ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣತಿ ಮತ್ತು ಧರ್ಮಜಾಗೃತಿ!

By Staff
|
Google Oneindia Kannada News

*ಆರ್‌.ಕೆ. ದಿವಾಕರ

ಧರ್ಮಕ್ಕೂ, ಜನಗಣತಿಯಲ್ಲಿ ಹೆಸರು ಬರೆಸುವುದಕ್ಕೂ ಸಹಜವಾದ ಸಂಬಂಧವೇನೂ ಇರಬೇಕಾದ್ದಿಲ್ಲ. ಒಳ ಉದ್ದೇಶವೇನಾದರೂ ಇದ್ದರೆ ಅಂಥದೊಂದು ಸಂಬಂಧ ಉಂಟು ಮಾಡುವುದು ಅಸಾಧ್ಯವೂ ಅಲ್ಲ. ಆದರೆ ಅನುಯಾಯಿಗಳಿಗೂ ಆ ಉದ್ದೇಶದ ಆಳ ಅಗಲ ಮತ್ತು ಸುಳಿ ವೇಗಗಳ ಅರಿವಿದ್ದರೆ ಒಳ್ಳೆಯದೇನೋ.

ಧರ್ಮವೂ, ಧರ್ಮದ್ದೆನ್ನಲಾಗುವ ವಿಶಿಷ್ಟ ಸಾಮಾಜಿಕ ಕಟ್ಟುಪಾಡಿನ ಆಚಾರವಂತ ಸಮುದಾಯವೂ, ಚಿಂತನೆಯ ನೆಲಗಟ್ಟಿನಿಂದ ನೋಡಿದರೆ ಬೇರೆ ಬೇರೆಯೇ. ಜಾತಿ ಅಥವಾ ಸಮುದಾಯ, ವರ್ತನೆ- ಆಚರಣೆ- ಲೌಕಿಕ ವೃತ್ತಿ ಇತ್ಯಾದಿ ವಿಶಿಷ್ಟತೆಯಿಂದ ಪ್ರತ್ಯೇಕ ಸ್ವಂತಿಕೆ ಹೊಂದಿ ಕಾಣಿಸಿಕೊಳ್ಳುವಂಥವು. ಆ ಆಚಾರ ಇರಸಣಿಕೆಗಳಿಗೆ ಇರುವ ಅಥವಾ ಆರೋಪಿಸುವ ಅರ್ಥ ಮತ್ತು ತತ್ವ ಜ್ಞಾನ ಧರ್ಮವೆನಿಸುತ್ತದೆ. ಧರ್ಮವೆನ್ನುವುದು ಜ್ಞಾನವಾದ್ದರಿಂದ ಅದಕ್ಕೆ ಅಪಮಾರ್ಗ, ವಾಮಾಚಾರಗಳಿರುವುದಿಲ್ಲ. ಅದು ತರ್ಕಕ್ಕೊಳಪಡುತ್ತದೆ. ಸತ್ಯವನ್ನೊಪ್ಪುತ್ತದೆ. ಒಪ್ಪುವ ಮುನ್ನ ವಾದ - ವಿವಾದಗಳಾಗುತ್ತವಾದರೂ ಕಾಲೆಳೆಯುವ ಲೌಕಿಕ ‘ಕ್ರೀ’ ಮಟ್ಟಕ್ಕೆ ಅದು ಇಳಿಯಬೇಕಾದ್ದಿಲ್ಲ. ವಿತಂಡವನ್ನೇ ಉಸಿರಾಗಿ ಸ್ವೀಕರಿಸುವುದೇನಿದ್ದರೂ ಲೌಕಿಕವಾದ vested ಹಿತಾಸಕ್ತಿ !

ಇಂತಹ ಆಸಕ್ತಿಗಳು ಸಮಾಜವನ್ನು ಸ್ವಾರ್ಥಕ್ಕಾಗಿ ಒಡೆಯುತ್ತವೆನ್ನುವುದೇನೋ ನಿಜ. ಹಾಗೆ ಒಡೆಯಬಾರದೆನ್ನುವುದು ಆದರ್ಶ. ಆದರೆ ಕೂದಲೆಳೆಯಂತೆ ಸೀಳು ಬಿಡಿಸುವುದು ಸುಸೂಕ್ಷ್ಮ ಜ್ಞಾನವೆಂಬ ಮೌಲ್ಯ ಮನ್ನಣೆ ಪಡೆಯುತ್ತಿರುವಾಗ, ಅದೇ ಸಾಮಾಜಿಕ ನ್ಯಾಯವೆಂದು ಹುಲಿಚರ್ಮ ಹೊದ್ದು ಬರುತ್ತಿರುವಾಗ, ಬೆಕ್ಕೊಂದು ಕಣ್ಮುಚ್ಚಿ ಹಾಲು ಹಿರಿದರೆ, ಸುತ್ತಲ ಕುರುಡು ಸಮಾಜ ಆ ಲೊಚಗುಟ್ಟುವಿಕೆಗೇ ಭೇಷ್‌ ಎನ್ನುತ್ತಿರುವಾಗ... ಆಲೋಚನೆಯುಳ್ಳ ಜನ ಸಾಮಾನ್ಯ, ಇಹ ಜೀವನದ ಈ ಲೌಕಿಕ ಮೌಲ್ಯ ಹಿಡಿಯಬೇಕೋ ? ಅಥವಾ ಮಾನವ ಧರ್ಮ, ವಿಶ್ವ ಕಲ್ಯಾಣ ಇತ್ಯಾದಿ ಅಮೂರ್ತ ಧರ್ಮ ಪಾಲಿಸಬೇಕೋ ?

