ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ : ಹಳ್ಳಿಗಳಲ್ಲಿ ಲೋಡ್‌ಶೆಡ್ಡಿಂಗ್‌, ಬೆಂಗಳೂರಿಗೆ ವಿನಾಯಿತಿ

By Staff
|
Google Oneindia Kannada News

ಬೆಂಗಳೂರು : ಮುಂಬರುವ ಬೇಸಿಗೆಯಲ್ಲಿ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್‌ ಜಾರಿಗೆ ಬರಲಿದೆ. ಆದರೆ, ಬೆಂಗಳೂರೂ ಸೇರಿದಂತೆ ಇತರ ಪ್ರಮುಖ ಪಟ್ಟಣಗಳಿಗೆ ಜೂನ್‌ ತಿಂಗಳವರೆಗೆ ವಿದ್ಯುತ್‌ ಕಡಿತದಿಂದ ವಿನಾಯಿತಿ ನೀಡಲಾಗಿದೆ. ಈ ವಿಷಯವನ್ನು ಕೆಪಿಟಿಸಿಎಲ್‌ ಅಧ್ಯಕ್ಷ ವಿ.ಪಿ. ಬಾಳಿಗಾರ್‌ ತಿಳಿಸಿದ್ದಾರೆ.

ಅನಿವಾರ್ಯವಾದರೆ, ನಗರ ಪ್ರದೇಶಗಳಲ್ಲಿ ಕೂಡ ಜೂನ್‌ ನಂತರ ವಿದ್ಯುತ್‌ ಕಡಿತ ಜಾರಿಗೆ ತರುವ ಇಂಗಿತವನ್ನು ವ್ಯಕ್ತಪಡಿಸಿದ ಬಾಳಿಗಾರ್‌, ಗ್ರಾಮಾಂತರ ಪ್ರದೇಶಗಳಿಗೆ ಲೋಡ್‌ಶೆಡ್ಡಿಂಗ್‌ ಬಿಸಿ ತಟ್ಟೇ ತಟ್ಟಲಿದೆ ಎಂಬುದನ್ನು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಒಟ್ಟು 93 ದಶಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌ ಬಳಕೆಯಾಗುತ್ತಿದೆ. ರಾಜ್ಯದ ಬೇಡಿಕೆ ಇನ್ನೂ ಅಧಿಕವಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷದ ವಿದ್ಯುತ್‌ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಕಡಿತ ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.

ಆದರೆ ರೈತರಿಗೆ ತೊಂದರೆ ಆಗದಂತೆ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಒದಗಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಶರಾವತಿ ಟೇಲ್‌ರೇಸ್‌ ಯೋಜನೆ ಮೊದಲ ಘಟಕ ಸದ್ಯದಲ್ಲೇ 60 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿದೆ. ಈ ಘಟಕದ ವಿದ್ಯುತ್‌ ಮಾರ್ಗ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ರಾಷ್ಟ್ರೀಯ ವಿದ್ಯುತ್‌ ಜಾಲದಿಂದ 20 ದಶಲಕ್ಷ ಯೂನಿಟ್‌ ವಿದ್ಯುತ್‌ ಪಡೆಯಲಾಗುತ್ತಿದೆ ಎಂಬ ವಿವರಗಳನ್ನೂ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದರು.

ಮಳೆಯ ವರ : ಕಳೆದ ವರ್ಷ ಸೂಕ್ತ ಸಮಯದಲ್ಲಿ ಸಾಕಷ್ಟು ಮಳೆ ಆದ ಹಿನ್ನೆಲೆಯಲ್ಲಿ ವಿದ್ಯುತ್‌ ಉತ್ಪಾದನೆ ಸಮರ್ಪಕವಾಗಿದೆ, ಹೀಗಾಗಿ ವಿದ್ಯುತ್‌ ಕೊರತೆಯ ತೀವ್ರತೆ ಕಡಿಮೆ ಆಗಿದೆ ಎಂದ ಅವರು, ಎಲ್ಲವೂ ಲೆಕ್ಕಾಚಾರದಂತೆ ನಡೆದರೆ, ಬರುವ ಜೂನ್‌ವರೆಗೆ ವಿದ್ಯುತ್‌ ಕೊರತೆ ಬಾರದಂತೆ ನಿಭಾಯಿಸಬಹುದು ಎಂದರು.

ತುರವನೂರು ವಿದ್ಯುತ್‌ ಕೇಂದ್ರ : ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಇನ್ನೊಂದು ಹೊಸ ವಿದ್ಯುತ್‌ ಕೇಂದ್ರ ಆರಂಭಿಸಲಾಗುವುದು. ಇದು ಮುಂದಿನ ವರ್ಷದೊಳಗೆ ಪ್ರಾರಂಭವಾಗಲಿದೆ ಎಂದೂ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಮಾರ್ಗ್‌ ಸಂಸ್ಥೆ ಬೆಂಗಳೂರು ನಗರದ ವಿದ್ಯುತ್‌ ಪರಿಸ್ಥಿತಿ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನೂ ಬಿಡುಗಡೆ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X