ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಲ ಗಗನದಲಿ ವಿಮಾನಗಳ ರಂಗೋಲಿ

By Staff
|
Google Oneindia Kannada News

ಬೆಂಗಳೂರು : ಆಗೊಂದು ಈಗೊಂದು ವಿಮಾನಗಳ ಹಾರಾಟಕ್ಕೆ ಸಾಕ್ಷಿಯಾಗುವ, ತರಪೇತು ಪೈಲಟ್‌ಗಳಿಗೆ ಅಭ್ಯಾಸದ ಅಂಗಳವಾಗುವ ಜಕ್ಕೂರು ವಿಮಾನ ಹಾರಾಟ ಮೈದಾನದಲ್ಲೀಗ ಹಬ್ಬದ ಸಡಗರ. ಬುಧವಾರ (ಫೆ.7) ಅಲ್ಲಿ ವಿಮಾನ ಹಾರಾಟದ ಹಬ್ಬ ಏರೊ ಇಂಡಿಯಾ - 2001 ಕ್ಕೆ ಚಾಲನೆಯ ಮುಹೂರ್ತ.

ವಿವಿಧೋದ್ದೇಶ ಬಳಕೆಯ ಲಘು ಯುದ್ಧ ವಿಮಾನ (ಎಲ್‌ಸಿಎ), ಮನುಷ್ಯ ರಹಿತ ವಾಹನ (ಯುಎವಿ) ನಿಶಾಂತ್‌, ಭಾರತೀಯ ವಾಯುಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡ ಸುಖೋಯ್‌- 30 ಎಂಕೆಐ ಸೇರಿದಂತೆ ವಿವಿಧ ಗಾಳಿಮರಿಗಳು ರೇಸಿಗೆ ಸಿದ್ಧವಾಗಿ ನಿಂತಿವೆ.

ಎಲ್ಲರ ಕಣ್ಣಿನ ಕಾತರ , ಎಲ್‌ಸಿಎ- ನಿಶಾಂತ್‌ : ದೀರ್ಘಕಾಲದಿಂದ ಇದೋ ಬಂದೆ ಎಂದು ಗುಮ್ಮನಾಗಿ ಕಾಡುತ್ತ ಮೊನ್ನಿನ ಜನವರಿ 4 ರಂದು ಆಕಾಶದಲ್ಲಿ ಅಸ್ತಿತ್ವ ಪ್ರಕಟಿಸಿದ ಎಲ್‌ಸಿಎ, ಉದ್ಘಾಟನಾ ದಿನದಂದೆ (ಫೆ.7) ನೋಡುಗರ ಕಣ್ಮನಗಳಿಗೆ ಲಗ್ಗೆ ಹಾಕಲಿದೆ. ಮುಂದಿನ 6 ವರ್ಷಗಳಲ್ಲಿ ಭಾರತೀಯ ವಾಯುಪಡೆಯನ್ನು ಬಲಪಡಿಸುತ್ತದೆಂದು ನಂಬಲಾಗಿರುವ ಎಲ್‌ಸಿಎಯನ್ನು ಅಭಿವೃದ್ಧಿಪಡಿಸುವಲ್ಲಿ ರಷ್ಯಾ ಕೂಡ ಕೈ ಜೋಡಿಸಿದೆ.

ರೇಸಿನಲ್ಲಿ ಭಾಗಿಯಾಗುವ ಮತ್ತೊಂದು ಪ್ರಮುಖ ವಿಮಾನ ನಿಶಾಂತ್‌. ಚಾಲಕ ರಹಿತ ವಾಹನ ಅನ್ನುವುದು ಅದರ ವೈಶಿಷ್ಟ್ಯ. ಇತ್ತೀಚೆಗಷ್ಟೇ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಮುಂದೆ ತನ್ನ ಪರಾಕ್ರಮ ಪ್ರದರ್ಶಿಸಿದ್ದ ನಿಶಾಂತನನ್ನು ಸದ್ಯದಲ್ಲೇ ವಾಯುಪಡೆಗೆ ಸೇರಿಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವರು ಹೇಳಿದ್ದರು. ರೇಸು ನಡೆಯುವ ನಾಲ್ಕೂ ದಿನ ನಿಶಾಂತ್‌ ಹಾರಲಿದ್ದಾನೆ.

ಹಾರಾಟದ ತುರುಸಿನಲ್ಲಿ ವಿದೇಶಿ ಗಾಳಿಮರಿಗಳು : ಬುಧವಾರದಿಂದ ಶನಿವಾರದವರೆಗೆ ಉಸಿರು ಬಿಗಿ ಹಿಡಿಸುವ ರೋಮಾಂಚನದ ಏರ್‌ ರೇಸನ್ನು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಉದ್ಘಾಟಿಸುವರು. ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ ಇತ್ತೀಚಿನ ಹಗುರ ವಿಮಾನದೊಂದಿಗೆ ರಷ್ಯಾದ ಮಿಗ್‌ 29ಕೆ, ಇಸ್ರೇಲ್‌ನ ಎಂಐ 8 ಹಾಗೂ ಜರ್ಮನಿ, ಪೋಲೆಂಡ್‌, ಫ್ರಾನ್ಸ್‌ (ಭಾರತಕ್ಕೆ ಮಿರೇಜ್‌ 2000 ವಿಮಾನ ಒದಗಿಸಿದೆ), ಇಂಗ್ಲೆಂಡಿನ ಹಗುರ ವಿಮಾನಗಳು ಹಾರುಹಬ್ಬದಲ್ಲಿ ಭಾಗಿಯಾಗುವವು. ಭಾರತೀಯ ವಾಯುಪಡೆ, ಎಚ್‌ಎಎಲ್‌ಗಳಿಗೆ ಸೇರಿದ 35 ಗಾಳಿಮರಿಗಳು ಆಕಾಶದಲ್ಲಿ ಓಡಲಿವೆ.

