ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮವೆನಲು ಹಾಸ್ಯವೇ ? ಛೇ ಛೇ, ಎಲ್ಲಾದರೂ ಉಂಟೇ !

By Staff
|
Google Oneindia Kannada News

(ಇಂಡಿಯಾ ಇನ್ಫೋ ಸಮೀಕ್ಷೆ)

ಭಾರತದಲ್ಲಿ ಪ್ರೇಮಿಗಳ ದಿನವೇ ? ಶಿವಶಿವ, ಅಪಚಾರ. ಅದೆಲ್ಲಾ ನಮ್ಮ ಸಂಸ್ಕೃತಿಗೆ ಹೊಂದುವಂಥದ್ದೇ ಅಲ್ಲ . ಎಂದು ಬಾಳಠಾಕ್ರೆ ಅಲವತ್ತುಕೊಂಡಿದ್ದರೂ, ಶಿವ ಸೈನಿಕರು ಬೀದಿಗಿಳಿವುದಾಗಿ ಎಚ್ಚರಿಸಿದ್ದರೂ, ಫೆ- 14 ರ ಪ್ರೇಮಿಗಳ ದಿನ ನಮ್ಮ ಮುಂದಿದೆ.

ಅದೆಲ್ಲಾ ಇರಲಿ. ಪ್ರೇಮಿಗಳ ದಿನ ನಮಗೆ ಬೇಕೆ? ಇದೇ ಪ್ರಶ್ನೆಯನ್ನು ಹೊತ್ತ ನಮ್ಮ ಬಾತ್ಮೀದಾರರು ಸಮಾಜದ ವಿವಿಧ ವರ್ಗ- ವಯೋಮಾನಗಳ ಜನರನ್ನು ಎಡತಾಕಿದಾಗ ದಕ್ಕಿದ್ದು ಅಷ್ಟೇ ಭಿನ್ನವಾದ ಅಭಿಪ್ರಾಯಗಳು. ಅಂದಹಾಗೆ, ಈ ಅಭಿಪ್ರಾಯ ಸಂಗ್ರಹ - ಪ್ರೇಮ, ಅದಕ್ಕೊಂದು ದಿನದ ಬಗ್ಗೆ ಜನ ಏನನ್ನುತ್ತಾರೆ ಅನ್ನುವ ಬಗ್ಗೆ ಜನರೊಂದಿಗೆ ಮಾತುಕತೆ ಮಾತ್ರ. ನಿಮ್ಮ ಪ್ರೇಮ ನಿಮ್ಮದು. ಅದರ ಆಚರಣೆಯೂ ನಿಮಗೇ ಸೇರಿದ್ದು . ಹ್ಞೂಂ ಅಥವಾ ಊಹ್ಞೂಂ . ಇವರು ಹೀಗೆನ್ನುತ್ತಾರೆ -

ಮಂಜುಳಾ, ವೈದ್ಯಕೀಯ ವಿದ್ಯಾರ್ಥಿನಿ : ನಮ್ಮ ಜನ ಪ್ರೇಮಿಗಳನ್ನು ಯಾವತ್ತು ಪ್ರೋತ್ಸಾಹಿಸಿದರು ಹೇಳಿ. ಗೋಡೆಗಳನ್ನು ಕಟ್ಟುವ ಕೆಲಸದಲ್ಲಿ ಅದೇನು ಸುಖವಿದೆಯೋ ಕಾಣೆ. ಇಷ್ಟಕ್ಕೂ ನಾನು ನನ್ನ ಪ್ರೇಮಿಯಾಂದಿಗೆ ಖುಷಿಯಾಗಿರಲಿಕ್ಕೆ ಒಂದು ಸಂದರ್ಭ, ನಮ್ಮ ಪ್ರೇಮವನ್ನ ನಿವೇದಿಸಿಕೊಳ್ಳಲಿಕ್ಕೆ ಒಂದು ಮುಹೂರ್ತ ಅಂತಿದ್ದರೆ ಅದಕ್ಕೆ ಅಡ್ಡಿಯಾಗಲಿಕ್ಕೆ ಇವರ್ಯಾರು? ಅದೇನೇ ಇರಲಿ ಬಿಡಿ. ನಾನಂತೂ ಯಾರಿಗೂ ಸೊಪ್ಪು ಹಾಕೋದಿಲ್ಲ . ನಿಮಗೆ ಗೊತ್ತಾ , ನನ್ನ ಹುಡುಗನ ಬೆರಳಿಗೆ ಹೊಂದುವಂಥಾ ಉಂಗುರ ತಂದಿದ್ದೀನಿ.

