Get Updates
Get notified of breaking news, exclusive insights, and must-see stories!

ಮಾಜಿ ಸಚಿವ ಡಾ. ಜೀವರಾಜ ಆಳ್ವ ಅಂತ್ಯಕ್ರಿಯೆ ಇಂದು

ಬೆಂಗಳೂರು : ರಾಜಕೀಯ ಸಂಘಟನಾ ಚತುರ, ಸಂಯುಕ್ತ ಜನತಾದಳದ ಹಿರಿಯ ಮುಖಂಡ ಜೀವರಾಜ ಆಳ್ವ ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಆಳ್ವ ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಗ ಆದಿತ್ಯಾ ಆಳ್ವ ಹಾಗೂ ಮಗಳು ಪ್ರಿಯಾಂಕಾ ಆಳ್ವ ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಡಾ. ಜೀವರಾಜ ಆಳ್ವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಸದಾಶಿವನಗರದ ಮನೆಯಲ್ಲಿ ಇಡಲಾಗಿದೆ. ಮಂಗಳವಾರ ಸಂಜೆ ಆರ್‌.ಟಿ. ನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಳ್ವ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಭಾನುವಾರ ಅವರನ್ನು ನಗರದ ಮಣಿಪಾಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆಳ್ವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ರಾಜ್ಯದ ಹಿರಿಯ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ವಿಮಾನ ಯಾನ ಸಚಿವ ಯಾದವ್‌, ಕೈಗಾರಿಕಾ ಸಚಿವ ದೇಶಪಾಂಡೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊದಲಾದವರು ಸೋಮವಾರ ಬೆಳಗ್ಗೆಯೇ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಜೀವರಾಜ ಆಳ್ವರ ಪರಿಚಯ: ಯುವಜನ ಮುಖಂಡ ಎಂದೇ ಖ್ಯಾತಿ ಗಳಿಸಿದ್ದ ಜೀವರಾಜ ಆಳ್ವ ಹುಟ್ಟಿದ್ದು 1947ರ ಏಪ್ರಿಲ್‌ 18ರಂದು. ಮಂಗಳೂರಿನಲ್ಲಿ ಜನಿಸಿದ ಆಳ್ವ ವಿದ್ಯಾರ್ಥಿ ದೆಶೆಯಲ್ಲೇ, ವಿದ್ಯಾರ್ಥಿ ಪರಿಷತ್ತಿನ ಮೂಲಕ ಜನಮನ್ನಣೆ ಗಳಿಸಿದರು. ಅವರ ರಾಜಕೀಯ ಪ್ರವೇಶ ಆಕಸ್ಮಿಕವೇನಲ್ಲ. ವೈದ್ಯಕೀಯ ಪದವೀಧರರಾದ ಆಳ್ವ ಓದಿದ್ದು ಸೇಂಟ್‌ ಜಾನ್ಸ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ.

ಲೋಕನಾಯಕ ಜಯಪ್ರಕಾಶ ನಾರಾಯಣ್‌ ಅವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶಿಸಿದ ಆಳ್ವ ಅವಿಭಜಿತ ಕರ್ನಾಟಕ ಜನತಾ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಆಳ್ವ ಪಕ್ಷವನ್ನು ಕಟ್ಟಿ ಬೆಳೆಸಲು ಹೋರಾಟವನ್ನೇ ನಡೆಸಿದ್ದರು.

ಕಲೆ, ಸಾಹಿತ್ಯ, ನಾಟಕವೇ ಮೊದಲಾದ ಸಾಂಸ್ಕೃತಿಕ ರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದ ಜೀವರಾಜ ಆಳ್ವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನ ಜಯಮಹಲ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಆಳ್ವ ಮೂರು ಬಾರಿ ವಿಧಾನಸಭೆಗೆ ಅದೇ ಕ್ಷೇತ್ರದಿಂದ ಆರಿಸಿಬಂದಿದ್ದರು.

ಕನ್ನಡ ಮತ್ತು ಸಂಸ್ಕೃತಿ ಖಾತೆ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾಗಿ, ಶಿಕ್ಷಣ ಸಚಿವರಾಗಿ ಜನಮನ್ನಣೆ ಗಳಿಸಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ಆಳ್ವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತೇಷ್ಟರಲ್ಲಿ ಒಬ್ಬರಾಗಿದ್ದರು. ದಳ ಒಡೆದು ಚೂರು ಚೂರಾಗಿದ್ದಾಗ ಅದನ್ನು ಮತ್ತೆ ಒಂದುಗೂಡಿಸುವ ಮೂಲಕ ಸಂಘಟನಾ ಚತುರ ಎಂದೇ ಹೆಸರು ಗಳಿಸಿದ ಆಳ್ವ ಕೆಲ ಕಾಲ ಬಿ.ಜೆ.ಪಿಯನ್ನೂ ಸೇರಿದ್ದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+