ದೇಶದ ಚಿಂತನ ಶೀಲತೆ, ಆಗಿಂದಾಗ್ಗೆ, ಬ್ರಾಹ್ಮಣವಾಗಿ-ಬೌದ್ಧಿಕವಾಗಿ- ವೀರಶೈವವಾಗಿ- ಲಿಂಗಾಯತವಾಗಿ- ನವಜಾಗೃತಿಯಾಗಿ, ಪ್ರತಿಹಂತದಲ್ಲೂ ಹೊಸ ತಳಿ-ಮಿಶ್ರ ತಳಿ ಜಾತಿ-ಪಂಗಡಗಳನ್ನು ಹುಟ್ಟಿ ಹಾಕುತ್ತಾ ಕ್ಷಣ ಜಾಗೃತಿ-ಸುದೀರ್ಘ ಸುಷುಪ್ತಿಗಳನ್ನು ತೋರಿಸುತ್ತಾ ಬಂದಿರುವುದು ಈ ಕ್ರಾಂತಿ-ಭ್ರಾಂತಿಗಳಿಗೆ ಕಾರಣ. ಸದ್ಯ ನಾವು ಕ್ರಾಂತಿ ಅಂದರೆ ಜಾಗೃತಿ ಅಥವಾ ಭ್ರಾಂತಿ ಅಂದರೆ ಸುಷುಪ್ತಿ ಅವಸ್ಥೆಯಲ್ಲಿದ್ದೇವೆಯೋ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಾಗಿದೆ !

ಐಕ್ಯ Identity, ಧರ್ಮ ಸಮಗ್ರತೆಗಳನ್ನು ಪ್ರತಿಪಾದಿಸುವ ಹಿರಿಯಣ್ಣಗಳಿಗೆ ಚಿಂತನೆಯ ಈ ಹಂತದಲ್ಲೊಂದು ಮನವಿ. ಜನಗಣತಿಯಲ್ಲಿ ಯಾರು ಎಷ್ಟು ಬೇಕಾದರೂ ಪ್ರತ್ಯೇಕತೆ ಬರೆಸಿಕೊಳ್ಳಲಿ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಆದರೆ ಅದರ ಪರಿಣಾಮವನ್ನು-ಅಂದರೆ-ದೇಶದ ತಲೆ ಸಹಸ್ರ ಹೋಳಾಗಿ ಒಡೆದು ಹೋಗುವುದನ್ನು-ಸಂಪನ್ಮೂಲ ಛಿಧ್ರ-ವಿಚ್ಛಿಧ್ರವಾಗಿ ನಿಷ್ಪ್ರಯೋಜಕವಾಗುವುದನ್ನು-ತಡೆಗಟ್ಟುವಂತೆ ಮತ್ತು ಸಮಾನತೆ, ಸಹಕಾರ, ಸಹಬಾಳ್ವೆ ಸಮಗ್ರವೂ, ಅನಿವಾರ್ಯವೂ ಆಗುವಂತೆ ಚುನಾವಣಾ ಪದ್ಧತಿ ಸುಧಾರಿಸುವ ನೈತಿಕ ಹೊಣೆಗಾರಿಕೆಯನ್ನು ಇವರು ವಹಿಸಿಕೊಳ್ಳಬಾರದೇಕೆ ? ತಮ್ಮೆಲ್ಲ ಧರ್ಮಜ್ಞಾನ, ಧೀಶಕ್ತಿ, ಹಿರಿತನದ ಸ್ಥಾನ- ಹಿತೋಕ್ತಿಗಳ ನ್ನು ಆ ದಿಸೆಯಲ್ಲಿ ಮೀಸಲಿಡಬಾರದೇಕೆ ?

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X