ರಾಮಕೃಷ್ಣ , ಮಾರಾಟ ಪ್ರತಿನಿಧಿ : ಬಿಡಿ ಸಾರ್‌, ಆ ಶಿವಸೇನೆಯವರು ಹೇಳೋದೆಲ್ಲ ಇಂಥಾದ್ದೆ . ಇಷ್ಟಕ್ಕೂ ಅವರ ಬೊಗಳೆ ಯಾರು ಕೇಳ್ತಾರೆ ಹೇಳಿ. ಅಲ್ಲಾ , ಹುತಾತ್ಮರಿಗೊಂದು ದಿನಾಚರಣೆ ಇರೋದಾದರೆ ಪ್ರೇಮಿಗಳಿಗ್ಯಾಕೆ ಒಂದು ಆಚರಣೆ ಬೇಡ. ಆದರೆ, ನನಗ್ಯಾರೂ ಪ್ರೇಮಿಯೇ ಇಲ್ಲ ಸಾರ್‌.

ಶಿವಕುಮಾರ್‌, ಆಟೋ ಡ್ರೆೃವರ್‌ : ನಾಳೆ ಬೆಳಕು ಹರಿದ್ರೆ ಹೊಟ್ಟೆಗೇನು ಅನ್ನುವಾಗ ಈ ಪ್ರೀತಿ.. ಎಲ್ಲಿ ಟೈಂ ಅಯ್ತೆ . ನಂಗಂತೂ ಇಂಥಾದ್ರಲ್ಲಿ ನಂಬಿಕೇನೆ ಇಲ್ಲ . ಬರ್ತೀನಿ ಸಾರ್‌. ಸ್ಕೂಲು ಬಿಡೋ ಹೊತ್ತಾಯ್ತು . ಮಕ್ಕಳನ್ನು ಪಿಕಪ್‌ ಮಾಡಬೇಕು.

ನಾಗಮ್ಮ , ಗೃಹಿಣಿ : ಪ್ರೇಮಿಗಳ ದಿನಾಚರಣೆಯ. ಏನು ಅಂಗಂದ್ರೆ. ಅದೇನು ಸ್ವಾತಂತ್ರ್ಯ ದಿನಾಚರಣೆ ಅಂಥಾದ್ದ ?

ರಾಧಾ, ಸಾಫ್ಟ್‌ವೇರ್‌ ಇಂಜಿನಿಯರ್‌ : ನಾನು ಮೊದಲೆಲ್ಲ ಪ್ರೀತಿ ಪ್ರೇಮ ಅಂದ್ರೆ ನಂಬ್ತಿರಲಿಲ್ಲ . ಅವರು ಪರಿಚಯವಾದರು ನೋಡಿ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಅನ್ನೋ ಹಾಡು ನನ್ನ ಪಾಲಿಗೆ ನಿಜ ಆಗಿದೆ. ಪ್ರೇಮಿಗಳ ದಿನದಂದು ಇಬ್ಬರೂ ಆಫೀಸ್‌ಗೆ ರಜಾ ಹಾಕಿ, ನಂದಿಬೆಟ್ಟಕ್ಕೆ ಹೋಗ್ತಿದೀವಿ.

ಬಾಲು, ಪದವೀಧರ, ಸದ್ಯಕ್ಕೆ ನಿರುದ್ಯೋಗಿ : ಪ್ರೀತಿ ಗೀತಿ ಎಲ್ಲ ಸುಳ್ಳು ಬಿಡಿ. ಈ ಹುಡ್ಗೀರ್ನ ಮಾತ್ರ ನಂಬಲೇಬಾರದು. ನಾನಂತೂ ಜೀವ ಹೋದ್ರೂ ಯಾವ ಹುಡ್ಗಿ ಬಲೇಗೂ ಬೀಳಲ್ಲ .

ಮಹಾಲಕ್ಷ್ಮಿ , ದ್ವಿತೀಯ ದರ್ಜೆ ಸಹಾಯಕಿ : ನೋ ಕಾಮೆಂಟ್ಸ್‌. ನನಗೆ ಮದುವೆ ಆಗಿದೆ.

