಲಿ ಸಜ್ಜಾಗೇ ಬಂದಿದ್ದಾರೆ. ಕ್ರಿಕೆಟ್‌ ಮೈದಾನವೊಂದನ್ನು ಬಿಟ್ಟು ಅವರು ಹೋದೆಡೆಯೆಲ್ಲಾ ಡಿಕನ್ಸನ್‌ ಸಾಥ್‌ ನೀಡುವುದು ಗ್ಯಾರಂಟಿ.

ಎಲ್ಲಾ ಸರಿ, ಇಷ್ಟೆಲ್ಲಾ ಮಾನಸಿಕ ಒತ್ತಡಗಳ ನಡುವೆ ಮಾರ್ಕ್‌ ವಾ ಕ್ರಿಕೆಟ್ಟನ್ನು ಹೇಗೆ ಆಡಿಯಾರು ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರಶ್ನಿಸುತ್ತಿರುವುದರಲ್ಲೂ ಅರ್ಥವಿದೆ. ಈ ಒತ್ತಡವೇ ಭಾರತದಲ್ಲಿ ಮಾರ್ಕ್‌ ವಾ ಅವರ ಡ್ರಾ ಬ್ಯಾಕ್‌ ಆಗಬಹುದು, ಭಾರತಕ್ಕೆ ಅದೇ ವರದಾನವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ವಾರೆ ‘ವಾ’ : ಆದರೆ ವಾ ಅವರ ಈ ಮಾತುಗಳು ಅವರ ಮಾನಸಿಕ ಸ್ಥೈರ್ಯಕ್ಕೆ ಕನ್ನಡಿ ಹಿಡಿಯುತ್ತಿವೆ- ‘ಮೊನ್ನೆ ಭಾರತ ಪ್ರವಾಸದ ನಂತರ ವಿಚಾರಣೆ ನಡೆಸುವಂತೆ ಐಸಿಸಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯನ್ನು ನಾನು ಕೇಳಿಕೊಂಡಾಗ ನನ್ನ ಮೇಲೆ ಸಿಡಿದ ರಾಡಿ ಅಷ್ಟಿಷ್ಟಲ್ಲ. ಆ ಒತ್ತಡದಲ್ಲೇ ಆಸ್ಟ್ರೇಲಿಯಾ ಪರ ದಾಖಲೆ ಶತಕ ದಾಖಲಿಸಿದೆ. ಹೆಸರಿನ ಜೊತೆಗೇ ಕೆಸರೂ ಸಿಡಿಯೋದು ಸಹಜವಾಗಿರುವ ಈ ಹೊತ್ತಿನ ಪರಿಸ್ಥಿತಿಯಲ್ಲಿ ನಾವು ಮಾನಸಿಕವಾಗಿ ಎಲ್ಲಕ್ಕೂ ರೆಡಿಯಾಗಿರಬೇಕು. ನಾನು ನನ್ನ ಮಾಮೂಲಿ ಆಟ ಆಡಲಿದ್ದೇನೆ’.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X