ಹಬ್ಬ ಮಾತ್ರವಲ್ಲ ವ್ಯಾಪಾರವೂ : ಹಬ್ಬ ವಿಮಾನಗಳ ಹಾರಾಟಕ್ಕೆ ಮಾತ್ರವಲ್ಲದೆ, 19 ದೇಶಗಳಿಗೆ ಸೇರಿದ ಸುಮಾರು 125 ಕಂಪನಿಗಳು ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದ ತಮ್ಮ ಅತ್ಯಾಧುನಿಕ ಉತ್ಪನ್ನಗಳ ಪ್ರದರ್ಶನಕ್ಕೂ ವೇದಿಕೆಯಾಗಲಿದೆ. ಉತ್ಸವದ ಮೊದಲ ಮೂರು ದಿನಗಳಂತೂ ಉದ್ಯಮಿಗಳದ್ದೇ ಕಾರುಬಾರು. ಈ ಸಂದರ್ಭಕ್ಕೆ ಸಾಕ್ಷಿಯಾಗಲು ಸುಮಾರು 50 ವಿದೇಶಿ ನಿಯೋಗಗಳನ್ನು ನಿರೀಕ್ಷಿಸಲಾಗಿದೆ. ಈ ಪೈಕಿ 40 ಬಾಹ್ಯಾಕಾಶ ಸಂಸ್ಥೆಗಳು ಭಾಗವಹಿಸುವ ಇಂಗ್ಲೆಂಡ್‌ನದ್ದೇ ಸಿಂಹಪಾಲು. ಬ್ರಿಟನ್‌ನ ಎರಡು ಟೊರಾಂಡೊ ಜೆಟ್‌, ಒಂದು ವಿಸಿ 10 ಟ್ಯಾಂಕರ್‌, ಎರಡು ಹರ್ಕ್ಯುಲಸ್‌ ಟ್ರಾನ್ಸ್‌ಪೋರ್ಟ್ಸ್‌ಗಳು ಪ್ರದರ್ಶನಗೊಳ್ಳಲಿವೆ.

ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಏರ್ಪಾಟಾಗಿರುವ ಹಾರುಹಬ್ಬಕ್ಕೆ ಕೈ ಜೋಡಿಸಿರುವ ಇತರರು - ನಾಗರಿಕ ವಿಮಾನಯಾನ ಸಚಿವಾಲಯ, ಬಾಹ್ಯಾಕಾಶ ಇಲಾಖೆ, ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ , ರಕ್ಷಣಾ ಸಾರ್ವಜನಿಕ ವಲಯದ ಘಟಕಗಳು. ಭಾರತದ ಪ್ರದರ್ಶಕರ ನೇತೃತ್ವವನ್ನು ಎಚ್‌ಎಎಲ್‌ ವಹಿಸುವುದು.

ವಿಚಾರ ಸಂಕಿರಣ : ಏರ್‌ಷೋ ಅಂಗವಾಗಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗಿದೆ. ಟ್ರೆಂಡ್‌ಗಳು, ಹೊಸ ಶೋಧಗಳು, ವಿನ್ಯಾಸ, ದ್ವಿಪಕ್ಷೀಯ ಹಾಗೂ ಬಹು ಪಕ್ಷೀಯ ಒಪ್ಪಂದಗಳು ಕುರಿತಂತೆ ಸಂಕಿರಣ ಬೆಳಕು ಚೆಲ್ಲುವುದು. ಬೆಲ್ಜಿಯಂ, ಕೆನಡಾ, ಫ್ರಾನ್ಸ್‌ , ಜರ್ಮನಿ, ರಷ್ಯಾ, ಬ್ರಿಟನ್‌, ಅಮೆರಿಕ, ಇಸ್ರೇಲ್‌ ಸೇರಿದಂತೆ 70 ಭಾಷಣಕಾರರು ಭಾಗವಹಿಸಲಿರುವ ಸಂಕಿರಣವನ್ನು ಫೆ. 8 ರಂದು ರಕ್ಷಣಾ ಸಚಿವ ಫರ್ನಾಂಡಿಸ್‌ ಉದ್ಘಾಟಿಸುವರು.

ಏರೊ ಇಂಡಿಯಾ- 2001, ಭಾರತದ ವೈಮಾನಿಕ ಶ್ರೇಷ್ಠತೆಯ ಪ್ರದರ್ಶನದ ವೇದಿಕೆ ಮಾತ್ರವಲ್ಲದೆ ವಾಣಿಜ್ಯ ಒಡಂಬಡಿಕೆಗಳ ತಾಣವೂ ಹೌದು. ಬರೀ ಐಟಿ ಮೇಳಗಳನ್ನೆ ಕಂಡ ಬೆಂಗಳೂರಿನ ಜನತೆಗಿದು ಮರೆಯ ಬಾರದ ಹಾರುಹಬ್ಬ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X