ವೈಶಾಲಿ, ಪಿಯುಸಿ ವಿದ್ಯಾರ್ಥಿನಿ : ನಂಗೆ ಮದುವೆಗೆ ಮುಂಚಿನ ಪ್ರೀತಿಯಲ್ಲಿ ವಿಶ್ವಾಸವಿಲ್ಲ ಸಾರ್‌. ಮೊದಲು ಮದುವೆ, ಆಮೇಲಷ್ಟೆ ಪ್ರೀತಿ. ಆದ್ದರಿಂದ ಪ್ರೇಮಿಗಳ ದಿನ ನಂಗೆ ಅನ್ವಯಿಸೋದಿಲ್ಲ .

ಡಾ. ಆರ್‌. ವಿ. ಲಕ್ಷ್ಮೀಕಾಂತ್‌, ಸಮಾಜಶಾಸ್ತ್ರ ಉಪನ್ಯಾಸಕರು : ಪ್ರೇಮಿಗಳ ದಿನ ಭಾರತೀಯರಿಗೆ ಹೊಂದಿಕೊಳ್ಳೋದಿಲ್ಲ ಅನ್ನೊ ಮಾತನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಿಕ್ಕೆ ಸಾಧ್ಯವಿಲ್ಲ . ನಮ್ಮ ಸಂಸ್ಕೃತಿಯಲ್ಲಿ ಬರೋ ಹೋಲಿಹಬ್ಬದಲ್ಲಿ ಕಾಮನನ್ನು ಸುಟ್ಟರೆ, ವ್ಯಾಲೆಂಟೈನ್ಸ್‌ ಡೇ ಪ್ರೇಮದ ಹೆಸರಿನಲ್ಲಿ ಕಾಮವನ್ನು ಉತ್ತೇಜಿಸುತ್ತದೆ. ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಜಾಗತೀಕರಣ, ವ್ಯಾಪಾರಿ ತಂತ್ರಗಳೆಲ್ಲಾ ಇರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಷ್ಟಕ್ಕೂ ಪ್ರೇಮವನ್ನುವಂಥದ್ದು ಆಚರಿಸಿಕೊಳ್ಳುವಷ್ಟು ಸಾರ್ವಜನಿಕವೇ ಅನ್ನುವ ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕು.

ರಾಜು, ಗುತ್ತಿಗೆದಾರರು : ಯಾರಾದರೂ ಆಚರಿಸಬೇಕು ಅಂದ್ಕೊಂಡ್ರೆ ಆಚರಿಸ್ಕೋತಾರೆ ಬಿಡಿ. ಇಷ್ಟಕ್ಕೂ ಇಂಥಾ ಪ್ರಶ್ನೆಗಳ ಮೂಲಕ ಸಮಸ್ಯೆಯನ್ನು ಸೃಷ್ಟಿಸೋರು ಮಾಧ್ಯಮದವರೇ. ಇಂಥಾದ್ರಲ್ಲಿ ಅದೇನು ಖುಷಿ ನಿಮಗೆಲ್ಲ .

ಜಲಜಾಕ್ಷಿ , ಶಿಕ್ಷಕಿ : ವರ್ಷದ ಮುನ್ನೂರವತ್ತು ದಿನಗಳಲ್ಲಿ ಒಂದು ದಿನವನ್ನು ಪ್ರೇಮಿಗಳಿಗೆ ಬಿಟ್ಟು ಕೊಡಲಿಕ್ಕೆ ಏನೆಲ್ಲಾ ವಿವಾದವಪ್ಪ . ನಾನಂತೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಕೊಡ್ತೀನಿ. ನನ್ನ ಬಗ್ಗೆ ಹೇಳೋದಾದ್ರೆ, ಕಳೆದ ವರ್ಷ ಮದುವೆ ಆಗುವ ಮುನ್ನ , ನನ್ನ ಪ್ರೇಮಿಯಾಂದಿಗೆ (ಪ್ರಸ್ತುತ ಸಂಗಾತಿ) ಎರಡು ವ್ಯಾಲೆಂಟೈನ್ಸ್‌ ಡೇ ಆಚರಿಸಿಕೊಂಡಿದ್ದೀನಿ. ಅದೆಲ್ಲಾ ಮಧುರ ನೆನಪು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X