ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನಂಗಳದಲ್ಲಿ ಹಾರು ಹಕ್ಕಿಗಳ ಅತ್ಯದ್ಭುತ ಚಮತ್ಕಾರ ಆರಂಭ

By Staff
|
Google Oneindia Kannada News

ಬೆಂಗಳೂರು : ಬಾನಂಗಳದಿ ಮಾನವ ನಿರ್ಮಿತ ಹಾರು ಹಕ್ಕಿಗಳ ಚಮತ್ಕಾರ. ಕಾಲು ಕಿಲೋ ಮೀಟರ್‌ಗಿಂತಲೂ ಕಡಿಮೆಯಾದ ರನ್‌ವೇಯಲ್ಲಿ ಬಂದು ಒಮ್ಮೆಲೆ ಗಗನಕ್ಕೆ ರ್ಯಾಕೆಟ್‌ನಂತೆ ಚಿಮ್ಮಿದ 19 ಪ್ರಯಾಣಿಕರು ಹಾಗೂ 2 ಟನ್‌ ಸರಕು ಸಾಗಿಸುವ ಸಾಮರ್ಥ್ಯದ ಪೋಲೆಂಡ್‌ ನಿರ್ಮಿತ ವಿಮಾನದ ಅದ್ಭುತ ಚಮತ್ಕಾರ.

ರಕ್ಷಣಾ ಇಲಾಖೆಯ ಹಾಗೂ ಲಘು ವಿಮಾನಗಳು ತಮ್ಮ ಕೌಶಲ ಮೆರೆದವು. ಎರಡು ವರ್ಷಕ್ಕೊಮ್ಮೆ ರಾಷ್ಟ್ರದ ಆಯ್ದ ನಾಲ್ಕು ಕೇಂದ್ರಗಳಲ್ಲಿ ಮಾತ್ರ ನಡೆಯುವ ಈ ಪ್ರದರ್ಶನದಲ್ಲಿ ‘ಸೂರ್ಯ ಕಿರಣದ’ ಪ್ರದರ್ಶನವಂತೂ ಸಭಿಕರನ್ನು ಮೂಕವಿಸ್ಮಿತಗೊಳಿಸಿತು. ಗಂಟೆಗೆ 540 ಕಿ.ಮೀಟರ್‌ ವೇಗದಲ್ಲಿ ಚಲಿಸುವ ಈ ವಿಮಾನ, ಏಕ ಕಾಲದಲ್ಲಿ 9 ವಿಮಾನಗಳು ಕೇವಲ 5 ಮೀಟರ್‌ ಅಂತರದಲ್ಲಿ ಕ್ರಮಿಸಿ, ತಿರುಗಿ, ದಟ್ಟ ಧೂಮವನ್ನುಗುಳುತ್ತಾ ಬಾನಂಗಳದಲ್ಲಿ ಚಿತ್ತಾರವನ್ನೇ ಬರೆದವು.

ಜಾಗ್ವಾರ್‌ ವಿಮಾನಗಳ ನಯನ ಮನೋಹರ ಕಸರತ್ತು. ರಷ್ಯದ ಸುಖೋಯ್‌ನ ಅತ್ಯದ್ಭುತ ಚಮತ್ಕಾರ. ನೆರೆದಿದ್ದ ಸಾವಿರಾರು ಪ್ರೇಕ್ಷಕರ ಭಾರಿ ಕರತಾಡನ. ಇದು ಬುಧವಾರ ಬೆಂಗಳೂರಿನ ಯಲಹಂಕದಲ್ಲಿ ಆರಂಭವಾದ ಏರೋ ಇಂಡಿಯಾ 2001ರ ಆಕರ್ಷಣೆಗಳು.

ಬುಧವಾರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಕೇಂದ್ರದ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಈ ವೈಮಾನಿಕ ಪ್ರದರ್ಶನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಭಾರತೀಯ ವಿನ್ಯಾಸದ, ಭಾರತೀಯ ಅನುಕೂಲತೆಗಳಿಗೆ ಹೊಂದುವಂತಹ ವಿಮಾನ ತಯಾರಿಕೆಗೆ ಆಹ್ವಾನ ನೀಡಿದರು. ಭಾರತದಲ್ಲಿ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ನಮೂನೆಯ, ವಿನ್ಯಾಸದ ಹಾಗೂ ಬಹು ಉಪಯೋಗಿ ವಿಮಾನ ನಿರ್ಮಾಣಕ್ಕೆ ಕರೆ ನೀಡಿದರು.

ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಇಂತಹ ಒಂದು ಅಂತಾರಾಷ್ಟ್ರೀಯ ಪ್ರದರ್ಶನ ನಡೆಯುತ್ತಿರುವಾಗ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಪಾಲ್ಗೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ತಯಾರಾದ ಎಲ್‌.ಸಿ.ಎ. ಅಂತಾರಾಷ್ಟ್ರೀಯ ಮಟ್ಟದ ವಿಮಾನವಾಗಿದ್ದು, ಅತ್ಯಾಧುನಿಕವಾಗಿಯೂ ಇದೆ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಶರದ್‌ ಯಾದವ್‌ ಅವರು, ಖಾಸಗಿ ಪಾಲುದಾರಿಕೆಗೆ ಇಂಬುನೀಡುವ ವಿಮಾನ ನೀತಿಯನ್ನು ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಎಲ್ಲ ವಿಮಾನ ನಿಲ್ದಾಣಗಳಲ್ಲೂ ವಿಮಾನಗಳ ರಕ್ಷಣೆಗೆ ಹಾಗೂ ಸುರಕ್ಷತೆಗೆ ರೆಡಾರ್‌ ವ್ಯವಸ್ಥೆ ಮಾಡಲಾಗುವುದು ಎಂದರು. ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಎಚ್‌.ಎ.ಎಲ್‌. ಹಾಗೂ ನಾಗರಿಕ ವಿಮಾನ ಯಾನ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಬಸ್‌ : ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ದೇಶ ವಿದೇಶಗಳ 151 ಕಂಪನಿಗಳು ಪಾಲ್ಗೊಂಡಿರುವ ಈ ಪ್ರದರ್ಶನ ಯಲಹಂಕದಲ್ಲಿ ಬುಧವಾರದಿಂದ ಭಾನುವಾರದವರೆಗೆ (ಫೆ.7ರಿಂದ ಫೆ.11) ನಡೆಯಲಿದೆ. ವಿಮಾನ ಹಾರಟ ವೀಕ್ಷಿಸ ಬಯಸುವ ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಬಸ್‌ ಸಂಚಾರ ಸೌಲಭ್ಯ ಒದಗಿಸಿದೆ.

ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌), ಕೆ.ಆರ್‌. ಮಾರ್ಕೆಟ್‌, ಶಿವಾಜಿನಗರದಿಂದ ಯಲಹಂಕ ವಾಯುಪಡೆ ವೈಮಾನಿಕ ಕೇಂದ್ರಕ್ಕೆ ವಿಶೇಷ ಬಸ್‌ ಸೌಕರ್ಯ ಒದಗಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X